ಈ ಅಕ್ಟೋಬರ್ ತಿಂಗಳ ಆರಂಭದ ಆ ರಾತ್ರಿ ಗುಡಿಸಲಿನಲ್ಲಿ ದೀಪಗಳು ಇದ್ದಕ್ಕಿದ್ದಂತೆ ಆರಿದ ತಕ್ಷಣ, ಶೋಭಾ ಚವಾಣ್ ಅವರ ಕುಟುಂಬಕ್ಕೆ ಇಲ್ಲಿ ಏನೋ ಸರಿಯಿಲ್ಲ ಎನ್ನಿಸತೊಡಗಿತ್ತು. ಆದರೆ ಅವರು ಏನಾಗುತ್ತಿದೆಯೆಂದು ತಿಳಿಯುವ ಮೊದಲೇ, ಅಲ್ಲಿಗೆ ಬಂದಿದ್ದ ಜನರ ಗುಂಪು ಒಳಗೆ ನುಗ್ಗಿ ಎಂಟು ಜನರ ಕುಟುಂಬವನ್ನು ರಾಡ್ಗಳು ಮತ್ತು ದೊಣ್ಣೆಗಳಿಂದ ನಿರ್ದಯವಾಗಿ ಹೊಡೆಯಲಾರಂಭಿಸಿದರು. ಒಂದು ಗಂಟೆಯ ನಂತರ, ಅವರ ಕುಟುಂಬದಲ್ಲಿ ಏಳು ಜನರಷ್ಟೇ ಉಳಿದಿದ್ದರು- ಶೋಭಾ ಅವರ ಎರಡು ವರ್ಷದ ಮೊಮ್ಮಗ ದಾಳಿಯಲ್ಲಿ ಕೊಲ್ಲಲ್ಪಟ್ಟನು. ಅದರ ಮರುದಿನ ಅವರ ಕುಟುಂಬದಲ್ಲಿ ಆರು ಜನರಷ್ಟೇ ಆದರು, ಈಗ ಶೋಭಾ ಅವರ ಗಾಯಗೊಂಡ ಪತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ತಡರಾತ್ರಿ ಹನ್ನೆರಡಕ್ಕೂ ಮೊದಲು ಮನೆಗೆ ನುಗ್ಗಿದ ದಾಳಿಕೋರ ಗುಂಪು ಕುಟುಂಬದ ಎಲ್ಲಾ ಸದಸ್ಯರನ್ನೂ ಒದೆಯುವುದು, ಥಳಿಸುವುದರ ಮೂಲಕ ಹಲ್ಲೆ ಮಾಡಲಾರಂಭಿಸಿತು. ಕುಟುಂಬದಲ್ಲಿ ಶುಭಾ (65) ಅವರ ಪತಿ ಮಾರುತಿ (70) ಅವರ ಮಗ ಮತ್ತು ಸೊಸೆ ಹಾಗೂ ಒಬ್ಬ ಮೊಮ್ಮಗ ಮೊಮ್ಮಗಳು ಇದ್ದರು. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅವರ ಊರಿನ ಅಂಚಿನಲ್ಲಿದ್ದ ಕುಟುಂಬದ ಗುಡಿಸಲು ಮತ್ತು ಅವರ ಕುರಿ ಕೊಟ್ಟಿಗೆಯನ್ನೂ ಸುಟ್ಟು ಹಾಕಲಾಯಿತು. ಶೋಭಾ ಅವರು ಪೊಲೀಸರು ಸಲ್ಲಿಸಿರುವ ಮೊದಲ ಮಾಹಿತಿ ವರದಿಯಲ್ಲಿ (ಎಫ್ ಐಆರ್) ಆ ರಾತ್ರಿಯ ಘಟನೆಗಳನ್ನು ವಿವರಿಸಿದ್ದಾರೆ.
"ಆ ರಾತ್ರಿ ನಾವು ಮೂವರು ಅತ್ಯಾಚಾರಕ್ಕೊಳಗಾದೆವು" ಎಂದು ಶೋಭಾ ಅವರ 30 ವರ್ಷದ ವಿವಾಹಿತ ಮಗಳು ಅನಿತಾ ಹೇಳುತ್ತಾರೆ. ದಾಳಿಕೋರರು ತನ್ನ ಮೇಲೆ, ತನ್ನ 23 ವರ್ಷದ ನಾದಿನಿ ಮತ್ತು 17 ವರ್ಷದ ಸೋದರ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಅವರು ಹೇಳುತ್ತಾರೆ.
ದಾಳಿಕೋರರ ಗುಂಪು ಅನಿತಾರ ತಾಯಿಯ ಗುಡಿಸಲಿನಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಅವರ ಗುಡಿಸಲಿಗೂ ದಾಳಿಯಿಕ್ಕಿ ರಾತ್ರಿಯ ಕರಾಳ ಸಮಯದಲ್ಲಿ ಕುಟುಂಬವನ್ನು ಹಿಂಸಿಸಿ ಅತ್ಯಾಚಾರವೆಸಗಿತು. "ಅವರು ಬೆಳಗಿನ ಜಾವ ಸುಮಾರು 2 ಗಂಟೆಯ ಹೊತ್ತಿಗೆ ನಮ್ಮ ಗುಡಿಸಲನ್ನು ತಲುಪಿದರು" ಎಂದು ಅನಿತಾ ಹೇಳುತ್ತಾರೆ. "ಅವರು ನಮ್ಮನ್ನು ಹಳ್ಳಿಯಿಂದ ಓಡಿಸಲು ಬಯಸಿದ್ದರು. ನಮ್ಮ ಬಳಿ ಮೋಟಾರು ಬೈಕಿಗೆ ಬೆಂಕಿ ಹಚ್ಚಲಾಗಿತ್ತು, ಮತ್ತು ನಮ್ಮ ಜಾನುವಾರುಗಳನ್ನು ನಮ್ಮಿಂದ ಕದಿಯಲಾಯಿತು." ಅವರು ಆಕೆಯ ಗುಡಿಸಲಿಗೂ ಬೆಂಕಿ ಹಚ್ಚಿದರು.
ಆರೋಪಿಗಳು ಚವಾಣ್ ಕುಟುಂಬದ ಮೇಲೆ ಹಲ್ಲೆ ನಡೆಸುತ್ತಿದ್ದಾಗ, "ನೀವು ಕಳ್ಳರು. ನೀವು ನಮ್ಮ ಊರಿನಲ್ಲಿರುವುದು ನಮಗೆ ಇಷ್ಟವಿಲ್ಲ." ಎಂದು ಹೇಳುತ್ತಲೇ ಇದ್ದರು ಎಂದು ಶೋಭಾ ಎಫ್ಐಆರ್ನಲ್ಲಿ ಹೇಳಿದ್ದಾರೆ.
ಚವಾಣರು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾಗಿರುವ ಪಾರ್ಧಿ ಸಮುದಾಯಕ್ಕೆ ಸೇರಿದವರು. ಪಾರ್ಧಿಗಳು ಒಂದು ಕಾಲದಲ್ಲಿ ಬೇಟೆಗಾರರಾಗಿದ್ದರು, ಆದರೆ ವಸಾಹತುಶಾಹಿ ಆಳ್ವಿಕೆಯಲ್ಲಿ, ಸಮುದಾಯವನ್ನು 1871ರ ಕ್ರಿಮಿನಲ್ ಟ್ರೈಬ್ಸ್ ಕಾಯ್ದೆ (ಸಿಟಿಎ) ಅಡಿಯಲ್ಲಿ 'ಕ್ರಿಮಿನಲ್ ಬುಡಕಟ್ಟು' ಎಂದು ಗುರುತಿಸಲಾಯಿತು. ಅವರನ್ನು 'ಹುಟ್ಟಿನಿಂದ ಅಪರಾಧಿಗಳು' ಎಂದು ಕರೆಯಲಾಗುತ್ತಿತ್ತು ಮತ್ತು ಅವರ ಚಲನವಲನಗಳನ್ನು ಆಗಿನಿಂದ ನಿರ್ಬಂಧಿಸಲಾಯಿತು. ಭಾರತ ಸರ್ಕಾರವು ಸಿಟಿಎಯನ್ನು ರದ್ದುಗೊಳಿಸಿದಾಗ, ಪಾರ್ಧಿಗಳು ಸೇರಿದಂತೆ 198 'ಅಪರಾಧಿ ಬುಡಕಟ್ಟು'ಗಳನ್ನು ' ಡಿ-ನೋಟಿಫೈ' ಮಾಡಲಾಯಿತು. ಆದರೆ ಸಿಟಿಎ ಬದಲಿಗೆ ಬಂದ 1952ರ ಹ್ಯಾಬಿಚುವಲ್ ಅಫೆಂಡರ್ಸ್ ಆಕ್ಟ್ ಆ ಸಮುದಾಯಗಳಿಗೆ ಅಂಟಿದ 'ಕ್ರಿಮಿನಲ್' ಎನ್ನುವ ಹಣೆಪಟ್ಟಿಯನ್ನು ಕಳಚಲು ಸಹಾಯ ಮಾಡಲಿಲ್ಲ.
ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಿರುವ ಪಾರ್ಧಿಗಳು ತಮಗೆ ಅಂಟಿರುವ ಕಳಂಕದ ಕಾರಣದಿಂದಾಗಿ ನಾಗರಿಕ ಸಮಾಜದ ಅಂಚಿನಲ್ಲಿಯೇ ಉಳಿದುಹೋಗಿದ್ದಾರೆ . ಬೀಡ್ ಜಿಲ್ಲೆಯಲ್ಲಿ ಸುಮಾರು 5,600 (ಜನಗಣತಿ 2011) ಜನಸಂಖ್ಯೆಯಿರುವ ಈ ಸಮುದಾಯದ ಮೇಲಿನ ದಾಳಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ. "ಸ್ವಾತಂತ್ರ್ಯ ಬಂದ ಅನೇಕ ವರ್ಷಗಳ ನಂತರವೂ ಪಾರ್ಧಿಗಳನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತಿದೆ. ಜನರು ಅವರು ಹಳ್ಳಿಯಲ್ಲಿರುವುದನ್ನು ಬಯಸದ ಕಾರಣ ಈ ದಾಳಿ ನಡೆದಿದೆ" ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಶೋಭಾ ಚವಾಣ್ ಅವರ ಪ್ರಕರಣವನ್ನು ಪ್ರತಿನಿಧಿತ್ತಿರುಸುವ ವಕೀಲ ಸಿದ್ಧಾರ್ಥ್ ಶಿಂಧೆ ವಿವರಿಸುತ್ತಾರೆ. ಮತ್ತು ಕೋವಿಡ್-19ರ ಕಾರಣದಿಂದಾಗಿ ಜನರು ಹೆಚ್ಚು ಓಡಾಡಬಾರದೆಂದು ಪ್ರಾಧಿಕಾರಗಳು ಬಯಸುತ್ತಿದ್ದರೂ, ಈ ಪಾರ್ಧಿ ಕುಟುಂಬಗಳನ್ನು ಮಾತ್ರ ಅವರ ಮನೆಗಳಿಂದ ಹೊರಹಾಕಲಾಗುತ್ತಿದೆ.
೧೦ ಆರೋಪಿಗಳಲ್ಲಿ - ಪ್ರಬಲ ಮರಾಠಾ ಸಮುದಾಯದ ಎಲ್ಲರನ್ನೂ - ಶೋಭಾ ಎಫ್ ಐಆರ್ ದಾಖಲಿಸಿದ ಕೂಡಲೇ ಎಂಟು ಜನರನ್ನು ಬಂಧಿಸಲಾಗಿದೆ. "ಹಳ್ಳಿಯ ಜನರಿಗೆ ತೊಂದರೆ ಮಾಡಿದ್ದಕ್ಕಾಗಿ" ಪಾರ್ಧಿ ಕುಟುಂಬಗಳ ಮೇಲೆ ಹಲ್ಲೆ ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ರಿಮಾಂಡ್ ಟಿಪ್ಪಣಿ ಹೇಳುತ್ತದೆ. ಪ್ರಕರಣದ ತನಿಖಾ ಅಧಿಕಾರಿ ಮತ್ತು ಉಪ ಪೊಲೀಸ್ ಅಧೀಕ್ಷಕ ವಿಜಯ್ ಲಗಾರೆ ಅವರು ಹೆಚ್ಚಿನ ವಿವರಗಳಿಗಾಗಿ ಈ ವರದಿಗಾರನ ದೂರವಾಣಿ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ.
ಶೋಭಾ ಅವರ ಪುತ್ರ ಕೇದಾರ್ ತನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆಂದು ಆರೋಪಿಯೊಬ್ಬ ಹೇಳಿದ್ದಾನೆ. ಕೇದಾರ್ ದಾಳಿಯ ಮಾಡಿದ್ದನ್ನು ಶಿಂಧೆ ಖಚಿತಪಡಿಸಿದ್ದು, ಕಿರುಕುಳಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾರೆ. "ಪಾರ್ಧಿ ಕುಟುಂಬಗಳು ಹಲವು ವರ್ಷಗಳಿಂದ ಕಿರುಕುಳವನ್ನು ಅನುಭವಿಸುತ್ತಿವೆ, ಅದಕ್ಕಾಗಿಯೇ ಈ ಹೋರಾಟ ಪ್ರಾರಂಭವಾಯಿತು." ದಾಳಿಕೋರರು ಪೊಲೀಸರಿಗೆ ದೂರು ನೀಡಬೇಕಿತ್ತೆಂದು ವಕೀಲರು ಹೇಳುತ್ತಾರೆ. “ಆದರೆ, ಅವರು ಕುಟುಂಬದ ಮೇಲೆ ದಾಳಿ ಮಾಡಿದರು, ಇಬ್ಬರು ಸದಸ್ಯರನ್ನು ಕೊಂದರು ಮತ್ತು ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು. ಅವರು ಇದೆಲ್ಲವನ್ನೂ ಮಾಡಿದ್ದು ಕೇವಲ ಕುಟುಂಬವನ್ನು ಗ್ರಾಮದಿಂದ ಹೊರಹಾಕುವ ಸಲುವಾಗಿ.”
ಪಾರ್ಧಿ ಸಮುದಾಯದವರು ಜಮೀನು ಹೊಂದುವುದು ಗ್ರಾಮಸ್ಥರಿಗೆ ಇಷ್ಟವಿಲ್ಲ ಎಂದು ಶೋಭಾ ಅವರ ಎರಡನೇ ಪುತ್ರ ಕೃಷ್ಣ ವಿವರಿಸುತ್ತಾರೆ. ಕೃಷ್ಣ ಹೇಳುತ್ತಾರೆ, “ನಮ್ಮ ಮನೆಯ ಮುಂದೆ ಎರಡು ಎಕರೆ ಕೃಷಿಭೂಮಿಯಿದೆ, ಅದು ಗ್ರಾಮದ ಹೊರಭಾಗದಲ್ಲಿದೆ. ಅದು ನಮ್ಮ ಬಳಿಯಿರುವುದು ಅವರಿಗೆ ಇಷ್ಟವಿಲ್ಲ. ಸುಮಾರು 4-5 ವರ್ಷಗಳ ಹಿಂದೆ ತಂದೆಯ ಮೇಲೆ ಹಲ್ಲೆ ನಡೆಸಿ ಕೈ ಮುರಿದಿದ್ದರು. ನಮ್ಮನ್ನು ಗ್ರಾಮದಿಂದ ಓಡಿಸಲು ನಮ್ಮ ಮೇಲೆ ಜಾನುವಾರು ಕಳ್ಳತನದ ಆರೋಪ ಹೊರಿಸಿ ಸುಳ್ಳು ದೂರು ದಾಖಲಿಸುತ್ತಿದ್ದಾರೆ. ಸಾಮಾಜಿಕ ಸ್ಥಾನಮಾನದಲ್ಲಿ ದುರ್ಬಲವಾಗಿರುವ ಕಾರಣ (ನಮ್ಮ ಜಾತಿ), ಪೊಲೀಸರು ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಸಹಾಯಕ್ಕೆ ನಿಲ್ಲುವುದಿಲ್ಲ,” ಎಂದು ಅವರು ವಿವರಿಸುತ್ತಾರೆ.
ಚವಾಣ್ ಕುಟುಂಬದ ಮೇಲಿನ ದಾಳಿಯ ಕುರಿತು ಮುಂಬೈ ಡೈಲಿಯೊಂದಿಗೆ ಮಾತನಾಡಿದ ಡಿಎಸ್ಪಿ ಲಗಾರೆ, ಸಂತ್ರಸ್ತರನ್ನು "ಹಿಸ್ಟರಿ-ಶೀಟರ್" ಎಂದು ಬಣ್ಣಿಸಿದ್ದಾರೆ. ಮುಂಬೈ ನಗರದಲ್ಲಿ ವಾಸಿಸುವ ಪಾರ್ಧಿ ಸಮುದಾಯದ ಜನರ ಕುರಿತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ಸಂಸ್ಥೆಯ ಸಂಶೋಧಕರು ನಡೆಸಿದ ಅಧ್ಯಯನವು ಹೀಗೆ ಹೇಳಿದೆ: "ಅನೇಕ ಪೊಲೀಸ್ ಅಧಿಕಾರಿಗಳು ತಮ್ಮ ತರಬೇತಿ ಕೈಪಿಡಿಗಳು ಈಗಲೂ ಪಾರ್ಧಿಗಳು ಮತ್ತು ಇತರ ʼಡಿ-ನೋಟಿಫೈಡ್ʼ ಸಮುದಾಯಗಳ ಜನರನ್ನು ಕಳ್ಳರು ಮತ್ತು ದುಷ್ಟರು ಎಂದು ಹೇಳುತ್ತವೆ ಎಂದಿದ್ದಾರೆ."
ಹೆಚ್ಚಿನ ಪಾರ್ಧಿ ಸಮುದಾಯದ ಜನರು ಗೋಮಾಳಗಳಲ್ಲಿ ವಾಸಿಸುತ್ತಿದ್ದಾರೆ. ಕೆಲವರಿಗೆ ಸರ್ಕಾರದಿಂದ ಭೂಮಿ ಮಾಲೀಕತ್ವದ ಹಕ್ಕು ನೀಡಲಾಗಿದೆ, ಆದರೆ ಹಲವರಿಗೆ ನೀಡಿಲ್ಲ. ಕೃಷ್ಣ ಹೇಳುತ್ತಾರೆ, “ನಮ್ಮಲ್ಲಿ ಹೆಚ್ಚಿನವರು ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತೇವೆ. [ಕೋವಿಡ್] ಲಾಕ್ಡೌನ್ನಿಂದ, ನಾವು ಜೀವನೋಪಾಯಕ್ಕಾಗಿ ನಿರಂತರ ಹೋರಾಡುವಂತಾಗಿದೆ. ಮತ್ತೆ ಇದರ ಜೊತೆಯಲ್ಲಿ ಇಂತಹ ಕಿರುಕುಳಗಳನ್ನು ಸಹಿಸಿಕೊಳ್ಳುವುದು ನಮಗೆ ತುಂಬಾ ಕಷ್ಟವಾಗುತ್ತದೆ.”
ಮಾರ್ಚ್ 2020ರ ಕೊನೆಯಲ್ಲಿ ಇದ್ದಕ್ಕಿದ್ದಂತೆ ವಿಧಿಸಲಾದ ಕೊವಿಡ್-19, ಪಾರ್ಧಿ ಸಮುದಾಯದ ಜನರು ತೀವ್ರ ಕಷ್ಟಗಳನ್ನು ಎದುರಿಸಿದ್ದಾರೆ . “ಸಾಮಾನ್ಯ ಸಮಯದಲ್ಲೇ ಜನರು ಅವರನ್ನು ನಂಬಿ ಕೆಲಸ ಕೊಡುತ್ತಿರಲಿಲ್ಲ. ಯಾವಾಗ ಕೆಲಸಗಳು ಕಡಿಮೆ ಕೆಲಸಗಾರರು ಹೆಚ್ಚು ಎನ್ನುವ ಪರಿಸ್ಥಿತಿ ಎದುರಾಯಿತೋ ಪಾರ್ಧಿ ಜನರು ಕೆಲಸ ನೀಡುವವರಿಗೆ ಕೊನೆಯ ಆದ್ಯತೆಯಾದರು. ಹಗಲಿನಲ್ಲಿ ಸಮಾಜ ಅವರನ್ನು ಮುಕ್ತವಾಗಿ ಬಿಡುವುದಿಲ್ಲ, ರಾತ್ರಿಯಾದರೆ ಪೋಲಿಸರು ಅವರನ್ನು ಬೆಂಬತ್ತುತ್ತಾರೆ,” ಎನ್ನುತ್ತಾರೆ ಶಿಂಧೆ. ಅವರು ಅಂಚಿನಲ್ಲಿರುವ ಸಮುದಾಯಗಳ ವಿರುದ್ಧ ತಾರತಮ್ಯದ ಪ್ರಕರಣಗಳ ಹೋರಾಡುವ ವಕೀಲರು.
ಪಾರ್ಧಿ ಜನರು ಸಾಮಾನ್ಯವಾಗಿ ದಿನಗೂಲಿ ಕೆಲಸಗಳನ್ನು ಹುಡುಕುತ್ತಾರೆ ಮತ್ತು ಕಬ್ಬು ಕತ್ತರಿಸಲು ಅಥವಾ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲೆಂದು ಆಯಾ ಹಂಗಾಮಿನಲ್ಲಿ ವಲಸೆ ಹೋಗುತ್ತಾರೆ. ಕೆಲವರು ಮುಂಬೈ ಮತ್ತು ಪುಣೆಯಂತಹ ದೊಡ್ಡ ನಗರಗಳಿಗೆ ಶಾಶ್ವತವಾಗಿ ತೆರಳುತ್ತಾರೆ. ಟಿಐಎಸ್ಎಸ್ ಅಧ್ಯಯನವು ಆಸ್ತಿಗಳು ಮತ್ತು ಉದ್ಯೋಗ ಲಭ್ಯತೆಯ ಕೊರತೆ ಮತ್ತು "ಪ್ರಾದೇಶಿಕ ಅಭಿವೃದ್ಧಿಯ ಕೊರತೆಯಿಂದ ಉಂಟಾಗಿರುವ ಬಡತನದ ಪರಿಸ್ಥಿತಿಗಳು ಮತ್ತು ಪೋಲಿಸ್ ಮತ್ತು ಗ್ರಾಮಸ್ಥರಿಂದ ನಿತ್ಯ ಕಿರುಕುಳದ ಅನುಭವವು ಪಾರ್ಧಿ ಕುಟುಂಬಗಳನ್ನು ಅವರ ಸಮುದಾಯದ ಮುಲುಕ್ಗಳಿಂದ [ಪೂರ್ವಜರ ಹಳ್ಳಿ] ನಗರಕ್ಕೆ ಹೋಗಬೇಕಾದ ಅನಿವಾರ್ಯತೆಗಳನ್ನು ಸೃಷ್ಟಿಸುತ್ತಿವೆ."
ನವೆಂಬರ್ 2020ರಲ್ಲಿ, ಲಾಕ್ಡೌನ್ ನಂತರ ಬೀಡ್ನಲ್ಲಿ ಇಟ್ಟಿಗೆ ಗೂಡುಗಳು ಪುನರಾರಂಭಗೊಂಡಾಗ, ಪರಲಿ ತಾಲೂಕಿನ ಸಣ್ಣ ಪಟ್ಟಣವಾದ ಸಿರ್ಸಾಲಾದ ವಿಠ್ಠಲ್ ಪವಾರ್ ಕೂಡ ಕೆಲಸಕ್ಕೆ ಮರಳಿದರು. ಅವರು ಹೇಳುತ್ತಾರೆ, “ನಮ್ಮನ್ನು ಹೊರತುಪಡಿಸಿ, ಉಳಿದ ಎಲ್ಲಾ ಇಟ್ಟಿಗೆ ಗೂಡು ಕೆಲಸಗಾರರಿಗೂ ಗುತ್ತಿಗೆದಾರ ಅಡ್ವಾನ್ಸ್ (ಮುಂಗ) ಕೊಡುತ್ತಾರೆ. ನಮಗೆ ದಿನದ ಸಂಬಳ 300 ರೂ. ಕೂಲಿ ಮಾತ್ರವೇ ನೀಡಲಾಗುತ್ತದೆ ಮತ್ತು ಇದಕ್ಕೆ ನಾವು ಪಾರ್ಧಿಗಳು ಎಂಬುದಷ್ಟೇ ಕಾರಣ. ನಾವು ವರ್ಷಗಳಿಂದ ಮುಖ್ಯ ಪ್ರವಾಹವನ್ನು [ಮುಖ್ಯವಾಹಿನಿಗೆ] ಸೇರಲು ಪ್ರಯತ್ನಿಸುತ್ತಿದ್ದರೂ, ಸಮಾಜದಲ್ಲಿ ನಮ್ಮನ್ನು ಈಗಲೂ ಅಪರಾಧಿಗಳಂತೆಯೇ ನಡೆಸಿಕೊಳ್ಳಲಾಗುತ್ತಿದೆ.
ತನ್ನ ಹೆಸರಿನಲ್ಲಿ ಯಾವುದೇ ಕೃಷಿಭೂಮಿಯಿಲ್ಲದ 45 ವರ್ಷದ ವಿಠ್ಠಲ್ ಕೆಲಸಕ್ಕಾಗಿ ರೈತರು ಮತ್ತು ಇಟ್ಟಿಗೆ ಗೂಡು ಗುತ್ತಿಗೆದಾರರನ್ನು ಅವಲಂಬಿಸಿದ್ದಾರೆ. "ಆದರೆ ನಮ್ಮನ್ನು ಯಾವಾಗಲೂ ಅನುಮಾನದಿಂದ ನೋಡಲಾಗುತ್ತದೆ" ಎಂದು ಅವರು ಹೇಳುತ್ತಾರೆ. "ನಾವು ವರ್ಷಗಳಿಂದ ಹಳ್ಳಿಯ ಜನರಿಂದ ಸ್ವೀಕಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ."
2020ರ ಕೋವಿಡ್ ಲಾಕ್ ಡೌನ್ ಸಮಯದಲ್ಲಿ, ವಿಠ್ಠಲ್ ಅವರ ಐದು ಜನರ ಕುಟುಂಬವು ಸರ್ಕಾರವು ಒದಗಿಸಿದ ಉಚಿತ ಪಡಿತರದಿಂದ ದಿನ ಕಳೆಯಿತು. ಆದರೆ ನಂತರದ ದಿನಗಳಿಂದ ಬದುಕು ನಡೆಸುವುದು ಕಷ್ಟಕರವಾಗಿದೆ ಏಕೆಂದರೆ ಕೂಲಿ ಕೆಲಸವು ಹೆಚ್ಚು ಸಿಗುತ್ತಿಲ್ಲ. ಮಹಾಮಾರಿ ಬರುವ ಮೊದಲು ವಿಠ್ಠಲ್ ಅವರಿಗೆ ಒಂದು ವಾರದಲ್ಲಿ 4-5 ದಿನಗಳ ಕೆಲಸ ಸಿಗುತ್ತಿತ್ತು, ಆದರೆ ಈಗ ಕೇವಲ 2-3 ದಿನಗಳು ಮಾತ್ರ. ಅವರ ವಾರದ ಆದಾಯ ಸುಮಾರು 1,200ರಿಂದ 600 ರೂ.ಗೆ ಇಳಿಕೆಯಾಗಿದೆ.
ಈ ವರ್ಷದ ಜೂನ್ನಲ್ಲಿ ವಿಠ್ಠಲ್ ವಾಸವಿರುವ ಜಮೀನನ್ನು ಬಿಟ್ಟುಕೊಡುವಂತೆ ನೋಟಿಸ್ ಬಂದಿದ್ದು, ಇದು ಅವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಬೀಡ್-ಪರ್ಲಿ ಹೆದ್ದಾರಿ ಬದಿಯ ಈ ಜಮೀನಿನಲ್ಲಿ ವಾಸಿಸುತ್ತಿರುವ ವಿಠ್ಠಲ್ ಹಾಗೂ ಇತರೆ 10 ಕುಟುಂಬಗಳಿಗೆ ಈ ಜಮೀನಿನಲ್ಲಿ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ಹೊಸ ಯೋಜನೆ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
"ನಾವು ಎಲ್ಲಿಗೆ ಹೋಗಬೇಕು?" ವಿಠ್ಠಲ್ ಪ್ರಶ್ನಿಸುತ್ತಾರೆ. "ನಾವು ಅಧಿಕಾರಿಗಳನ್ನು ಕೇಳಿದಾಗ, ಅವರು ಹೇಳಿದರು, 'ನಿಮಗೆ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿ.'
ಅವರ 60 ವರ್ಷದ ಚಿಕ್ಕಮ್ಮ ಗುಲಾಮ್ ಬಾಯಿ ನಾಲ್ಕು ದಶಕಗಳಿಂದ ತಮ್ಮ ಕುಟುಂಬದೊಡನೆ ಸಿರ್ಸಲಾದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಈಗಲೂ, ಗ್ರಾಮಸ್ಥರು ಅವರನ್ನು ಅನುಮಾನದಿಂದ ನೋಡುತ್ತಾರೆ. "ಅಂತಹ ವಿಶ್ವಾಸದ ಕೊರತೆಯಿರುವಾಗ ನಮ್ಮನ್ನು ಬೇರೆಡೆ ಜನರು [ಇಲ್ಲಿಂದ ತೆರಳಿದರೆ] ಹೇಗೆ ಒಪ್ಪಿಕೊಳ್ಳುತ್ತಾರೆ, ಜನರಲ್ಲಿ ನಮ್ಮ ಕುರಿತು ವಿಶ್ವಾಸವೇ ಬೆಳೆದಿಲ್ಲದಿರುವಾಗ?? ಅದೂ ಈ ಕೊವಿಡ್ ಕಾಲದಲ್ಲಿ?" ಎಂದು ಕೇಳುತ್ತಾರೆ. "ನಾನು ಇಲ್ಲಿ 40 ವರ್ಷಗಳಿಂದ ವಾಸಿಸುತ್ತಿದ್ದೇನೆ, ಆದರೆ ಈಗಲೂ ನಾನು 'ಅತಿಕ್ರಮಣಕಾರ'ಳಾಗಿಯೇ ಉಳಿದಿದ್ದೇನೆ. ಈ ವಯಸ್ಸಿನಲ್ಲಿ ನಾನು ಎಲ್ಲಿಗೆ ಹೋಗುವುದು?"
ವಿಠ್ಠಲ್ ಮತ್ತು ಗುಲಾಮ್ ಪಡಿತರ ಚೀಟಿಗಳು ಮತ್ತು ಮತದಾರರ ಕಾರ್ಡುಗಳನ್ನು ಹೊಂದಿದ್ದರೂ, ಮತ್ತು ಅವರು ವಿದ್ಯುತ್ ಬಿಲ್ಲುಗಳನ್ನು ಸಹ ಪಾವತಿಸುತ್ತಿದ್ದರೂ, ಅವರುಗಳನ್ನು ಸ್ಥಳಾಂತರಿಸುವುದು ಆಡಳಿತಕ್ಕೆ ಸುಲಭ ಏಕೆಂದರೆ ಅವರ ಬಳಿ ಅವರು ವಾಸಿಸುವ ಭೂಮಿಯ ಹಕ್ಕುಪತ್ರವಿಲ್ಲ.
ಸ್ವಾತಂತ್ರ್ಯದ ನಂತರ ಜಾರಿಗೆ ತಂದ ಎಲ್ಲಾ ನೀತಿಗಳು ಮತ್ತು ಭೂಸುಧಾರಣಾ ಕ್ರಮಗಳ ಹೊರತಾಗಿಯೂ, ಸಮಾಜದ ಅಂಚಿನಲ್ಲಿರುವ ಮತ್ತು ಬಹಿಷ್ಕೃತ ಸಮುದಾಯಗಳಿಗೆ ಭೂಮಿ ಹಂಚಿಕೆಯ ಬಗ್ಗೆ ಸರ್ಕಾರಗಳು ಕೇವಲ ಮಾತುಗಳನ್ನಷ್ಟೇ ಆಡಿವೆ. 2011ರಲ್ಲಿ ಮಹಾರಾಷ್ಟ್ರ ಸರ್ಕಾರವು ಗೈರಾನ್ ಭೂಮಿಯ (ಗೋಮಾಳ) 'ಅಕ್ರಮ'ವನ್ನು ತಡೆಯಲು ನಿರ್ಧರಿಸಿತು. 1950ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತರಿಗೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಕರೆ ನೀಡಿದರು, ನಂತರ ದಲಿತರು ಮತ್ತು ಇತರ ಹಿಂದುಳಿದ ಸಮುದಾಯಗಳು ಸ್ವಾಧೀನಪಡಿಸಿಕೊಂಡ ಭೂಮಿಯನ್ನು 'ಅತಿಕ್ರಮಣ' ಎಂದು ಕರೆಯಲಾಯಿತು. ದಲಿತರ ಆರ್ಥಿಕ ಸ್ಥಿತಿ ಸುಧಾರಿಸಬೇಕಾದರೆ ಅವರಿಗೆ ಸ್ವಂತ ಭೂಮಿ ಇರಬೇಕೆನ್ನುವುದು ಡಾ.ಅಂಬೇಡ್ಕರ್ ಅವರ ನಂಬಿಕೆಯಾಗಿತ್ತು.
"ನಾವು ಮೊದಲು ಇಲ್ಲಿಗೆ ಬಂದಾಗ, ಈ ಭೂಮಿಯಲ್ಲಿ ಕೇವಲ ಪೊದೆಗಳು ಮತ್ತು ಮರಗಳು ಇದ್ದವು" ಎಂದು ಗುಲಾಮ್ ಹೇಳುತ್ತಾರೆ. "ಆದರೆ ನಾವು ಈ ಭೂಮಿಯಲ್ಲಿ ಕೆಲಸ ಮಾಡಿದೆವು, ಅದನ್ನು ಉಳುಮೆ ಮಾಡಿದೆವು, ಅದನ್ನು ಬದುಕಲು ಮತ್ತು ಕೃಷಿಯೋಗ್ಯವಾಗಿಸಿದೆವು. ಈಗ ನಮ್ಮನ್ನು ಹೊರಹಾಕಲಾಗುತ್ತದೆ ಮತ್ತು ಆ ಕುರಿತು ಯಾರೂ ಕಾಳಜಿ ವಹಿಸುವುದಿಲ್ಲ."
ಗುಲಾಮ್ ಹೇಳುತ್ತಿರುವುದು ಸರಿಯಿದೆ.
ಶೋಭಾ ಚವಾಣ್ ಅವರ ಕುಟುಂಬ ಭಯದ ನೆರಳಲ್ಲಿ ಜೀವನ ನಡೆಸುತ್ತಿದ್ದರೂ ಊರಿನಲ್ಲಿ ಅವರ ಕುರಿತು ಯಾರೂ ತಲೆಕೆಡಿಸಿಕೊಂಡಿಲ್ಲ. ಅಕ್ಟೋಬರ್ನಲ್ಲಿ ನಡೆದ ದಾಳಿಯ ನಂತರ, ಕುಟುಂಬವು ವಿವಿಧ ದಿಕ್ಕುಗಳಲ್ಲಿ ಚದುರಿಹೋಗಿದೆ. ಶೋಭಾ ತನ್ನ ಇನ್ನೊಬ್ಬ ಮಗಳೊಂದಿಗೆ ಮನೆಯಿಂದ 150 ಕಿಮೀ ದೂರದಲ್ಲಿ ವಾಸಿಸುತ್ತಿದ್ದಾರೆ. ಕೇದಾರ ಎಲ್ಲಿದ್ದಾರೆನ್ನುವುದು ಗೊತ್ತಿಲ್ಲ. ಅವರ ಫೋನ್ ಸ್ವಿಚ್ ಆಫ್ ಆಗಿದೆ ಮತ್ತು ಆ ದುರಂತದ ರಾತ್ರಿಯ ನಂತರ, ಯಾರೂ ಅವರನ್ನು ನೋಡಿಲ್ಲ. ದಾಳಿಯ ನಂತರವೂ, ಅನಿತಾ ಹಳ್ಳಿಯಲ್ಲಿಯೇ ಉಳಿದರು, ಆದರೆ ಗ್ರಾಮಸ್ಥರ ಆಕ್ರೋಶಭರಿತ ಕಣ್ಣುಗಳು ಕಣ್ಣುಗಳನ್ನು ಎದುರಿಸಲಾಗದೆ, ಅವರು ಸಹ ಊರು ಬಿಟ್ಟರು. ಪ್ರತಿಯೊಬ್ಬರೂ ಈ ಪ್ರಕರಣದ ವಿರುದ್ಧ ಹೋರಾಡಿ ನ್ಯಾಯ ಪಡೆಯುವ ನಿರ್ಧಾರದಲ್ಲಿದ್ದಾರೆ, ಆದರೆ ಅದಕ್ಕಾಗಿಯೂ ಅವರು ಬೆಲೆ ತೆರಬೇಕಾಗುತ್ತದೆಯೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕಿದೆ.
ಅಕ್ಟೋಬರ್ ತಿಂಗಳಿನಲ್ಲಿ ಹಲ್ಲೆಗೊಳಗಾದ ಕುಟುಂಬದ ಸದಸ್ಯರ ಹೆಸರುಗಳನ್ನು ಅವರ ಗುರುತುಗಳನ್ನು ರಕ್ಷಿಸುವ ಸಲುವಾಗಿ ಬದಲಾಯಿಸಲಾಗಿದೆ.
ಈ ವರದಿಯು ಪತ್ರಕರ್ತರಿಗೆ ಕೊಡುವ ಪುಲಿಟ್ಜರ್ ಕೇಂದ್ರದ ಸಹಯೋಗದ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಸರಣಿ ವರದಿಗಳ ಒಂದು ಭಾಗ.
ಅನುವಾದ: ಶಂಕರ ಎನ್. ಕೆಂಚನೂರು