"ಸುಮಾರು 30 ವರ್ಷಗಳ ಹಿಂದೆ ಸ್ಪಿಟಿಯಲ್ಲಿ ಭಾರಿ ಹಿಮಪಾತವಾಗುತ್ತಿತ್ತು. ಅದು ಹಸಿರಿನಿಂದ ಕೂಡಿರುತ್ತಿತ್ತು ಮತ್ತು ಹುಲ್ಲು ಕೂಡ ಚೆನ್ನಾಗಿ ಬೆಳೆಯುತ್ತಿತ್ತು," ಎಂದು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಜಿಲ್ಲೆಯ ಪಶುಪಾಲಕ ಮತ್ತು ರೈತ ಚೆರಿಂಗ್ ಆಂಗ್ದುಯಿ ಹೇಳುತ್ತಾರೆ.
43 ವರ್ಷ ಪ್ರಾಯದ ಅವರು ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಮತ್ತು 158 ಜನರಿಗೆ ನೆಲೆಯಾಗಿರುವ (ಜನಗಣತಿ 2011) ಲಾಂಗ್ಜಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ರಾಜ್ಯದಲ್ಲಿ ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾದ ಭೋಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಳ್ಳಿಯ ನಿವಾಸಿಗಳು ಹೆಚ್ಚಾಗಿ ಕೃಷಿ, ಜಾನುವಾರು ಸಾಕಾಣಿಕೆ ಮತ್ತು ಸ್ಪಿಟಿಗೆ ಭೇಟಿ ನೀಡುವ ಪ್ರವಾಸಿಗರನ್ನು ನಿರ್ವಹಿಸುವಲ್ಲಿ ನಿರತರಾಗಿದ್ದಾರೆ.
ಜುಲೈ 2021ರ ಕೊನೆಯಲ್ಲಿ, ನಾವು ಚೆರಿಂಗ್ ಮತ್ತು ಲ್ಯಾಂಗ್ಜಾದಲ್ಲಿ ಕೆಲವು ಪಶುಪಾಲಕರನ್ನು ಭೇಟಿಯಾದೆವು, ಅವರು ತಮ್ಮ ಜಾನುವಾರುಗಳು, ಕುರಿಗಳು ಮತ್ತು ಆಡುಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ತಮ್ಮ ಜಾನುವಾರುಗಳಿಗೆ ಹುಲ್ಲನ್ನು ಹುಡುಕಲು ಹೆಚ್ಚು ದೂರ ಪ್ರಯಾಣಿಸಬೇಕಾದ ಬಗ್ಗೆ ಮಾತನಾಡಿದರು.
"ಈಗ ಇಲ್ಲಿನ ಪರ್ವತಗಳಲ್ಲಿ ಕಡಿಮೆ ಹಿಮ ಬೀಳುತ್ತಿದೆ. ಇಲ್ಲಿ ಹೆಚ್ಚು ಮಳೆಯೂ ಆಗುವುದಿಲ್ಲ. ಇದರಿಂದಾಗಿ ಈಗೀಗ ಹೆಚ್ಚು ಹುಲ್ಲು ಬೆಳೆಯುವುದಿಲ್ಲ," ಎಂದು ಚೆರಿಂಗ್ ಹೇಳುತ್ತಾರೆ, "ಅದಕ್ಕಾಗಿಯೇ ನಾವು ಜಾನುವಾರುಗಳನ್ನು ಮೇಯಲು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯಬೇಕಾಗಿದೆ."











