ಮಾಯಾ ಮಧ್ಯಾಹ್ನದ ವೇಳೆ ಹಳೆಯ ಅಲ್ಯೂಮಿನಿಯಂ ಪಾತ್ರೆಯಿಂದ ಅಳಿದುಳಿದ ಅನ್ನವನ್ನು ಊಟಕ್ಕೆ ಬಡಿಸಿಕೊಳ್ಳುತ್ತಿದ್ದರು. ಇದು ಅವರ ಪಾಲಿನ ದಿನದ ಏಕೈಕ ಊಟವಾಗಿತ್ತು. ಈಗ ಕಡಾಯಿಯಲ್ಲಿ ಅವರಿಗೆ ಮತ್ತು ಪತಿ ಶಿವ ಪಾಲಿಗೆ ಮಸೂರ್ ದಾಲ್ (ಬೇಳೆ ಕಾಳು) ಕೂಡ ಉಳಿದಿಲ್ಲ.
“ನಾವು ಒಂದೇ ಹೊತ್ತು ಊಟ ಮಾಡುತ್ತೇವೆ, ಆದರೆ ನಮ್ಮ ಮಕ್ಕಳಿಗೆ ಎರಡು ಬಾರಿ ಅಡುಗೆ ಮಾಡುತ್ತೇವೆ. ಆ ಮೂಲಕ ನಾವು ಅವರು ಸಾಕಾಗುವಷ್ಟು ತಿನ್ನುತ್ತಾರೆ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳುತ್ತೇವೆ” ಎಂದು 23 ವರ್ಷದ ಮಾಯಾ ಹೇಳುತ್ತಾರೆ. "ಕೊರೊನಾ ಮಹಾಮಾರಿ ಶುರುವಾದಾಗಿನಿಂದ ನಾವು ಕಡಿಮೆ ಪ್ರಮಾಣದಲ್ಲಿ ರೇಷನ್ ಸಾಮಾನುಗಳನ್ನು ಖರೀದಿಸುತ್ತಿದ್ದೇವೆ" ಎಂದು 25 ವರ್ಷದ ಶಿವ, ತಮ್ಮ ಬಿದಿರಿನ ಗುಡಿಸಲಿನ ಹೊರಗೆ ಕುಳಿತು ಹೇಳುತ್ತಿದ್ದರು. ಅದರ ಗೋಡೆಗಳು ಮತ್ತು ಮೇಲ್ಛಾವಣಿಯು ಹಳೆಯ ಸೀರೆಗಳು ಮತ್ತು ಪ್ಲಾಸ್ಟಿಕ್ ಶೀಟ್ ಗಳಿಂದ ಮುಚ್ಚಲ್ಪಟ್ಟಿದೆ.
ಮಾರ್ಚ್ 2020ರಲ್ಲಿ ಕೊರೊನಾ ಸಂಬಂಧಿತ ಲಾಕ್‌ಡೌನ್‌ಗಳು ಪ್ರಾರಂಭವಾದಾಗಿನಿಂದ, ಮಾಯಾ ಮತ್ತು ಶಿವ ಗಂದಡೆ ಅವರು ಈಗ ತಮ್ಮನ್ನು ಮತ್ತು 2ರಿಂದ 7 ವರ್ಷದೊಳಗಿನ ತಮ್ಮ ನಾಲ್ಕು ಮಕ್ಕಳನ್ನು ಪೋಷಿಸಲು ಹೆಣಗಾಡುತ್ತಿದ್ದಾರೆ.
ಬಯಲು ಪ್ರದೇಶದಲ್ಲಿ ಅವರ ತಾತ್ಕಾಲಿಕ ಗುಡಿಸಲು ಬೀಡ್ ಜಿಲ್ಲೆಯ ಬೀಡ್ ತಾಲೂಕಿನ ಅವರ ನೆಲೆಗಳಿಗೆ ಸಮೀಪವಿರುವ ಗ್ರಾಮವಾದ ಪಂಢರ್ಯಾಚಿವಾಡಿಯಿಂದ ಸುಮಾರು 6ರಿಂದ 7 ಕಿಲೋಮೀಟರ್ ದೂರದಲ್ಲಿದೆ. ಮಳೆ ಬಂದಾಗ, ಬಣ್ಣಬಣ್ಣದ ರಂಧ್ರಗಳ ಗೋಡೆಗಳು ಮತ್ತು ಛಾವಣಿಯ ಮೂಲಕ ನೀರು ಜಿನುಗುತ್ತದೆ.
ಬಯಲಿನಲ್ಲಿರುವ 14 ಗುಡಿಸಲುಗಳು ಸಾಂಪ್ರದಾಯಿಕವಾಗಿ ಭಿಕ್ಷೆ ಬೇಡುವ ಅಲೆಮಾರಿ ಬುಡಕಟ್ಟು (ಮಹಾರಾಷ್ಟ್ರದಲ್ಲಿ ಒಬಿಸಿ ಎಂದು ಪಟ್ಟಿ ಮಾಡಲಾಗಿದೆ) ಮಸಣಜೋಗಿ ಸಮುದಾಯದ ಕುಟುಂಬಗಳಿಗೆ ನೆಲೆಯಾಗಿದೆ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಕೆಲಸ ಮತ್ತು ಕೂಲಿಗಾಗಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ರಾಜ್ಯದ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವಲಸೆಹೋಗುತ್ತಾರೆ.
ಅವರಲ್ಲಿ ಹಲವರು ಈಗ ತ್ಯಾಜ್ಯ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.ಮಹಿಳೆಯರು ಸಾಮಾನ್ಯವಾಗಿ ವಿವಿಧ ಗ್ರಾಮಗಳಿಂದ ಕೂದಲು ಮತ್ತು ಹಳೆಯ ಬಟ್ಟೆಗಳನ್ನು ಮರುಬಳಕೆಗಾಗಿ ಸಂಗ್ರಹಿಸುತ್ತಾರೆ ಮತ್ತು ಪುರುಷರು ಕಸದ ತೊಟ್ಟಿಗಳು ಮತ್ತು ಮನೆಗಳಿಂದ ಪ್ಲಾಸ್ಟಿಕ್, ಕಬ್ಬಿಣ ಮತ್ತು ಅಲ್ಯೂಮಿನಿಯಂ ಚೂರುಗಳನ್ನು ಸಂಗ್ರಹಿಸುತ್ತಾರೆ. "ನಾವು ಒಂದು ದಿನದಲ್ಲಿ ಎಷ್ಟು ಸಂಗ್ರಹಿಸುತ್ತೇವೆ ಎಂಬುದರ ಆಧಾರದ ಮೇಲೆ ಚಿಂದಿ ವಿತರಕರು ನಮಗೆ ಹಣ ಪಾವತಿಸುತ್ತಾರೆ" ಎಂದು ಮಾಯಾ ಹೇಳುತ್ತಾರೆ, ಅವರು ಕೂದಲು ಮತ್ತು ಬಟ್ಟೆಗಾಗಿ ಪ್ಲಾಸ್ಟಿಕ್ ಟಬ್‌ಗಳು ಮತ್ತು ಬಕೆಟ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
“ಒಂದು ಸ್ಥಳದಲ್ಲಿ ಆದಾಯ ಸ್ಥಗಿತಗೊಂಡರೆ ಆಗ ನಾವು ಇನ್ನೊಂದು ತಾಲೂಕಿಗೆ ವಲಸೆ ಹೋಗುತ್ತೇವೆ " ಎಂದು ಅವರು ಹೇಳುತ್ತಾರೆ. "ನಾವು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ನೆಲೆ ನಿಲ್ಲುವುದಿಲ್ಲ." ಎಂದು ಅವರು ಹೇಳುತ್ತಾರೆ.
ಆದರೆ ಕೋವಿಡ್ -19ಗೆ ಸಂಬಂಧಿಸಿದ ಪ್ರಯಾಣ ನಿರ್ಬಂಧಗಳು ಮತ್ತು ಕೆಲವೇ ಸಾರಿಗೆ ಆಯ್ಕೆಗಳಿಂದಾಗಿ ಅವರು ವಲಸೆ ಹೋಗುವುದು ಸ್ಥಗಿತಗೊಂಡಿತು. “ನಾವು ನವೆಂಬರ್ 2019ರಿಂದ ಬೀಡ್‌ನಲ್ಲಿದ್ದೇವೆ. ನಮ್ಮ ಬಳಿ ಸಾಕಷ್ಟು ಹಣವಿಲ್ಲದರುವುದರಿಂದಾಗಿ ಟೆಂಪೋವನ್ನು ಬಾಡಿಗೆಗೆ ಪಡೆಯುವುದು ಕೂಡ ಕಷ್ಟವಾಗಿತ್ತು. ಇನ್ನು ನಮ್ಮ ಎಲ್ಲಾ ಲಗೇಜ್‌ಗಳೊಂದಿಗೆ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವುದಂತೂ ಅಸಾಧ್ಯದ ಸಂಗತಿ” ಎಂದು ಈ ಹಿಂದೆ ಪೋಲಿಯೋಗೆ ಒಳಗಾಗಿ ಈಗ ಕೋಲಿನ ಸಹಾಯದಿಂದ ನಡೆಯುವ ಶಿವ ಹೇಳುತ್ತಿದ್ದರು.
"ನಮ್ಮ ಗಳಿಕೆಯು ನಾವು ಎಷ್ಟು ಚಿಂದಿ, ಹಳೆಯ ಬಟ್ಟೆ ಮತ್ತು ಕೂದಲನ್ನು ಸಂಗ್ರಹಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗುತ್ತದೆ" ಎಂದು ಅವರು ಹೇಳುತ್ತಾರೆ. ಕೊರೊನಾ ಮಹಾಮಾರಿಗೂ ಮೊದಲೇ ಅವರು ಮತ್ತು ಮಾಯಾ ಇಬ್ಬರೂ ಏನೂ ಗಳಿಸದೆ ಇದ್ದಂತಹ ದಿನಗಳಿದ್ದವು. ಅವರ ಒಟ್ಟು ಆದಾಯವು ಕೂಡ 7,000-8,000 ರೂ.ಗಿಂತ ಹೆಚ್ಚಿರಲಿಲ್ಲ.
ಈಗ ಒಂದು ವರ್ಷವಾಗುತ್ತಾ ಬಂದಿದೆ, ಆದಾಯ 4,000 ರೂಪಾಯಿಗಳಿಗಿಂತ ಹೆಚ್ಚಿಲ್ಲ
ಆದಾಯದ ಕೊರತೆಯಿಂದಾಗಿ ರೇಷನ್ ಮತ್ತು ಆಹಾರವನ್ನು ಕಡಿತ ಮಾಡುವಂತಾಗಿದೆ. ಮಾಯಾ ಮತ್ತು ಶಿವಾ ಹೇಳುವಂತೆ, ಅವರು ಈ ಮೊದಲು ಸಾಮಾನ್ಯವಾಗಿ ತಮ್ಮ ಆರು ಜನರ ಕುಟುಂಬ ಸದಸ್ಯರಿಗೆ ಆಹಾರ ಸಾಮಗ್ರಿಗಳಿಗಾಗಿಯೇ ಪ್ರತಿ ತಿಂಗಳು 4,000ರಿಂದ 5,000 ರೂ.ಖರ್ಚು ಮಾಡುತ್ತಿರುವುದಾಗಿ ಹೇಳುತ್ತಾರೆ.
ಕೊರೊನಾ ಮಹಾಮಾರಿಗೂ ಮೊದಲು ವಾರಕ್ಕೆ ಎರಡು ಕಿಲೋಗಳಷ್ಟು ವಿವಿಧ ಬೇಳೆಗಳು ಮತ್ತು 8ರಿಂದ 10 ಕಿಲೋಗಳಷ್ಟು ಅಕ್ಕಿ ಖರೀದಿಸುತ್ತಿದ್ದರು. ಆದರೆ ಈಗ ಪ್ರತಿ ವಾರ ಕೇವಲ ಅಗ್ಗದ ಒಂದು ಕಿಲೋ ಮಸೂರ್ ದಾಲ್ ಮತ್ತು ಎರಡು ಕಿಲೋ ಅಕ್ಕಿಗೆ ಇಳಿದಿದೆ. "ಇದಲ್ಲದೆ, ಕೋಳಿ ಅಥವಾ ಮಟನ್, ಕೆಲವೊಮ್ಮೆ ಮೊಟ್ಟೆಗಳು, ತರಕಾರಿಗಳು, ಹಣ್ಣುಗಳನ್ನು ಮಕ್ಕಳಿಗಾಗಿ ತಿಂಗಳಿಗೆ ಕನಿಷ್ಠ ಮೂರು ಬಾರಿ ತಿನ್ನುತ್ತಿದ್ದೆವು" ಎಂದು ಮಾಯಾ ತನ್ನ ಬೆರಳುಗಳ ಮೂಲಕ ಲೆಕ್ಕಾಚಾರ ಮಾಡುತ್ತಾ ಹೇಳುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಅವರು ಸೇವಿಸುವ ಊಟದ ಪ್ರಮಾಣ ಮತ್ತು ಅದರ ಗುಣಮಟ್ಟ ಕುಸಿದಿದೆ. "ಹಾಗಂತ ನಾವು ಈ ಮೊದಲು ಹಬ್ಬದ ಹೂರಣ ಮಾಡುತ್ತಿದ್ದೆವು ಎಂದಲ್ಲ, ಆದರೆ ನಮ್ಮ ಹೊಟ್ಟೆಯನ್ನು ತುಂಬಿಸಲು ಅಷ್ಟು ಸಾಕಾಗುತ್ತಿತ್ತು” ಎಂದು ಮಾಯಾ ಹೇಳುತ್ತಾರೆ.
“ಈಗ ಎಣ್ಣೆಯಿಂದ ಹಿಡಿದು ಬೇಳೆಯವರೆಗೆ ಎಲ್ಲವೂ ದುಬಾರಿಯಾಗಿದೆ.ಇದನ್ನೆಲ್ಲ ನಾವು ಹೇಗೆ ಭರಿಸಬೇಕು ಹೇಳಿ? ನಾವೀಗ ಮೊದಲಿನಂತೆ ಗಳಿಸುತ್ತಿಲ್ಲ,” ಎಂದು ಶಿವ ಹೇಳುತ್ತಾರೆ.
ಆದಾಗ್ಯೂ, ಕೊರೊನಾ ಮಹಾಮಾರಿ ಪ್ರಾರಂಭವಾಗುವ ಒಂದು ದಶಕದ ಮುಂಚೆಯೇ, ಭಾರತದಲ್ಲಿ ಅನೇಕರ ಆಹಾರದ ಮೇಲಿನ ವ್ಯಯದಲ್ಲಿ ಇಳಿಕೆ ಕಂಡುಬಂದಿತ್ತು. 1993ರಲ್ಲಿ ಶೇಕಡಾ 63.2ರಷ್ಟಿದ್ದ ಇದು ಶೇಕಡಾ 48.6ಕ್ಕೆ ಇಳಿದಿದೆ ಎಂದು 2011-12ರ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಛೇರಿಯ ಗೃಹಬಳಕೆಯ ಗ್ರಾಹಕ ವೆಚ್ಚ ಸಮೀಕ್ಷೆ ಹೇಳುತ್ತದೆ. (ಐದು-ವಾರ್ಷಿಕ ಸಮೀಕ್ಷೆಯ ಮುಂದಿನ ಸುತ್ತಿನ ಫಲಿತಾಂಶಗಳನ್ನು ಅಂಕಿ-ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿಲ್ಲ.)
ಕೊರೊನಾ ಮಹಾಮಾರಿ ಪ್ರಾರಂಭವಾದಾಗಿನಿಂದ, ದೇಶದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಲ್ಲಿ ಹಸಿವು ಮತ್ತಷ್ಟು ಹೆಚ್ಚಿದೆ, ಇತರ ಚಟುವಟಿಕೆಗಳ ನಡುವೆ, ಪಡಿತರ ಪೂರೈಕೆಯಲ್ಲಿ ತೊಡಗಿರುವ ದೆಹಲಿ ಮೂಲದ ಒಕ್ಕೂಟವಾದ ರ‍್ಯಾಪಿಡ್ ರೂರಲ್ ಕಮ್ಯುನಿಟಿ ರೆಸ್ಪಾನ್ಸ್ ಟು ಕೊವಿಡ್-19 (Rapid Community Response to COVID-19) ಅಧ್ಯಯನವು ಹೇಳುವಂತೆ , ಡಿಸೆಂಬರ್ 12, 2020 ರಿಂದ ಜನವರಿ 5, 2021ರವರೆಗಿನ ಅವಧಿಗೆ, "ಜನಸಂಖ್ಯೆಯ 40% [ಮಾದರಿ ಗಾತ್ರವು 11 ರಾಜ್ಯಗಳಲ್ಲಿ ಸುಮಾರು 11,800 ಜನರು] ಆಹಾರ ಸೇವನೆಯನ್ನು ಕಡಿತಗೊಳಿಸಿದೆ" ಮತ್ತು ಶೇ 25ರಷ್ಟು ಜನರು ಮೊಟ್ಟೆ, ಮಾಂಸ, ತರಕಾರಿಗಳು ಮತ್ತು ಎಣ್ಣೆಯಂತಹ ವಸ್ತುಗಳ ಕಡಿತವನ್ನು ಮುಂದುವರಿಸಿದ್ದಾರೆ.
ಪಡಿತರ ಚೀಟಿ ಇದ್ದರೆ ಮಾಯಾ ಮತ್ತು ಶಿವನಿಗೆ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರ ಅನುಗುಣವಾಗಿ ಕುಟುಂಬದ ಪ್ರತಿ ವ್ಯಕ್ತಿಗೆ ತಿಂಗಳಿಗೆ ಒಟ್ಟು ಐದು ಕಿಲೋಗ್ರಾಂಗಳಷ್ಟು ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸಬಹುದಾಗಿದೆ - ಕುಟುಂಬವು ರೇಷನ್ ಕಾರ್ಡ್ ನ್ನು ಹೊಂದಿದ್ದರೆ 3 ರೂಗೆ ಒಂದು ಕಿಲೋ ಅಕ್ಕಿ, 2 ರೂ.ಗೆ ಒಂದು ಕಿಲೋ ಗೋದಿ, ಮತ್ತು ಇತರ ಧಾನ್ಯಗಳು 1 ರೂಪಾಯಿಗೆ ಒಂದು ಕಿಲೋ ದೊರೆಯಲಿವೆ.
"ನಮ್ಮಲ್ಲಿ ರೇಷನ್ ಕಾರ್ಡ್ ಇಲ್ಲ" ಎಂದು ಮಾಯಾ ಹೇಳುತ್ತಾರೆ, "ಏಕೆಂದರೆ ನಾವು ಎಂದಿಗೂ ಒಂದೇ ಸ್ಥಳದಲ್ಲಿ ದೀರ್ಘಕಾಲ ನೆಲೆ ನಿಲ್ಲುವುದಿಲ್ಲ." ಆದ್ದರಿಂದ ಅವರ ಕುಟುಂಬ ಮತ್ತು ಅವರ ವಠಾರದಲ್ಲಿರುವ ಇತರ 14 ಕುಟುಂಬಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚುವರಿ ಉಚಿತ 5 ಕಿಲೋ ಆಹಾರ ಧಾನ್ಯಗಳಂತಹ ಸರ್ಕಾರದ ಯೋಜನೆಗಳನ್ನು ಸಹ ಪಡೆಯಲು ಸಾಧ್ಯವಿಲ್ಲ.
“ಈಗ ನಾವು ಎಲ್ಲೆಡೆ ವ್ಯಾಪಕವಾಗಿರುವ ಹಸಿವನ್ನು ನೋಡುತ್ತಿದ್ದೇವೆ. ಈ ಬಾರಿ, ಎರಡನೇ ಅಲೆಯೊಂದಿಗೆ, ಹಸಿವಿನ ಪರಿಸ್ಥಿತಿಯು ಕೆಟ್ಟದಾಗಿದೆ,” ಎಂದು ದಿಲ್ಲಿ ಮೂಲದ ಆಹಾರ ಅಭಿಯಾನದ ಸದಸ್ಯೆ ದೀಪಾ ಸಿನ್ಹಾ ಹೇಳುತ್ತಾರೆ. "ಬಹಳಷ್ಟು ಜನರ ಬಳಿ ಪಡಿತರ ಚೀಟಿಗಳಿಲ್ಲ ಮತ್ತು ಸುಪ್ರೀಂ ಕೋರ್ಟ್‌ನ ಪುನರಾವರ್ತಿತ ಆದೇಶಗಳ ಹೊರತಾಗಿಯೂ ಸರ್ಕಾರವು ಅವರಿಗೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸುತ್ತಿಲ್ಲ."
"ನಮ್ಮ ಸಮುದಾಯದ [ಮಸಣಜೋಗಿ] ಶೇಕಡಾ 50ಕ್ಕಿಂತ ಹೆಚ್ಚು ಜನರು ಪಡಿತರ ಚೀಟಿ ಅಥವಾ ಯಾವುದೇ ಇತರ ಗುರುತಿನ ಪುರಾವೆಗಳನ್ನು ಹೊಂದಿಲ್ಲ" ಎಂದು ಮಸಣಜೋಗಿ ಮಹಾಸಂಘವನ್ನು ನಡೆಸುತ್ತಿರುವ ನಾಂದೇಡ್ ಮೂಲದ ಸಮುದಾಯದ ಕಾರ್ಯಕರ್ತ 48 ವರ್ಷದ ಲಕ್ಷ್ಮಣ್ ಘನಸರವಾಡ ಹೇಳುತ್ತಾರೆ. ಈ ಸಂಘಟನೆಯು ಶಿಕ್ಷಣ, ವಿವಿಧ ರೀತಿಯ ದಾಖಲಾತಿಗಳಿಗೆ ಪ್ರವೇಶ ಮತ್ತು ಇತರ ಸಮಸ್ಯೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಅವರು ಮಹಾರಾಷ್ಟ್ರದಲ್ಲಿ ಮಸಣಜೋಗಿಗಳ ಒಟ್ಟು ಜನಸಂಖ್ಯೆಯು ಸುಮಾರು 1 ಲಕ್ಷ ಎಂದು ಅಂದಾಜಿಸುತ್ತಾರೆ, ಅವರಲ್ಲಿ ಶೇ 80ರಷ್ಟು ಜನರು ಚಿಂದಿ ಸಂಗ್ರಾಹಕರು ಮತ್ತು ಸ್ಥಳದಿಂದ ಸ್ಥಳಕ್ಕೆ ತೆರಳುತ್ತಾರೆ.
ಇತರ ಅಲೆಮಾರಿ ಸಮುದಾಯಗಳು ಸಹ ಇದೇ ರೀತಿಯ ಸಂಕಟದಲ್ಲಿವೆ, ಅವರಲ್ಲಿ ಸುವರ್ಣ ಮತ್ತು ನರೇಶ್ ಪವಾರ್ ಅವರು ತಮ್ಮ ಐದು ವರ್ಷದ ಮಗ ಮತ್ತು ನಾಲ್ಕು ವರ್ಷದ ಮಗಳೊಂದಿಗೆ ಯವತ್ಮಾಲ್ ಜಿಲ್ಲೆಯ ನೇರ್ ತಾಲೂಕಿನಲ್ಲಿ ವಾಸಿಸುತ್ತಿದ್ದಾರೆ, ನಾನು ಅವರನ್ನು ಮೇ 2019ರಲ್ಲಿ ಭೇಟಿಯಾಗಿದ್ದೆ (ಮತ್ತು ಈ ವರದಿಗಾಗಿ ಫೋನ್‌ನಲ್ಲಿ ಮಾತನಾಡಿದೆ). ಅವರು ಫಾನ್ಸೆ ಪಾರ್ಧಿ ಅಲೆಮಾರಿ ಸಮುದಾಯಕ್ಕೆ ಸೇರಿದವರು (ಪರಿಶಿಷ್ಟ ಬುಡಕಟ್ಟು ಎಂದು ಪಟ್ಟಿಮಾಡಲಾಗಿದೆ), ಮತ್ತು ಪಡಿತರ ಚೀಟಿಯನ್ನು ಹೊಂದಿರದ 70 ಹುಲ್ಲಿನ ಗುಡಿಸಲುಗಳ ನೆಲೆಗಳಲ್ಲಿ ವಾಸಿಸುವ 35 ಕುಟುಂಬಗಳಲ್ಲಿ ಸೇರಿದ್ದಾರೆ.
26 ವರ್ಷದ ಸುವರ್ಣ ತನ್ನ ಪುಟ್ಟ ಮಗಳೊಂದಿಗೆ ಪ್ರತಿದಿನ ಬೆಳಿಗ್ಗೆ ಭಿಕ್ಷೆ ಬೇಡಲು ಹತ್ತಿರದ ಹಳ್ಳಿಗಳಿಗೆ ಹೋಗುತ್ತಾರೆ. "ನಾನು ಪ್ರತಿ ಮನೆ ಬಾಗಿಲಿನ ಬಳಿ ಕೂಗುತ್ತೇನೆ... ಆದರೆ ಈಗ ಭಿಕ್ಷೆ ಬೇಡುವುದು ಸುಲಭದ ಕೆಲಸವಲ್ಲ, ಏಕೆಂದರೆ ಹಳ್ಳಿ ಜನರು ಕರೋನಾ ಸೋಂಕಿಗೆ ತುತ್ತಾಗಬಹುದು ಎಂದು ಭಯಪಡುತ್ತಾರೆ. ಅನೇಕರು ನಮ್ಮನ್ನು ಗ್ರಾಮದೊಳಗೆ ಪ್ರವೇಶಿಸಲು ಬಿಡುವುದಿಲ್ಲ. ನಮ್ಮ ಮೇಲೆ ಕರುಣೆ ತೋರುವ ಕೆಲವರು ಸ್ವಲ್ಪ ಅಕ್ಕಿ ಕಾಳುಗಳನ್ನು ನೀಡುತ್ತಾರೆ ಮತ್ತು ಕೆಲವೊಮ್ಮೆ ಅಳಿದುಳಿದ ಭಕ್ರಿಯನ್ನು ನೀಡುತ್ತಾರೆ.” (ನೋಡಿ ಪ್ರಶ್ನೆಯಾಗಿಯೇ ಉಳಿದ ಲಾಕ್‍ಡೌನ್ ಸಂದರ್ಭದಲ್ಲಿನ ಪಾರ್ಧಿಗಳು )
ಸುವರ್ಣ ಆಹಾರಕ್ಕಾಗಿ ಅಲೆದಾಡುತ್ತಿರುವಾಗ, ಆಕೆಯ 28 ವರ್ಷ ವಯಸ್ಸಿನ ಪತಿ ನರೇಶ್, ಮತ್ತು ವಸಾಹತು ಪ್ರದೇಶದ ಇತರ ಕೆಲವು ವ್ಯಕ್ತಿಗಳ ಜೊತೆ ಸೇರಿ ಹತ್ತಿರದ ಅರಣ್ಯ ಪ್ರದೇಶಗಳಲ್ಲಿ ಕವುಜಗದ ಪಕ್ಷಿಯನ್ನು ಬೇಟೆಯಾಡಲು ಹೋಗುತ್ತಾರೆ. ಆ ಪಕ್ಷಿಗಳನ್ನು ಕುಟುಂಬಗಳು ಸೇವಿಸುತ್ತವೆ ಇಲ್ಲವೇ ಮಾರಾಟ ಮಾಡುತ್ತವೆ. “ಬೇಟೆಗೆ ಅವಕಾಶವಿಲ್ಲ. ಅನೇಕ ಬಾರಿ ಫಾರೆಸ್ಟ್ ವಾಲೆಗಳು [ಅರಣ್ಯ ಅಧಿಕಾರಿಗಳು] ನಮಗೆ ಎಚ್ಚರಿಕೆ ನೀಡುತ್ತಾರೆ. ಹೀಗಾಗಿ ನಾವು ಆಗಾಗ ಬರಿಗೈಯಲ್ಲಿ ಹಿಂತಿರುಗಬೇಕಾಗುತ್ತದೆ’ ಎನ್ನುತ್ತಾರೆ ನರೇಶ್.
ಆ ಸುದೀರ್ಘ ದಿನದ ಕೊನೆಯಲ್ಲಿ, ಅವರ ಊಟದಲ್ಲಿ ಸಾಮಾನ್ಯವಾಗಿ ವಿವಿಧ ಮನೆಗಳಿಂದ ಸಂಗ್ರಹಿಸಿದ ಸ್ವಲ್ಪ ಅಕ್ಕಿ ಮತ್ತು ಮೆಣಸಿನ ಪುಡಿ ಅಥವಾ ಕಪ್ಪು ಎಳ್ಳಿನ ಚಟ್ನಿ ಇರುತ್ತದೆ. ಬಹಳ ಅಪರೂಪಕ್ಕೆ ಎನ್ನುವಂತೆ ಅವರು ಕೆಲವು ತರಕಾರಿಗಳನ್ನು ಹೊಂದಿರುತ್ತಾರೆ. "ಕೆಲವು ರೈತರು ನಾವು ಕೇಳಿದರೆ ಬದನೆಕಾಯಿ ಅಥವಾ ಆಲೂಗಡ್ಡೆ ನೀಡುತ್ತಾರೆ" ಎಂದು ಸುವರ್ಣ ಹೇಳುತ್ತಾರೆ.
ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಒಂದು ದಶಕದ ಮುಂಚೆಯೇ, ಭಾರತದಲ್ಲಿ ಅನೇಕರ ಆಹಾರದ ಮೇಲಿನ ವ್ಯಯದಲ್ಲಿಇಳಿಕೆ ಕಂಡುಬಂದಿದೆ - 1993ರಲ್ಲಿ ಶೇಕಡಾ 63.2ರಷ್ಟಿದ್ದ ಇದು ಶೇಕಡಾ 48.6ಕ್ಕೆ ಇಳಿದಿದೆ ಎಂದು 2011-12 ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಗೃಹಬಳಕೆಯ ಗ್ರಾಹಕ ವೆಚ್ಚ ಸಮೀಕ್ಷೆ ಹೇಳುತ್ತದೆ
ಆಕೆಯ ಕುಟುಂಬ ಮತ್ತು ಇತರರೂ ಸೇರಿದಂತೆ ಸರ್ಕಾರಿ ಯೋಜನೆಗಳನ್ನು ಪಡೆಯುವ ನಿಟ್ಟಿನಲ್ಲಿ ಅಗತ್ಯವಾಗಿರುವ ಗುರುತಿನ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಡಿನೋಟಿಫೈಡ್, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ರಾಷ್ಟ್ರೀಯ ಆಯೋಗವು ಸ್ವೀಕರಿಸಿದ ಹಲವಾರು ಅರ್ಜಿಗಳಲ್ಲಿ ವಿವರಿಸಲಾಗಿದೆ. ಆಯೋಗದ 2017ರ ವರದಿ ಯು ಹೀಗೆ ಹೇಳುತ್ತದೆ: “ಗುರುತಿಸುವಿಕೆ ಮತ್ತು ದಾಖಲಾತಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಸ್ವೀಕರಿಸಿದ ಒಟ್ಟು 454 ಅರ್ಜಿಗಳಲ್ಲಿ 304 ಮರಣ ಪ್ರಮಾಣಪತ್ರ, ಬಿಪಿಎಲ್ [ಪಡಿತರ] ಕಾರ್ಡ್‌ಗಳು ಮತ್ತು ಆಧಾರ್ ಕಾರ್ಡ್‌ಗಳಂತಹ ಹಲವಾರು ಇತರ ದಾಖಲೆಗಳನ್ನು ಪಡೆಯುವಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದೆ.”
ಸಾಂಕ್ರಾಮಿಕ ರೋಗವು ಅವರ ಸ್ಥಿತಿಯನ್ನು ಇನ್ನಷ್ಟು ಅಸ್ಥಿರಗೊಳಿಸಿದೆ.
ಕೇಂದ್ರ ಸರ್ಕಾರವು ಜೂನ್ 2, 2021 ರಂದು ಸುತ್ತೋಲೆಯನ್ನು ಹೊರಡಿಸಿ ರಾಜ್ಯಗಳ ಗಮನ ಸೆಳೆಯಿತು, “'ಸಮಾಜದ ದುರ್ಬಲ ಮತ್ತು ಶೋಷಿತ ವರ್ಗಗಳಿಗೆ ಅಂದರೆ ಬೀದಿ ನಿವಾಸಿಗಳು, ಚಿಂದಿ ಆಯುವವರು, ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ವಲಸೆ ಕಾರ್ಮಿಕರು ಇತರರು.., ಆಹಾರ ಧಾನ್ಯಗಳ ಅವಶ್ಯಕತೆ ಇರುವವರು... ಪಡಿತರ ಚೀಟಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ."
ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ, ಸರ್ಕಾರವು ಜನವರಿ 26, 2020ರಂದು ಶಿವ ಭೋಜನ್ ಯೋಜನೆಯನ್ನು ಪರಿಚಯಿಸಿದೆ, ಆ ಮೂಲಕ 10 ರೂ.ಗೆ ಯಾವುದೇ ತರದ ದಾಖಲೆಯಿಲ್ಲದೆ ಎಲ್ಲರಿಗೂ ಬೇಯಿಸಿದ ಆಹಾರವು ದೊರಕುವಂತೆ ಮಾಡಿದೆ. ಈ ಊಟದ ವೆಚ್ಚವನ್ನು ಮತ್ತಷ್ಟು ಕಡಿತಗೊಳಿಸಿ ಕೊರೊನಾ ಮಹಾಮಾರಿ ವೇಳೆ ಪ್ಲೇಟ್‌ಗೆ 5 ರೂ. ನಿಗದಿಪಡಿಸಲಾಯಿತು. ಮಹಾರಾಷ್ಟ್ರದ 2020-21ರ ಆರ್ಥಿಕ ಸಮೀಕ್ಷೆ ಯು "ಪ್ರಾರಂಭದಿಂದ 2020ರ ಡಿಸೆಂಬರ್‌ವರೆಗೆ 906 ಶಿವಭೋಜನ ಕೇಂದ್ರಗಳ ಮೂಲಕ 2.81 ಕೋಟಿ ಶಿವಭೋಜನ ತಾಲಿಗಳನ್ನು ವಿತರಿಸಲಾಗಿದೆ." ಎಂದು ಹೇಳುತ್ತದೆ.
ಆದರೆ ಶಿವ ಮತ್ತು ನರೇಶ್ ಇರುವ ಬಡಾವಣೆಯಲ್ಲಿನ ಕುಟುಂಬಗಳಿಗೆ ಈ ಊಟ ತಲುಪಿಲ್ಲ. "ನಮಗೆ ಇದರ ಬಗ್ಗೆ ತಿಳಿದಿಲ್ಲ" ಎಂದು ಶಿವ ಹೇಳುತ್ತಾರೆ. "ನಮಗೆ ಇದರ ಬಗ್ಗೆ ತಿಳಿದಿದ್ದರೆ, ನಾವು ಅರ್ಧಂಬರ್ಧ ಹಸಿವಿನಿಂದ ಇರುತ್ತಿರಲಿಲ್ಲ" ಎಂದು ನರೇಶ್ ಹೇಳುತ್ತಾರೆ.
“ಇದು ರಾಜ್ಯ ಮತ್ತು ಕೇಂದ್ರದ ಸಮಸ್ಯೆಯಾಗುತ್ತದೆ ಮತ್ತು ಇದರ ಪರಿಣಾಮವಾಗಿ ಜನರು ಇದರ ನಡುವೆ ಸಿಲುಕುವಂತಾಗಿದೆ.ಕೆಲವು ರಾಜ್ಯಗಳು ಈ ವಿಚಾರವಾಗಿ ವಿಭಿನ್ನ ಪ್ರಯತ್ನ ಮಾಡುತ್ತಿವೆ, ಆದರೆ ನಾವು ಇದೇ ವಿಷಯದಲ್ಲಿ ಕೇಂದ್ರ ಮಟ್ಟದಲ್ಲಿ ಯಾವುದೇ ರಾಷ್ಟ್ರೀಯ ಯೋಜನೆಯನ್ನು ಕಾಣುತ್ತಿಲ್ಲ” ಎಂದು ಆಹಾರದ ಹಕ್ಕು ಅಭಿಯಾನದ ದೀಪಾ ಸಿನ್ಹಾ ಹೇಳುತ್ತಾರೆ.
ಸಾಮಾಜಿಕ ಭದ್ರತೆಯಿಂದ ಸಂಪೂರ್ಣವಾಗಿ ವಿಮುಖವಾಗಿದ್ದರೂ, ನರೇಶ್ ಅವರು ಯಾವಾಗಲೂ ಬೇಟೆಯಾಡಲಿಲ್ಲ, ಸುವರ್ಣ ಅವರು ಸದಾ ಭಿಕ್ಷೆ ಬೇಡುತ್ತಿರಲಿಲ್ಲ. ಮತ್ತು ಅವರ ಹೊಟ್ಟೆ ಕೂಡ ಯಾವಾಗಲೂ ತಾಳ ಹಾಕುತ್ತಿರಲಿಲ್ಲ, ಹಾಗೆ ನೋಡಿದರೆ ಅವರು ಸ್ವಲ್ಪ ಉತ್ತಮ ದಿನಗಳನ್ನು ಕಂಡಿದ್ದರು.
"ನಾವು ಎಂತಹ ಕೆಲಸವನ್ನಾದರೂ ಮಾಡುತ್ತೇವೆ- ಅದು ಅಗೆಯುವುದು, ರಸ್ತೆ ನಿರ್ಮಾಣ, ಗಟಾರಗಳನ್ನು ಸ್ವಚ್ಛಗೊಳಿಸುವುದು, ಹೂವುಗಳನ್ನು ಮಾರಾಟ ಮಾಡುವುದು ಯಾವುದೇ ಆಗಿರಲಿ" ಎಂದು ನರೇಶ್ ವಿವರಿಸುತ್ತಾರೆ, ಮುಂಬೈ, ನಾಗ್ಪುರ ಮತ್ತು ಪುಣೆಯಂತಹ ನಗರಗಳಲ್ಲಿ ಡಿಸೆಂಬರ್‌ನಿಂದ ಮೇ ತನಕ ವರ್ಷದ ಆರು ತಿಂಗಳುಗಳವರೆಗೆ ಕೆಲಸ ಮಾಡುತ್ತಾರೆ. ಅವರು ಫ್ಲೈಓವರ್‌ಗಳ ಕೆಳಗೆ ಅಥವಾ ತಾತ್ಕಾಲಿಕ ಗುಡಿಸಲುಗಳಲ್ಲಿ ಮಲಗುತ್ತಿದ್ದರು ಮತ್ತು ಆರು ತಿಂಗಳ ಕಠಿಣ ಪರಿಶ್ರಮದ ದುಡಿಮೆ ನಂತರ ಅವರು 30,000ರಿಂದ 35,000 ರೂ.ಗಳನ್ನು ಉಳಿತಾಯ ಮಾಡುತ್ತಿದ್ದರು.
ಈ ಹಣವು ವರ್ಷದ ಉಳಿದ ಅರ್ಧದಲ್ಲಿ ಧಾನ್ಯಗಳು, ಎಣ್ಣೆ ಮತ್ತು ತರಕಾರಿಗಳ ಮೇಲಿನ ಅವರ ತಿಂಗಳ ಖರ್ಚನ್ನು ನೋಡಿಕೊಳ್ಳುತ್ತದೆ. "ಇದು ನಮ್ಮ ದೊಡ್ಡ ಆದಾಯವಾಗಿತ್ತು. ನಾವು ಪ್ರತಿ ತಿಂಗಳು 15-20 ಕಿಲೋ ಅಕ್ಕಿ, 15 ಕಿಲೋ ಬಾಜ್ರಾ (ಹಿಟ್ಟು), 2-3 ಕಿಲೋ ಮೂಂಗ್ (ಕಾಳು) ನ್ನು [ಮುಕ್ತ ಮಾರುಕಟ್ಟೆಯಿಂದ] ಖರೀದಿಸಬಹುದು" ಎಂದು ನರೇಶ್ ಹೇಳುತ್ತಾರೆ.
ನಂತರ ಅವರ ವಾರ್ಷಿಕ ಹಣಕಾಸಿನ ಸಮತೋಲನವು ಸಾಂಕ್ರಾಮಿಕ ರೋಗದೊಂದಿಗೆ ಸಂಪೂರ್ಣವಾಗಿ ಕ್ಷೀಣಿಸಿತು. ಲಾಕ್‌ಡೌನ್‌ಗಳು ಅವರ ಋತುಕಾಲಿಕ ವಲಸೆಯನ್ನು ನಿರ್ಬಂಧಿಸಿವೆ ಮತ್ತು ಅವರನ್ನು ಭಿಕ್ಷಾಟನೆ ಮತ್ತು ಬೇಟೆಯ ಮೇಲೆ ಅವಲಂಬಿಸುವಂತೆ ಮಾಡಿದೆ. "ಸರ್ಕಾರವು ಯಾವುದೇ ಸಮಯದಲ್ಲಿ ಲಾಕ್‌ಡೌನ್ ಘೋಷಿಸುತ್ತದೆ, ಹಾಗಾಗಿ ನಾವು ನಗರದಲ್ಲಿ ಸಿಲುಕಿಕೊಳ್ಳಲು ಬಯಸುವುದಿಲ್ಲ, ನಾವು ಹಸಿವಿನಿಂದ ಬಳಲಿದರೂ ಪರವಾಗಿಲ್ಲ ಮನೆಯಲ್ಲಿರುವುದು ಉತ್ತಮ" ಎಂದು ನರೇಶ್ ಹೇಳುತ್ತಾರೆ. “ಈಗ ಹತ್ತಿರದ ಹಳ್ಳಿಗಳಲ್ಲಿ ಕೆಲಸ ಹುಡುಕುವುದು ತುಂಬಾ ಕಷ್ಟಕರ. ನಗರಗಳಲ್ಲಿ ಕೆಲಸ ಮಾಡುವ ಮೂಲಕ, ಈ ಹಿಂದೆ ನಮ್ಮ ದಿನಗಳು ಸುಧಾರಿಸುತ್ತಿದ್ದವು, ಆದರೆ ಈಗ...ಏನೂ ಉಳಿದಿಲ್ಲ.
ಅನುವಾದ: ಎನ್. ಮಂಜುನಾಥ್