ಒಂದು ಹದವಾದ ಬಿಸಿಲುಳ್ಳ ದಿನದಂದು 39 ವರ್ಷದ ಸುನೀತಾ ರಾಣಿ ಸುಮಾರು 30ರಷ್ಟಿದ್ದ ಮಹಿಳೆಯರ ಗುಂಪಿನೊಂದಿಗೆ ಮಾತನಾಡುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಂದ ಹೊರಬಂದು ಅವರ ಹಕ್ಕುಗಳಿಗಾಗಿ ಅನಿರ್ದಿಷ್ಟ ಕಾಲದ ಧರಣಿಗೆ ಕುಳಿತುಕೊಳ್ಳುವಂತೆ ಸಲಹೆ ನೀಡುತ್ತಾರೆ. "ಕಾಮ್ ಪಕ್ಕಾ, ನೌಕ್ರಿ ಕಚ್ಚಿ" (ಕೆಲಸದ ಭದ್ರತೆ, ಖಚಿತ ವೇತನ) ಸುನೀತಾ ಕೂಗುತ್ತಾರೆ. "ನಹಿ ಚಲೇಗಿ, ನಹಿ ಚಲೇಗಿ" (ಇದು ಮುಂದುವರಿಯಲು ಸಾಧ್ಯವಿಲ್ಲ, ಇದು ಮುಂದುವರಿಯಲು ಸಾಧ್ಯವಿಲ್ಲ)! ಎಂದು ಉಳಿದ ಮಹಿಳೆಯರು ಒಕ್ಕೊರಲಿನಿಂದ ಘೋಷಣೆ ಕೂಗುತ್ತಿದ್ದರು.
ದೆಹಲಿ-ಹರಿಯಾಣ ಹೆದ್ದಾರಿಯಲ್ಲಿರುವ ಸೋನಿಪತ್ ಪಟ್ಟಣದ ಸಿವಿಲ್ ಆಸ್ಪತ್ರೆಯ ಆವರಣದಲ್ಲಿನ ಹುಲ್ಲುಹಾಸಿನ ಮೇಲೆ, ಜಮಖಾನ ಹಾಸಿ ಕುಳಿತಿರುವ ಕೆಂಪು ಬಣ್ಣದ ಬಟ್ಟೆ ಧರಿಸಿದ ಮಹಿಳೆಯರೊಂದಿಗೆ (ಹರಿಯಾಣದಲ್ಲಿ ಅವರ ಸಮವಸ್ತ್ರ) ಸುನೀತಾ ಅವರೆಲ್ಲರಿಗೂ ತಿಳಿದಿರುವ ಅವರ ಕಷ್ಟಗಳನ್ನು ಪಟ್ಟಿ ಮಾಡುತ್ತಿದ್ದಾರೆ.
ಈ ಎಲ್ಲ ಮಹಿಳೆಯರೂ ಆಶಾ ಕಾರ್ಯಕರ್ತೆಯರು. ಇವರು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಮಿಕರು. ದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್.ಆರ್.ಎಚ್.ಎಮ್.)ನ ಕಾಲಾಳುಗಳು. ಇದು ಭಾರತದ ಗ್ರಾಮೀಣ ಜನಸಂಖ್ಯೆಯನ್ನು ದೇಶದ ಆರೋಗ್ಯ ವ್ಯವಸ್ಥೆಗೆ ಸಂಪರ್ಕಿಸುವ ನಿರ್ಣಾಯಕ ಕೊಂಡಿಯಾಗಿದೆ. ದೇಶಾದ್ಯಂತ ಒಂದು ಮಿಲಿಯನ್ಗಿಂತಲೂ ಹೆಚ್ಚು ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಾರೆ. ಜೊತೆಗೆ ಇವರು ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳಿಗೆ ಲಭ್ಯವಿರುವ ಮೊದಲ ಆರೋಗ್ಯ ಸೇವಕರಾಗಿದ್ದಾರೆ.
ಪೌಷ್ಠಿಕಾಂಶ, ನೈರ್ಮಲ್ಯ ಮತ್ತು ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿಯನ್ನು ಪ್ರಸಾರ ಮಾಡುವುದರಿಂದ ಹಿಡಿದು ಕ್ಷಯರೋಗಿಗಳ ಚಿಕಿತ್ಸೆಯ ಮೇಲೆ ಕಣ್ಣಿಡುವುದು, ಆರೋಗ್ಯ ಸೂಚಕಗಳ ದಾಖಲೆಯನ್ನು ನಿರ್ವಹಿಸುವುದನ್ನು ಸೇರಿಸಿ ಹನ್ನೆರಡು ಪ್ರಾಥಮಿಕ ಜವಾಬ್ದಾರಿಗಳು ಮತ್ತು 60ಕ್ಕೂ ಹೆಚ್ಚು ಉಪ ಜವಾಬ್ದಾರಿಗಳನ್ನು ಅವರು ನಿರ್ವಹಿಸುವ ಅಗತ್ಯವಿದೆ.
ಅವರು ಇಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ. ಸುನೀತಾ ಹೇಳುತ್ತಾರೆ "ನಾವು ನಿಜವಾಗಿ ಯಾವ ಟ್ರೈನಿಂಗ್ ಪಡೆದಿದ್ದೇವೋ, ಅದೇ ಹಿಂದೆ ಉಳಿದುಹೋಗಿದೆ. ನಮಗೆ ತಾಯಂದಿರು ಮತ್ತು ನವಜಾತ ಶಿಶುವಿನ ಆರೋಗ್ಯ ಅಂಕಿಅಂಶಗಳನ್ನು ಸುಧಾರಿಸಲು ತರಬೇತಿ ನೀಡಲಾಗಿದೆ." ಸುನೀತಾ ಸೋನಿಪತ್ ಜಿಲ್ಲೆಯ ನಾಥುಪುರ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದು, 2,953 ಜನಸಂಖ್ಯೆಯ ಆರೋಗ್ಯ ಸಂಬಂಧಿ ವಿಷಯಗಳನ್ನು ನೋಡಿಕೊಳ್ಳುವ ಮೂವರಲ್ಲಿ ಇವರೂ ಒಬ್ಬರು.








