ವಿಮಲ್ ಥ್ಯಾಕರೆ, ವಂಗನಿ ಎಂಬ ಊರಿನ ತಮ್ಮ ಎರಡು ಕೊಠಡಿಗಳ ಮನೆಯ ಚಿಕ್ಕ ಸ್ನಾನದ ಕೋಣೆಯಲ್ಲಿ, ಬಟ್ಟೆ ಒಗೆಯುತ್ತಿದ್ದರು. ಹಸಿರು ಪ್ಲಾಸ್ಟಿಕ್ ಚೊಂಬಿನಿಂದ ಸೀರೆ, ಷರ್ಟ್ ಹಾಗೂ ಇನ್ನಿತರೆ ಬಟ್ಟೆಬರೆಗಳ ರಾಶಿಗೆ ನೀರು ಸುರಿಯುತ್ತಾ, ಸೋಪನ್ನು ಹಚ್ಚಲು ತಮ್ಮ ದುರ್ಬಲ ಕೈಗಳಿಂದ ಪ್ರಯಾಸಪಡುತ್ತಿದ್ದರು.
ನಂತರ, ಆಕೆ ಒಗೆದ ಪ್ರತಿಯೊಂದು ಬಟ್ಟೆಯನ್ನೂ ಅನೇಕ ಬಾರಿ ಮೂಗಿನ ಬಳಿಗೆ ತಂದು, ವಾಸನೆಯನ್ನು ಗ್ರಹಿಸುತ್ತಾ, ಅದು ಸ್ವಚ್ಛಗೊಂಡಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರು. ನಂತರ, ಗೋಡೆಯನ್ನು ಹಿಡಿದುಕೊಂಡು, ಬಾಗಿಲ ಚೌಕಟ್ಟನ್ನು ಸ್ಪರ್ಶಿಸುತ್ತಾ, ಸ್ನಾನದ ಕೋಣೆಯಿಂದ, ಹೊರಗಡಿಯಿಟ್ಟರಾದರೂ, ಹೊಸಿಲಿನ ಮೇಲೆ ಎಡವಿದ ಆಕೆ, ನನ್ನೊಂದಿಗೆ ಮಾತನಾಡಲು ಹಾಸಿಗೆಯೊಂದರ ಮೇಲೆ ಕುಳಿತರು.
“ನಾವು ಸ್ಪರ್ಶದ ಮೂಲಕ ಜಗತ್ತನ್ನು ನೋಡುತ್ತೇವಾದರೂ, ನಮ್ಮ ಸುತ್ತಮುತ್ತಲಿನದನ್ನು ಗ್ರಹಿಸುವುದೂ ಸ್ಪರ್ಶದ ಮೂಲಕ̧ವೇ” ಎನ್ನುತ್ತಾರೆ 62ರ ವಯಸ್ಸಿನ ವಿಮಲ್. ಈಕೆ ಹಾಗೂ ಇವರ ಪತಿ, ದೃಷ್ಟಿಮಾಂದ್ಯರು. ಮುಂಬೈನ ಪಶ್ಚಿಮ ರೈಲ್ವೆ ಲೇನಿನ ರೈಲುಗಳಲ್ಲಿ ಚರ್ಚ್ಗೇಟ್ನಿಂದ ಬೋರಿವಲಿ ನಿಲ್ದಾಣದವರೆಗೆ ಇವರು ಕರವಸ್ತ್ರಗಳನ್ನು ಮಾರುತ್ತಿದ್ದರು. ಮಾರ್ಚ್ ೨೫ರಂದು, ದೇಶಾದ್ಯಂತದ ಲಾಕ್ಡೌನ್ನಿಂದಾಗಿ ನಗರದ ಸ್ಥಳೀಯ ರೈಲುಗಳ ಸೌಲಭ್ಯವನ್ನು ತಡೆಹಿಡಿದ ಕಾರಣ, ಆ ಕೆಲಸವು ನಿಂತುಹೋಗಿದೆ.
ಭಾನುವಾರದ ವಿರಾಮವನ್ನು ಹೊರತುಪಡಿಸಿ, ಮುಂಬೈ ಲೋಕಲ್ಗಳ ನೂಕುನುಗ್ಗಲಿನ ಜನಜಂಗುಳಿಯಲ್ಲಿ ಲಾಕ್ಡೌನ್ಗಿಂತಲೂ ಮೊದಲು ಇವರಿಬ್ಬರೂ ದಿನವೊಂದಕ್ಕೆ ಸುಮಾರು 250 ರೂ.ಗಳನ್ನು ಸಂಪಾದಿಸುತ್ತಿದ್ದರು. ದಕ್ಷಿಣ ಮುಂಬೈನ ಮಸ್ಜಿದ್ ಬಂದೆರ್ನ ಸಗಟು ಮಾರುಕಟ್ಟೆಯಲ್ಲಿ ಒಂದು ಬಾರಿಗೆ 1,000 ಕರವಸ್ತ್ರಗಳನ್ನು ಕೊಳ್ಳುತ್ತಿದ್ದ ಅವರು, ಲಾಕ್ಡೌನ್ಗೆ ಮೊದಲು, ಒಂದಕ್ಕೆ, 10 ರೂ.ಗಳಂತೆ 20-25 ಕರವಸ್ತ್ರಗಳನ್ನು ಮಾರುತ್ತಿದ್ದರು.
ಇವರ ಜೊತೆಯಲ್ಲಿಯೇ ವಾಸಿಸುವ 31 ವರ್ಷದ ಮಗ ಸಾಗರ್, 10ನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಪೂರೈಸಿದ್ದು, ಲಾಕ್ಡೌನ್ ಪ್ರಾರಂಭವಾಗುವವರೆಗೂ ಥಾಣೆಯಲ್ಲಿನ ಆನ್ಲೈನ್ ಕಂಪನಿಯ ಮಳಿಗೆಯಲ್ಲಿ ಕೆಲಸಮಾಡುತ್ತಿದ್ದರು. ಇವರು ಹಾಗೂ ಮನೆಗಳಲ್ಲಿ ಕೆಲಸಮಾಡುವ ಅವರ ಪತ್ನಿ, ಮಂಜು ಅವರಿಂದ ಕುಟುಂಬದ ಮಾಸಿಕ ಆದಾಯಕ್ಕೆ 5,000-6,000 ರೂ.ಗಳು ಸೇರ್ಪಡೆಯಾಗುತ್ತದೆ. 3 ವರ್ಷದ ಇವರ ಮಗಳು ಸಾಕ್ಷಿಯನ್ನೂ ಒಳಗೊಂಡಂತೆ, 5 ಜನರ ಥ್ಯಾಕರೆ ಪರಿವಾರವು ಎರಡು ಕೊಠಡಿಗಳ ಚಿಕ್ಕ ಮನೆಯಲ್ಲಿ ವಾಸಿಸುತ್ತಾರೆ. “ಈಗ, 3,000 ರೂ.ಗಳ ಬಾಡಿಗೆ, ಔಷಧಿ ಮತ್ತು ವೈದ್ಯರ ಸಾಂದರ್ಭಿಕ ಖರ್ಚುಗಳನ್ನು ನಿರ್ವಹಿಸುವುದು ತ್ರಾಸದಾಯಕವಾಗಿದೆ,” ಎನ್ನುತ್ತಾರೆ ನರೇಶ್.









