"ಪಟ್ಟಾ ಹೊಂದಿರುವ ಭೂಮಾಲೀಕರಿಗಿಂತ ನಮಗೆ ಕಡಿಮೆ ಪರಿಹಾರ ನೀಡಲಾಗುತ್ತಿದೆ. ಇದು ಏಕೆ ಹೀಗೆ?" ಎಂದು 55 ವರ್ಷದ ತುರ್ಕಾ ಬಾಬುರಾವ್ ಪ್ರಶ್ನಿಸುತ್ತಾರೆ. ಬಾಬುರಾವ್ ಗುಂಟೂರು ಜಿಲ್ಲೆಯ ಸುಮಾರು 4,800 ಜನಸಂಖ್ಯೆಯ ರಾಯಪುಡಿ ಗ್ರಾಮದಲ್ಲಿ ಅರ್ಧ ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ದಲಿತ ರೈತ. ಹೊಸ ವಿಶ್ವ ದರ್ಜೆಯ ರಾಜಧಾನಿ ಅಮರಾವತಿ ನಿರ್ಮಿಸಲು ಭೂಮಿ ಸ್ವಾಧೀನಪಡಿಸಿಕೊಂಡು ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವುದಾಗಿ ಹೇಳಿರುವುದರ ಕುರಿತು ಅವರು ಮಾತನಾಡುತ್ತಿದ್ದಾರೆ. "ವಾಸ್ತವವಾಗಿ, ನಮ್ಮ ಜಮೀನುಗಳು ಹೆಚ್ಚು ಫಲವತ್ತಾದವು ಏಕೆಂದರೆ ಅವು ಕೃಷ್ಣೆಯ ದಡದಲ್ಲಿವೆ" ಎಂದು ಅವರು ಹೇಳುತ್ತಾರೆ.
ಬಾಬುರಾವ್ ಮತ್ತು ಅವರಂತಹ ದಲಿತ ಅಥವಾ ಇತರ ಹಿಂದುಳಿದ ವರ್ಗಗಳ 800 ರೈತರು ರಾಯಪುಡಿಯ ಇನಾಂ ಭೂಮಾಲೀಕರ ರೈತರ ಕಲ್ಯಾಣ ಸಂಘದ ಸದಸ್ಯರಾಗಿದ್ದಾರೆ. ಆಂಧ್ರಪ್ರದೇಶದ ಭೂ ಸುಧಾರಣೆ (ಕೃಷಿ ಹಿಡುವಳಿಗಳ ಮೇಲಿನ ಮಿತಿಗಳು) ಕಾಯಿದೆ, 1973ರ ಅಡಿಯಲ್ಲಿ, ಈ ರೈತರಿಗೆ ರಾಯಪುಡಿಯ ಕೃಷ್ಣಾ ಮತ್ತು ಅದರ ದ್ವೀಪಗಳ ದಡದಲ್ಲಿ (ಈ ಜಮೀನುಗಳನ್ನು Assigned Lands ಎಂದು ಕರೆಯಲಾಗುತ್ತದೆ) 'ಇನಾಮು' (ಅಂದಾಜು 2000 ಎಕರೆ) ಭೂಮಿಯನ್ನು ನೀಡಲಾಯಿತು. ಈ ಜಮೀನುಗಳನ್ನು ಪಡೆದಿರುವ ಬಹುತೇಕ ಕುಟುಂಬಗಳು ದಲಿತ ಅಥವಾ ಇತರೆ ಹಿಂದುಳಿದ ಜಾತಿಗಳಿಂದ ಬಂದಿವೆ.
‘‘ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನವೇ ಹಲವು ತಲೆಮಾರುಗಳಿಂದ ಈ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಇಂದಿರಾಗಾಂಧಿ ನಮಗೆ ಪಟ್ಟಾ ನೀಡಿ ಈ ಜಮೀನುಗಳ ಒಡೆತನವನ್ನು ನಮಗೆ ನೀಡಿದರು ಎಂದು ಬಾಬುರಾವ್ ಹೇಳುತ್ತಾರೆ. ಆಂಧ್ರಪ್ರದೇಶ ಅಸೈನ್ಡ್ ಲ್ಯಾಂಡ್ಸ್ (ವರ್ಗಾವಣೆ ನಿಷೇಧ) ಕಾಯಿದೆ, 1977ರ ಪ್ರಕಾರ, ಈ ಭೂಮಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ, ಅವುಗಳನ್ನು ಒಬ್ಬ ಕುಟುಂಬದ ಸದಸ್ಯರಿಂದ ಇನ್ನೊಬ್ಬರಿಗೆ ಮಾತ್ರ ರವಾನಿಸಬಹುದು.
ಆದಾಗ್ಯೂ, ಸರ್ಕಾರವು ತನ್ನ ' ಗ್ರೀನ್ಫೀಲ್ಡ್ ' ರಾಜಧಾನಿಯ ನಿರ್ಮಾಣದ ಮೊದಲ ಹಂತಕ್ಕಾಗಿ 33,000 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಪ್ರಕಾರ ಇವುಗಳಲ್ಲಿ ಸುಮಾರು 10,000 ಎಕರೆಗಳನ್ನು ಇನಾಂ ಭೂಮಿಯಾಗಿ ಹಂಚಿಕೆ ಮಾಡಲಾಗಿದ್ದು, ಉಳಿದವು ಮೇಲ್ಜಾತಿಯ ಕಮ್ಮಾ, ಕಾಪು ಮತ್ತು ರೆಡ್ಡಿ ರೈತರು ಸಾಗುವಳಿ ಮಾಡುತ್ತಿರುವ ಪಟ್ಟಾ ಜಮೀನುಗಳಾಗಿವೆ.









