ಒಂದು ಕಾಲದಲ್ಲಿ ವಿದೂಷಕನೆಂದರೆ ರಾಜನ ಇನ್ನೊಂದು ಜೀವ, ಅವನ ಮಿತ್ರ, ಅವನ ಸಲಹೆಗಾರ ಎಲ್ಲವೂ ಆಗಿರುತ್ತಿದ್ದನು. ಅವರು ತಮ್ಮ ನಡುವೆ ಹಲವು ಬಗೆಯ ಪ್ರೇಮದ, ಅನ್ನದ ಕತೆಗಳನ್ನು ಪರಸ್ಪರ ಹೇಳಿಕೊಳ್ಳುತ್ತಿದ್ದರು. ವಿದೂಷಕ ಬದುಕಿನ ಭಾಗವಾಗಿದ್ದ. ಹಾಗಿದ್ದರೆ ಇದೆಲ್ಲ ಹೇಗಾಯಿತು? ಕತ್ತಲೆಯ ಕಾರಾಗೃಹದಲ್ಲಿ ಕುಳಿತ ವಿದೂಷಕ ಯೋಚಿಸುತ್ತಿದ್ದಾನೆ. ರಾಜ ಇದ್ದಕ್ಕಿದ್ದಂತೆ ತಮ್ಮ ಸಂಬಂಧಕ್ಕೆ ನೀಡಿದ ತಿರುವಿಗೆ ಕಾರಣವೇನಿರಬಹುದೆಂದು. ರಾಜನು ಯಾಕೆ ಮನನೊಂದಿದ್ದಾನೆ? ಅವನೊಂದು ವಿವರಣೆಯನ್ನಾದರೂ ಕೊಡಬೇಕಲ್ಲವೆ? ಯಾಕೆ ಹೀಗೆ ದೂರವಾಗಿದ್ದು? ವಿದೂಷಕ ಈಗ ತನ್ನ ಸ್ಥಿತಿ ನೋಡಿಕೊಂಡು ತಾನೇ ನಗುವ ಸ್ಥಿತಿಯಲ್ಲಿರಲಿಲ್ಲ.
ಆದರೆ ರಾಜಧಾನಿಯಲ್ಲಿ ಸಂಗತಿಗಳು ನಾಟಕೀಯವಾಗಿ ಬದಲಾಗಿವೆ. ಅದು ಪ್ಲೇಟೊ ರಿಪಬ್ಲಿಕ್ ಇರಲಿ, ಓಷಿಯಾನಿಯಾವೋ ಅಥವಾ ಭಾರತವೋ ಎನ್ನುವುದು ಮುಖ್ಯವಲ್ಲ. ಈಗ ಮುಖ್ಯ ವಿಷಯವೆಂದರೆ ರಾಜನು ದೇಶದ ಎಲ್ಲೆಡೆ ನಗುವನ್ನು ಅಳಿಸಿ ಹಾಕಲು ಆದೇಶಿಸಿರುವುದು. ಇಲ್ಲಿ ವಿಡಂಬನೆ, ಹಾಸ್ಯ, ವ್ಯಂಗ್ಯ, ನಗೆ ಚಟಾಕಿ, ವ್ಯಂಗ್ಯ ಚಿತ್ರಗಳು, ವ್ಯಂಗ್ಯೋಕ್ತಿಗಳು ಹೀಗೆ ಎಲ್ಲ ಬಗೆಯ ನಗಿಸಬಲ್ಲ ಕಲೆಗಳ ಮೇಲೆ ನಿಷೇಧ ಹೇರಲಾಗಿದೆ.
ಈಗ ಸರಕಾರಿ ಪ್ರಾಯೋಜಿತ ಇತಿಹಾಸಗಳು ಒಪ್ಪಿತ ನಾಯಕರ ಜೀವನ ಚರಿತ್ರೆಗಳ ಹೊರತಾಗಿ ಬಹುಸಂಖ್ಯಾತರ ದೇವರುಗಳು ಮತ್ತು ಅಧಿಕೃತವಾಗಿ ಪ್ರಮಾಣೀಕರಿಸಿದ ದೇಶಭಕ್ತಿಯ ವೀರರನ್ನು ವೈಭವೀಕರಿಸುವ ಮಹಾಕಾವ್ಯಗಳನ್ನು (ನಗೆ ಪೋಲೀಸರು ಅಧಿಕೃತವಾಗಿ ಮತ್ತು ಸರಿಯಾಗಿ ಪರಿಶೀಲಿಸಿದ ನಂತರ) ಮಾತ್ರವೇ ಪ್ರದರ್ಶಿಸಬಹುದಾಗಿದೆ. ಮನಸ್ಸನ್ನು ಪ್ರಚೋದಿಸುವ ಅಥವಾ ಯೋಚನೆಗಳನ್ನು ಪ್ರಚೋದಿಸುವ ಯಾವುದೂ ಮನರಂಜನೆಯಾಗುವಂತಿಲ್ಲ. ನಗುವೆನ್ನುವುದು ಎಲ್ಲಿಯೂ ಕಾಣುವಂತಿಲ್ಲ. ಅದನ್ನು ನ್ಯಾಯಾಲಯದ ಕೋಣೆಗಳಿಂದ, ಸಂಸತ್ತಿನ ಭವನದಿಂದ, ಥಿಯೇಟರ್‌ಗಳಿಂದ, ಪುಸ್ತಕಗಳಿಂದ, ದೂರದರ್ಶನದಿಂದ, ಛಾಯಾಚಿತ್ರಗಳಿಂದ, ಮಕ್ಕಳ ಮುಖದಿಂದ ಹೀಗೆ ಎಲ್ಲೆಡೆಯಿಂದ ಅಳಿಸಿಹಾಕಲಾಗುವುದು.
ನಗೆಯ ಕೊಲ್ಲುವ ರಾಜ
ಕೆರಳಿದ ಎತ್ತಿನಂತೆ ನುಗ್ಗುತ್ತಿತ್ತು ಕತ್ತಲು
ಊರಿನೊಳಗೆ.
ಗಾಬರಿಗೊಂಡ ತಾಯಿ ವೈದ್ಯನಿಗೆ ಹೇಳಿ ಕಳುಹಿಸಿದಳು.
“ನನ್ನ ಮಗುವಿಗೆ ಏನೋ ಆಗಿದೆ,
ಇದು ಕೆಡುಕು, ಯಾವುದೋ ದೆವ್ವ ಹೊಕ್ಕಂತಿದೆ
ನನ್ನ ಮುದ್ದು ಮಗುವಿನೊಳಗೆ”
ತಾಯಿ ಹೇಳಿದಳು ಆತಂಕದಿಂದ.
ನೋಡಿದ ವೈದ್ಯ ನಿಟ್ಟುಸಿರು ಬಿಟ್ಟ,
ಆಕಾಶದಲ್ಲಿ ಗುಡುಗು, ಮಿಂಚಿನ ಅಬ್ಬರ
“ಮಗುವಿನ ತುಟಿ ಬಿರಿಯುತ್ತಿತ್ತು,
ಬಿರಿದು ಎರಡಾಗುತ್ತಿತು,
ಅದರ ನಡುವೆ ಬಿಳುಪು ಮಲ್ಲಿಗೆಯಂತ ಹಲ್ಲುಗಳು ಕಾಣುತ್ತಿದ್ದವು.”
ವೈದ್ಯ ಹೆದರಿ ನಡುಗಿದ.
“ಕೂಡಲೇ ನಗೆ ಪೋಲಿಸರನ್ನು ಕರೆತನ್ನಿ,” ಎಂದ.
“ರಾಜನಿಗೆ ವಿಷಯ ತಿಳಿಯಲಿ,”
ತಾಯಿ ಒಂದೇ ಸಮನೇ ಅಳಳಾರಂಭಿಸಿದಳು
ಪಾಪದ ಹೆಂಗಸು
ಅಳುವುದಲ್ಲದೆ ಇನ್ನೇನು ಮಾಡಲು ಸಾಧ್ಯ.
ಅಳು, ಹೆತ್ತವ್ವನೇ ಅಳು.
ಶಾಪ, ವಿಚಿತ್ರ ಸಂಕಟ
ನಿನ್ನ ಮಗನಿಗೂ ತಗುಲಿದೆ ಈಗ.
ಅವಳ ಹಿತ್ತಲಿನಲ್ಲಿ ಬೆಳೆಯುತ್ತಿದೆ ರಾತ್ರಿ
ಕಳಿತ ಹಣ್ಣಾಗಿ.
ನಿಹಾರಿಕೆಗಳು ನಕ್ಷತ್ರಗಳಾಗಿ,
ಸೂಪರ್ ನೋವಾಗಳಾಗಿ ಸಿಡಿಯುತ್ತಿವೆ.
ರಾಜ ವಿಶ್ರಾಂತಿಯಲ್ಲಿದ್ದಾನೆ.
ತನ್ನ ವಿಶಾಲ ಹರವಿನ ಎದೆಯನ್ನು
ಎರಡು ಹಾಸಿಗೆಗಳ ಮೇಲೆ ಚೆಲ್ಲಿ
ಸುಖ ನಿದ್ರೆಯಲ್ಲಿದ್ದಾನೆ.
“ಹಳ್ಳಿಯಲ್ಲೊಂದು ಮಗು ಮುಗುಳ್ನಕ್ಕಿದೆ.”
ದೂರು ಉಸುರಿಸದರು ರಾಜನಿಗೆ.
ಆಕಾಶ ಗುಡುಗಿತು!
ಭೂಮಿ ನಡುಗಿತು!
ರಾಜ ಗಾಬರಿಯಿಂದೆದ್ದ
“ನನ್ನ ದೇಶದ ಮೇಲೆ ಇದ್ಯಾವ ಕೆಟ್ಟ ಕಣ್ಣು ತಗುಲಿತು?”
ರಾಜ ಈಗ ಹತಾಶನಾಗಿ ಕೂಗತೊಡಗಿದ.
ಅವನ ಬಾಯಾರಿದ ಖಡ್ಗ ಒರೆಯಲ್ಲಿ ಹೊಳೆಯುತ್ತಿತ್ತು.
ದೇಶಕ್ಕಾಗಿ ಅವನನ್ನು ಕೊಲ್ಲಲೇಬೇಕಿದೆ
ಹಿರಿಯರಾಗಲಿ, ಕಿರಿಯರಾಗಲಿ ನಗುವ ಎಲ್ಲರನ್ನೂ ರಾಜ ಕೊಲ್ಲಲೇ ಬೇಕು.
ಎಲ್ಲ ಬಗೆಯ ನಗುವನ್ನೂ ಇಲ್ಲವಾಗಿಸಬೇಕು
ಈ ಹಿತಚಿಂತಕ, ಉದಾತ್ತ ರಾಜ.
ತಾಯಿಯ ಒಂದು ಕಣ್ಣಿನಲ್ಲಿ
ಬೆಳ್ಳಿ ಖಡ್ಗ ಹೊಳೆಯುತ್ತಿದ್ದರೆ,
ಇನ್ನೊಂದರಲ್ಲಿ ಮಗನ ನಗು.
ಚರ್ಮ ಕತ್ತರಿಸುವ
ಪರಿಚಿತ ಸದ್ದು
ಅಳುವ ಸದ್ದೂ
ಈಗ ಎಲ್ಲೆಡೆ ಪರಿಚಿತ
ಮುಂಜಾನೆಯ ಕಡುಗೆಂಪು ಗಾಳಿಯಲ್ಲಿ
ʼರಾಜನಿಗೆ ಜಯವಾಗಲಿʼ
ಎನ್ನುವ ಘೋಷಗಳು ಮೊಳಗಿದವು.
ಉದ್ವಿಗ್ನ ಕೆನ್ನೆಯ ಸ್ನಾಯುಗಳು,
ತೆರೆದ ಹಲ್ಲುಗಳ,
ತುಟಿಗಳು ಕತ್ತರಿಸಲ್ಪಟ್ಟ ಸೂರ್ಯನ ಉದಯ.
ಅವಳು ಅವನ ಮೊಗದಲ್ಲಿ ಕಾಣುತ್ತಿರುವುದು
ಬಹಳ ಸೂಕ್ಷ್ಮವಾದ,
ಆದರೆ ಬಲವಾಗಿರುವ,
ನವಿರಾದ, ಆದರೆ ದಿಟ್ಟ ನಗುವಿರಬಹುದೆ?
ಅನುವಾದ: ಶಂಕರ. ಎನ್. ಕೆಂಚನೂರು