ನಾನು ಜನಿಸಿದ ಅವಿಭಜಿತ ಕಾಲಹಂಡಿ ಜಿಲ್ಲೆಯಲ್ಲಿ, ಬರ, ಹಸಿವು, ಹಸಿವಿನಿಂದ ಸಂಭವಿಸಿದ ಸಾವುಗಳು ಮತ್ತು ಸಂಕಷ್ಟದ ವಲಸೆ ಇವೆಲ್ಲವೂ ಜನರ ಜೀವನದ ಅವಿಭಾಜ್ಯ ಅಂಗವಾಗಿತ್ತು. ನಾನು ಸಣ್ಣ ಹುಡುಗನಾಗಿ ಮತ್ತು ನಂತರ ಪತ್ರಕರ್ತನಾಗಿ ಇಂತಹ ವಿಷಯಗಳಿಗೆ ಸ್ಪಷ್ಟವಾಗಿ ಸಾಕ್ಷಿಯಾಗಿರುವುದರ ಜೊತೆಗೆ ಅವುಗಳ ಬಗ್ಗೆ ವರದಿಯನ್ನೂ ಮಾಡಿದ್ದೇನೆ. ಇದರಿಂದಾಗಿ ಇಲ್ಲಿ ಜನರು ವಲಸೆ ಹೋಗುವುದೇಕೆ?, ವಲಸೆ ಹೋಗುವವರು ಯಾರು, ಎಂತಹ ಪರಿಸ್ಥಿತಿಗಳು ಅವರನ್ನು ವಲಸೆ ಹೋಗುವಂತೆ ಮಾಡುತ್ತವೆ, ಅವರು ತಮ್ಮ ಜೀವನೋಪಾಯವನ್ನು ಗಳಿಸುವುದು ಹೇಗೆ- ಮತ್ತು ಅವರು ತಮ್ಮ ದೈಹಿಕ ಸಾಮರ್ಥ್ಯವನ್ನು ಮೀರಿ ಮಾಡುವ ಕೆಲಸದ ವಿಧಾನದ ಬಗ್ಗೆ ನನಗೆ ಅರಿವಿದೆ.
ಅವರಿಗೆ ಸರ್ಕಾರದ ನೆರವಿನ ಅಗತ್ಯವಿದ್ದಾಗಲೇ ಅವರನ್ನು ಕೈಬಿಡುವುದು ಈಗ ಸಹಜ ಎನ್ನುವಂತಾಗಿದೆ, ಆಹಾರ, ನೀರು, ಸಾರಿಗೆಯಿಲ್ಲದೆ ಮತ್ತು ನೂರಾರು ಕಿಲೋಮೀಟರ್ ದೂರದ ಸ್ಥಳಗಳಿಗೆ ಅವರು ಒಂದು ಜೊತೆ ಚಪ್ಪಲಿ ಇಲ್ಲದೆ ನಡೆಯಬೇಕಾಯಿತು.
ನಾನು ಭಾವಜೀವಿಯಾಗಿರುವುದರಿಂದ ನನಗೆ ಇದು ನೋವನ್ನುಂಟು ಮಾಡುತ್ತದೆ, ಇಲ್ಲಿನ ಜನರಲ್ಲಿ ನಾನೂ ಒಬ್ಬ ಎನ್ನುವಂತೆ, ಅವರು ಖಂಡಿತವಾಗಿಯೂ ನನ್ನ ಜನರು. ಹಾಗಾಗಿ ನಾನು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದೇನೆ ಮತ್ತು ಅದೇ ಜನರನ್ನು ಅದೇ ಸಮುದಾಯಗಳನ್ನು ನೋಡಿದಾಗ ಅಸಹಾಯಕನಾಗಿದ್ದೇನೆ, ಅದು ನನ್ನನ್ನು ಕೆರಳಿಸಿದೆ, ಮತ್ತು ಈ ಪದಗಳನ್ನು ಮತ್ತು ಪದ್ಯವನ್ನು ಬರೆಯಲು ನಾನು ಯಾವುದೇ ಕವಿಯಲ್ಲ.




