ಪ್ರಕಾಶ್ ಭಗತ್ ಬಾಗಿ ದೊಡ್ಡ ಅಲ್ಯೂಮೀನಿಯಮ್ ಪಾತ್ರೆಯೊಳಗಿನ ಆಲೂ-ಮಟರ್ ಗ್ರೇವಿಯನ್ನು ದೊಡ್ಡ ಸೌಟಿನಿಂದ ತಿರುವುತ್ತಾರೆ. ಅವರ ಬಲಗಾಲು ನೆಲದ ಮೇಲಿದ್ದರೆ, ಎಡಗಾಲು ಗಾಳಿಯಲ್ಲಿ ಆಡುತ್ತಿತ್ತು, ತನ್ನ ದೇಹದ ಸಮತೋಲನ ಕಾಯ್ದುಕೊಳ್ಳಲು ಅವರು ಊರುಗೋಲೊಂದನ್ನು ಹೆಗಲಿನಡಿ ಇರಿಸಿಕೊಂಡಿದ್ದರು.
“ನನಗೆ ನೆನಪಿರುವಂತೆ ನನ್ನ 10ನೇ ವಯಸ್ಸಿನಲ್ಲಿ ನಾನು ಈ ಊರುಗೋಲು ಉಪಯೋಗಿಸಲು ಪ್ರಾರಂಭಿಸಿದೆ” ಎನ್ನುತ್ತಾರೆ 52 ವರ್ಷದ ಭಗತ್. “ನಾನು ಚಿಕ್ಕವನಿರುವಾಗ ಕಾಲನ್ನು ಹಿಡಿದುಕೊಂಡೇ ನಡೆಯುತ್ತಿದ್ದೆ. ನಾನು ನರವನ್ನು ಎಳೆದಿದ್ದೇನೆ ಎಂದು ನನ್ನ ಪೋಷಕರು ಹೇಳುತ್ತಾರೆ.”
ಅಂಗವೈಕಲ್ಯವು ಭಗತ್ ಅವರ ಸಂಕಲ್ಪದ ಮೇಲೆ ಪರಿಣಾಮ ಬೀರಿಲ್ಲ. ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಪನ್ವೆಲ್ ತಾಲೂಕಿನಲ್ಲಿರುವ ಅವರ ಗ್ರಾಮವಾದ ಪರ್ಗಾಂವ್ನಲ್ಲಿ ದೆಹಲಿಗೆ ಹೋಗುವ ವಾಹನಗಳ ಜಾಥಾದಲ್ಲಿ ಭಾಗವಹಿಸಲು ನಿರ್ಧರಿಸಿದಾಗ, ಜಾಥಾವನ್ನು ಸೇರಿಕೊಳ್ಳುವ ಮೊದಲು ಅವರು ಎರಡು ಬಾರಿ ಯೋಚಿಸಲಿಲ್ಲ. “ನಾನು ಇಲ್ಲಿಗೆ ಒಂದು ಉದ್ದೇಶಕ್ಕಾಗಿ ಬಂದಿದ್ದೇನೆ,” ಎಂದು ಗ್ರೇವಿಯ ರುಚಿಯನ್ನು ನೋಡಿ ಸವಿಯುತ್ತಾ ಅವರು ಹೇಳುತ್ತಾರೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಜಾರಿಗೆ ತಂದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಸಾವಿರಾರು ರೈತರು ದೆಹಲಿಯಲ್ಲಿ ಬೀದಿಗಿಳಿದಿದ್ದಾರೆ. ಈ ಆಂದೋಲನದಲ್ಲಿರುವ ರೈತರನ್ನು ಬೆಂಬಲಿಸಲು, ಡಿಸೆಂಬರ್ 21ರಂದು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸುಮಾರು 2,000 ರೈತರು ನಾಸಿಕ್ನಲ್ಲಿ ಜಮಾಯಿಸಿದರು. ಅವರು ಅಲ್ಲಿಂದ ಜಾಥಾ ಮೂಲಕ 1,400 ಕಿ.ಮೀ ದೂರದಲ್ಲಿರುವ ದೆಹಲಿಗೆ ತೆರಳಬೇಕಿತ್ತು.
ಪರ್ಗಾಂವ್ ಗ್ರಾಮದಿಂದ 39 ಮಂದಿ ಈ ಜಾಥಾದಲ್ಲಿ ಭಾಗವಹಿಸಲು ನಿರ್ಧರಿಸಿದರು. "ಈ ದೇಶದ ರೈತರು ಮೋಸ ಹೋಗುತ್ತಿದ್ದಾರೆ" ಎಂದು ಭಗತ್ ಹೇಳುತ್ತಾರೆ. "ಅವರಲ್ಲಿ ಹೆಚ್ಚು ಹೆಚ್ಚು ರೈತರು ತಮ್ಮ ಉತ್ಪನ್ನಗಳಿಗೆ ಖಚಿತ ದರಗಳನ್ನು ಪಡೆಯಬೇಕು. ಈ ಕೃಷಿ ಕಾನೂನುಗಳು ಅವರನ್ನು ಇನ್ನಷ್ಟು ಸಾಲದಲ್ಲಿ ಮುಳುಗಿಸುತ್ತವೆ. ರೈತರು ದೊಡ್ಡ ಕಂಪನಿಗಳ ವಶಕ್ಕೆ ಹೋಗುತ್ತಾರೆ, ಅವರು ರೈತರನ್ನು ಶೋಷಿಸುತ್ತಾರೆ. ಕೃಷಿ ಕಾನೂನುಗಳು ಪಂಜಾಬ್ ಮತ್ತು ಹರಿಯಾಣದ ರೈತರ ಮೇಲೆ ತಕ್ಷಣದ ಪರಿಣಾಮ ಬೀರಿರಬಹುದು, ಅದಕ್ಕಾಗಿಯೇ ಅಲ್ಲಿ ಆಂದೋಲನವು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ, ಆದರೆ ಇದರರ್ಥ ದೇಶದಾದ್ಯಂತದ ಇತರ ರಾಜ್ಯಗಳ ರೈತರ ಪರಿಣಾಮ ಮೇಲೆ ಬೀರುವುದಿಲ್ಲ ಎಂದಲ್ಲ.”ಭಗತ್ ಸ್ವತಃ ಮೀನುಗಾರರಾಗಿದ್ದು "ರೈತರನ್ನು ಬೆಂಬಲಿಸಲು ನಾನು ಯಾಕೆ ಕೃಷಿಕನಾಗಿರಬೇಕು?" ಎಂದು ಕೇಳುತ್ತಾರೆ. "ಕೃಷಿ ಗ್ರಾಮೀಣ ಆರ್ಥಿಕತೆಯನ್ನು ಮುನ್ನಡೆಸುತ್ತದೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ರೈತರು ಕಷ್ಟಪಡುತ್ತಿದ್ದರೆ, ನನ್ನ ಮೀನುಗಳನ್ನು ಯಾರು ಕೊಳ್ಳುತ್ತಾರೆ?”
ಭಗತ್ ಏಡಿ ಮತ್ತು ಸೀಗಡಿಗಳನ್ನು ಹಿಡಿದು ಪನ್ವೆಲ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ತಿಂಗಳಿಗೆ ಸುಮಾರು ರೂ. 5,000 ದುಡಿಯುತ್ತಾರೆ. "ನನ್ನ ಬಳಿ ದೊಡ್ಡದಾದ, ಸ್ವಯಂಚಾಲಿತ ದೋಣಿ ಇಲ್ಲ" ಎಂದು ಅವರು ಹೇಳುತ್ತಾರೆ. “ನಾನು ಮೀನುಗಾರಿಕೆಗೆ ಹೋದಾಗ ಅದನ್ನು ಕೈಯಾರೆ ನಡೆಸುತ್ತೇನೆ. ಇತರ ಮೀನುಗಾರರು ನಿಂತು ಬಲೆ ಎಸೆಯುತ್ತಾರೆ. ನನ್ನ ಸಮಸ್ಯೆಯಿಂದಾಗಿ ದೋಣಿಯಲ್ಲಿ ನಾನು ನೇರ ನಿಲ್ಲಲು ಸಾಧ್ಯವಿಲ್ಲ. ಹಾಗಾಗಿ ನಾನು ಕುಳಿತು ಮೀನು ಹಿಡಿಯಬೇಕಾಗುತ್ತದೆ.”
ಅವರು ಸ್ವತಃ ಮೀನುಗಾರನಾಗಿದ್ದರೂ, ಭಗತ್ನ ನೆಚ್ಚಿನ ಅಡುಗೆಯೆಂದರೆ ಮಾಂಸದ ಅಡುಗೆ ಮಾಡುವುದು. "ಇದು ಹಳ್ಳಿಯ ಪದ್ಧತಿ" ಎಂದು ಅವರು ಹೇಳುತ್ತಾರೆ. "ನಾನು ಯಾವಾಗಲೂ ಅಡುಗೆಯನ್ನು ಇಷ್ಟಪಡುತ್ತೇನೆ" ಎಂದು ಅವರು ಹೇಳುತ್ತಾರೆ. "ನಮ್ಮ ಹಳ್ಳಿಯಲ್ಲಿ ಏನಾದರೂ ವಿಶೇಷವಿದ್ದರೆ, ನಾನು ಅಡುಗೆ ಮಾಡುತ್ತೇನೆ. ಆದರೆ ಅವರಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ. ನಾನು ಅದನ್ನು ಕೇವಲ ಪ್ರೀತಿಯಿಂದ ಮಾಡುತ್ತೇನೆ. ಹಳ್ಳಿಯ ಹೊರಗಿನ ಯಾರಾದರೂ ಸಮಾರಂಭ ಅಥವಾ ಹಬ್ಬಕ್ಕೆ ನನ್ನಿಂದ ಅಡುಗೆ ಮಾಡಿಸಲು ಬಯಸಿದರೆ, ನಾನು ಪ್ರಯಾಣದ ವೆಚ್ಚವನ್ನು ಮಾತ್ರ ತೆಗೆದುಕೊಳ್ಳುತ್ತೇನೆ. ಆದ್ದರಿಂದ ನಮ್ಮ ಹಳ್ಳಿಯ ಜನರು ಜಾಥಾ ಸೇರಲು ನಿರ್ಧರಿಸಿದಾಗ, ನಾನು ಅಡುಗೆ ಮಾಡುತ್ತೇನೆ ಎಂದು ಹೇಳಿದೆ.” ಈ ಗುಂಪಿನಲ್ಲಿ, ಅವರು ಪ್ರತಿದಿನ 40 ಜನರಿಗೆ ಅಡುಗೆ ಮಾಡುತ್ತಾರೆ.
ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಯೋಜಿತವಾಗಿರುವ ಅಖಿಲ ಭಾರತ ಕಿಸಾನ್ ಸಭಾ ಆಯೋಜಿಸಿದ್ದ ಜಾಥಾದಲ್ಲಿ ಭಾಗವಹಿಸಲು ಪರ್ಗಾಂವ್ ನಿವಾಸಿಗಳು ಬಸ್ ಬಾಡಿಗೆಗೆ ಪಡೆದಿದ್ದಾರೆ. ಕಿತ್ತಳೆ ಬಣ್ಣದ, ಬೃಹತ್ ಬಸ್ ಮುಖ್ಯವಾಗಿ ಟೆಂಪೊಗಳು ಮತ್ತು ನಾಲ್ಕು ಚಕ್ರಗಳ ಕಾರವಾನ್ ನಡುವೆ ನಿಂತಿತ್ತು. ಬಸ್ಸಿನ ಡಿಕ್ಕಿಯಲ್ಲಿ ಆರು ಕಿಲೋ ಈರುಳ್ಳಿ, 10 ಕಿಲೋ ಆಲೂಗಡ್ಡೆ, ಐದು ಕಿಲೋ ಟೊಮ್ಯಾಟೊ, ಮತ್ತು 50 ಕಿಲೋ ಅಕ್ಕಿ ಮತ್ತು ಇತರ ವಸ್ತುಗಳನ್ನು ಜೋಡಿಸಲಾಗಿತ್ತು. ಮೆರವಣಿಗೆಯನ್ನು ಮುನ್ನಡೆಸುವ ಕಾರ್ಯಕರ್ತರು ಮೆರವವಣಿಗೆಗಾಗಿ ನಿಲ್ಲಿಸಿದ ತಕ್ಷಣ, ಭಗತ್ ಮತ್ತು ಅವರ ಇಬ್ಬರು ಸಹೋದ್ಯೋಗಿಗಳು ಕೆಲಸ ಪ್ರಾರಂಭಿಸುತ್ತಾರೆ.ಭಗತ್ ತನ್ನ ಊರುಗೋಲನ್ನು ಹಿಡಿದು ಬಸ್ಸಿನ ‘ಸ್ಟೋರ್ ರೂಂ’ ಕಡೆಗೆ ಚಲಿಸುತ್ತಾರೆ. ಅವರ ಸಹೋದ್ಯೋಗಿಯೊಬ್ಬರು ಭಾರವಾದ ಗ್ಯಾಸ್ ಸಿಲಿಂಡರ್ ಸೇರಿದಂತೆ ಊಟಕ್ಕೆ ಬೇಕಾದ ವಸ್ತುಗಳನ್ನು ಹೊರತೆಗೆಯುತ್ತಾರೆ. ಮಾಲೆಗಾಂವ್ ಪಟ್ಟಣದಲ್ಲಿ ಡಿಸೆಂಬರ್ 22ರ ಮಧ್ಯಾಹ್ನ ಊಟದ ಮೆನು ಆಲೂ-ಮಟರ್ ಜೊತೆ ಅನ್ನ. "ನಮಗೆ ಮೂರು ದಿನಗಳವರೆಗೆ ಸಾಕಾಗುವಷ್ಟು ಸರಬರಾಜು ಇದೆ" ಎಂದು ಭಗತ್ ಹೇಳುತ್ತಾರೆ, ಬಸ್ಸಿನ ಪಕ್ಕದ ನೆಲದ ಮೇಲೆ ಹಾಸಲಾಗಿದ್ದ ಬೆಡ್ಶೀಟ್ ಮೇಲೆ ಕುಳಿತು, ಈರುಳ್ಳಿಯನ್ನು ನುಣ್ಣಗೆ ಕತ್ತರಿಸುತ್ತಾ ನಮ್ಮೊಂದಿಗೆ ಮಾತನಾಡುತ್ತಾ ಹೇಳುತ್ತಾರೆ. “ನಮ್ಮಲ್ಲಿ ಹೆಚ್ಚಿನವರು ಮಧ್ಯಪ್ರದೇಶದ ಗಡಿಯಿಂದ ಮನೆಗೆ ಮರಳುತ್ತೇವೆ. ಕೆಲವರು ದೆಹಲಿಗೆ ಹೋಗುತ್ತಾರೆ. ನಾವು ದೀರ್ಘಕಾಲ ಕೆಲಸ ಬಿಟ್ಟಿರಲು ಸಾಧ್ಯವಿಲ್ಲ.”
ಅವರ ಗ್ರಾಮವಾದ ಪರ್ಗಾಂವ್ನ ಹೆಚ್ಚಿನ ಜನರು ಕೋಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಮೀನುಗಾರಿಕೆ ಅವರ ಜೀವನೋಪಾಯವಾಗಿದೆ. “ನಾವು ತಿಂಗಳಿಗೆ 15 ದಿನಗಳು ಕಡಲಿನಲ್ಲಿರುತ್ತೇವೆ. ಆದಾಗ್ಯೂ, ಇಳಿತದ ಸಮಯದಲ್ಲಿ ಮೀನು ಹಿಡಿಯಲು ಸಾಧ್ಯವಿಲ್ಲ”ಎಂದು ಭಗತ್ ಹೇಳುತ್ತಾರೆ. ಈ ವಾರ ಶುಕ್ರವಾರ ಅಥವಾ ಶನಿವಾರ, ಹೆಚ್ಚಿನ ಉಬ್ಬರದ ಸಮಯದಲ್ಲಿ ಅವರು ಪರ್ಗಾಂವ್ಗೆ ಮರಳಲು ಬಯಸುತ್ತಿದ್ದಾರೆ. "ಅದನ್ನು ತಪ್ಪಿಸಿಕೊಂಡರೆ ಕಷ್ಟವಾಗುತ್ತದೆ " ಎಂದು ಅವರು ಹೇಳುತ್ತಾರೆ. "ಲಾಕ್ಡೌನ್ ನಂತರ ನಾವು ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ನಮ್ಮ ಸುರಕ್ಷತೆಗಾಗಿ, ನಾವು ಮೀನುಗಾರಿಕೆಯನ್ನು ನಿಲ್ಲಿಸಿದ್ದೇವೆ. ಕೊರೋನಾ ಸೋಂಕಿಗೆ ಬಲಿಯಾಗಲು ನಮಗೆ ಇಷ್ಟವಿಲ್ಲ. ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ಈಗ ನಾವು ನಿಧಾನವಾಗಿ ನಮ್ಮ ಕಾಲುಗಳ ಮೇಲೆ ನಿಲ್ಲುತ್ತಿದ್ದೇವೆ. ಈಗ, ಇನ್ನೊಂದು ವಿರಾಮವನ್ನು ಭರಿಸುವುದು ಬಹಳ ಕಷ್ಟ"
ಲಾಕ್ಡೌನ್ನ ಆರಂಭಿಕ ಹಂತಗಳಲ್ಲಿ, ಪರ್ಗಾಂವ್ನ ನಿವಾಸಿಗಳು ತಮ್ಮ ಗ್ರಾಮವನ್ನು ಸಂಪೂರ್ಣವಾಗಿ ಮುಚ್ಚಿದ್ದರು. "ರಾಜ್ಯವು ಕೆಲವು ನಿರ್ಬಂಧಗಳನ್ನು ಸಡಿಲಿಸಿದ ನಂತರವೂ ನಾವು ತೆರೆದುಕೊಳ್ಳಲಿಲ್ಲ" ಎಂದು ಭಗತ್ ಹೇಳುತ್ತಾರೆ. "ವೈರಸ್ನಿಂದ ಸುರಕ್ಷಿತವಾಗಿರಲು ಯಾರೂ ತಮ್ಮ ಸಂಬಂಧಿಕರನ್ನು ಹಳ್ಳಿ ಪ್ರವೇಶಿಸಲು ಬಿಟ್ಟಿರಲಿಲ್ಲ."
ಲಾಕ್ ಡೌನ್ ಸಮಯದಲ್ಲಿ ಯಾರೊಬ್ಬರೂ ತನ್ನ ಗಡಿಗಳನ್ನು ಉಲ್ಲಂಘಿಸಲು ಬಿಡದ ಹಳ್ಳಿಯಿಂದ, 39 ಜನರು ರಾಜ್ಯದ ವಿವಿಧ ಭಾಗಗಳ ರೈತರೊಂದಿಗೆ ಸಾವಿರಾರು ಜನರ ಮೆರವಣಿಗೆಯಲ್ಲಿ ಸೇರಿದ್ದಾರೆ. "ʼರೈತರನ್ನು ಬೆಂಬಲಿಸುವ ವಿಷಯ ಬಂದಾಗ ನಿಮ್ಮಲ್ಲಿ ಎರಡನೇ ಯೋಚನೆಗೆ ಸ್ಥಳವಿರುವುದಿಲ್ಲ" ಎಂದು ಭಗತ್ ಹೇಳುತ್ತಾರೆ.
ಪಠ್ಯ: ಪಾರ್ಥ್ ಎಮ್.ಎನ್. ಫೋಟೊಗಳು: ಶೃದ್ಧಾ ಅಗರ್ವಾಲ್
ಅನುವಾದ: ಶಂಕರ ಎನ್. ಕೆಂಚನೂರು