ಜಾನು ವಾಘೆ ಮತ್ತು ಇತರ 15 ಕತ್ಕರಿ ಆದಿವಾಸಿಗಳ ಗುಡಿಸಲುಗಳು - ಮಹಾರಾಷ್ಟ್ರದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು ಎಂದು ಪಟ್ಟಿ ಮಾಡಲ್ಪಟ್ಟಿವೆ - ಸದ್ಯದಲ್ಲೇ ಸಮೃದ್ಧಿಯಿಂದ ತುಂಬಿಹೋಗಲಿವೆ. ಆದರೆ ಆ ಸಮೃದ್ಧಿ ಅವರದಾಗಿರುವುದಿಲ್ಲ. ಥಾಣೆ ಜಿಲ್ಲೆಯಲ್ಲಿರುವ ಅವರ ಸಣ್ಣ ಕುಗ್ರಾಮವನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರದ ಸಮೃದ್ಧಿ ಮಹಾಮಾರ್ಗ್ ನೆಲಸಮಗೊಳಿಸಬಹುದು.
"ಇದು ನನ್ನ ಮನೆ. ನಾನು ನನ್ನ ಇಡೀ ಬದುಕನ್ನು ಇಲ್ಲಿಯೇ ಕಳೆದಿದ್ದೇನೆ. ನನ್ನ ತಂದೆ ಮತ್ತು ಅಜ್ಜ ಇಲ್ಲಿ ವಾಸಿಸುತ್ತಿದ್ದರು. ಈಗ ಅವರು (ಮಹಾರಾಷ್ಟ್ರ ಸರ್ಕಾರ) ಈ ಸ್ಥಳವನ್ನು ತೊರೆಯುವಂತೆ ಕೇಳುತ್ತಿದ್ದಾರೆ. ನಮಗೆ ಯಾವುದೇ [ಲಿಖಿತ] ನೋಟಿಸ್ ಸಹ ನೀಡಿಲ್ಲ," ಎಂದು 42 ವರ್ಷದ ಜಾನು ಹೇಳುತ್ತಾರೆ. "ಇಲ್ಲಿಂದ ನಾವು ಎಲ್ಲಿಗೆ ಹೋಗಬೇಕು? ನಾವು ನಮ್ಮ ಮನೆಯನ್ನು ಎಲ್ಲಿ ಕಟ್ಟಿಕೊಳ್ಳುವುದು?"
ಅವರ ಗುಡಿಸಲು ಭಿವಂಡಿ ತಾಲ್ಲೂಕಿನ ಚಿರಾಡ್ಪಾಡಾ ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಇದು ನಡುವೆ ಒಂದು ಬಿದಿರಿನ ಗೋಡೆಯಿರುವ ಒಂದು ಸಣ್ಣ ಕೋಣೆಯಾಗಿದೆ, ಮತ್ತು ಇನ್ನೊಂದು ಬದಿಯಲ್ಲಿ ಮಣ್ಣಿನ ಒಲೆಯೊಂದಿಗೆ ಅಡುಗೆ ಪ್ರದೇಶವಿದೆ. ನೆಲವನ್ನು ಸಗಣಿಯಿಂದ ಸಾರಿಸಲಾಗಿದೆ, ಹುಲ್ಲಿನ ಗೋಡೆಗಳು ಮರದ ಕಂಬಗಳ ಆಧಾರದಲ್ಲಿ ನಿಂತಿವೆ.
ಜಾನು ಪ್ರತಿ ಎರಡು ದಿನಗಳಿಗೊಮ್ಮೆ ಭಟ್ಸಾ ನದಿಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಮೀನು ಹಿಡಿಯುತ್ತಾರೆ. ಅವರ ಪತ್ನಿ ವಾಸಂತಿ 5-6 ಕೆಜಿ ತೂಕದ ಮೀನಿನ ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಪಾಡ್ವಾ ಮಾರುಕಟ್ಟೆಗೆ ಆರು ಕಿಲೋಮೀಟರ್ ದೂರದ ಕಿರಿದಾದ ಕಚ್ಚಾ ರಸ್ತೆಯಲ್ಲಿ ಸಾಗುತ್ತಾರೆ. ಅವರ ನಾಲ್ಕು ಜನರ ಕುಟುಂಬ ಇದರಿಂದ ತಿಂಗಳ ಹದಿನೈದು ದಿನಗಳ ಕಾಲ 400 ರೂ.ಗಳನ್ನು ಸಂಪಾದಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಜಾನು ಮತ್ತು ವಾಸಂತಿ ಅಲ್ಲಿನ ರೈತರ ಹೊಲಗಳಲ್ಲಿ ಸೌತೆಕಾಯಿ, ಬದನೆ, ಮೆಣಸಿನಕಾಯಿ ಮುಂತಾದ ತರಕಾರಿಗಳನ್ನು ಕೀಳುವ ಮೂಲಕ ದಿನಗೂಲಿಯಾಗಿ ದಿನವೊಂದಕ್ಕೆ 250 ರೂ.ಗಳನ್ನು ಸಂಪಾದಿಸುತ್ತಾರೆ.










