ಆಗ ಬೆಳಗಿನ ಜಾವದ 2 ಗಂಟೆ. ಎಲ್ಲೆಡೆ ಕತ್ತಲೆ ಕವಿದಿತ್ತು. ಮತ್ತು ನಾವು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕರಾವಳಿಯ (ಹೆಚ್ಚಾಗಿ ಆಡುಮಾತಿನಲ್ಲಿ ರಾಮ್ನಾಡ್ ಎಂದು ಕರೆಯಲಾಗುತ್ತದೆ) 'ಯಾಂತ್ರೀಕೃತ ದೋಣಿ' ಎಂಬ ಹೆಮ್ಮೆಯ ಹೆಸರಿರುವ ಪುರಾತನ ದೋಣಿಯಲ್ಲಿದ್ದೆವು.
ಆ 'ಯಾಂತ್ರೀಕೃತ ದೋಣಿ' ವಾಸ್ತವದಲ್ಲಿ ಒಂದು ಶಿಥಿಲಗೊಂಡ, ಲೇಲ್ಯಾಂಡ್ ಬಸ್ ಎಂಜಿನ್ ಅಳವಡಿಸಲಾಗಿರುವ ಒಂದು ಬಹುತೇಕ ಹಳೆಯದಾಗಿರುವ ದೋಣಿ (1964ರಲ್ಲಿ ಈ ಬಸ್ಸನ್ನು ಬದಿಗೆ ಹಾಕಲಾಗಿತ್ತು, ನಂತರ ಅದನ್ನು ಈ ದೋಣಿಗೆ ಆಳವಡಿಸಲೆಂದು ನವೀಕರಿಸಲಾಯಿತು- ಮತ್ತು ನಾನು ಈ ಪ್ರವಾಸ ಹೋಗಿದ್ದು 1993ರಲ್ಲಿ ಆಗಲೂ ಅದು ಚೆನ್ನಾಗಿ ಕೆಲಸ ಮಾಡುತ್ತಿತ್ತು). ಎಲ್ಲರೂ ಸ್ಥಳೀಯ ಮೀನುಗಾರರೇ ಇದ್ದ ಆ ದೋಣಿಯಲ್ಲಿ ನಾನೊಬ್ಬ ದಾರಿಹೋಕನಾಗಿದ್ದೆ. ನಾವೆಲ್ಲಿದ್ದೆವು ಎನ್ನುವುದರ ಕುರಿತು ನನಗೆ ಕಿಂಚಿತ್ತೂ ಸುಳಿವಿರಲಿಲ್ಲ. ಹೆಚ್ಚೆಂದರೆ ಆಗ ನಾನು ಬಂಗಾಳಕೊಲ್ಲಿಯ ಯಾವುದೋ ಒಂದು ತೀರದಲ್ಲಿದ್ದೆ ಎಂದು ಹೇಳಬಲ್ಲೆ.
ನಾವು ಈಗಾಗಲೇ ಸಮುದ್ರದಲ್ಲಿ ಸುಮಾರು 16 ಗಂಟೆಗಳ ಕಾಲ ಈ ಶ್ರಮದಾಯಕ ಪ್ರಯಾಣವನ್ನು ಮುಗಿಸಿದ್ದೆವು ಆದರೆ ದೋಣಿಯಲ್ಲಿದ್ದ ಐದು ಸಿಬ್ಬಂದಿಯಲ್ಲಿ ಒಬ್ಬರ ಮುಖದ ಮೇಲಿನ ನಗುವಿನಲ್ಲೂ ದಣಿವಿನ ಗೆರೆಗಳಿರಲಿಲ್ಲ. ಅವರೆಲ್ಲರೂ ಫರ್ನಾಂಡೋ ಎನ್ನುವ ಉಪನಾಮವನ್ನು ಹೊಂದಿದ್ದರು. ಇದು ಇಲ್ಲಿನ ಮೀನುಗಾರ ಸಮುದಾಯದಲ್ಲಿ ಬಹಳ ಸಾಮಾನ್ಯ ಹೆಸರಾಗಿದೆ.
ಅಲ್ಲಿದ್ದ ಫರ್ನಾಂಡೊಗಳಲ್ಲಿ ಒಬ್ಬರು ಹಿಡಿದಿದ್ದ ಕೋಲಿನ ಕೊನೆಯಲ್ಲಿ ಉರಿಯುತ್ತಿದ್ದ ಸೀಮೆಎಣ್ಣೆ ದೊಂದಿಯ ಹೊರತಾಗಿ ಈ 'ಯಾಂತ್ರೀಕೃತ ದೋಣಿ'ಗೆ ಬೇರೆ ಬೆಳಕಿನ ಮೂಲವಿರಲಿಲ್ಲ. ಅದು ನನ್ನನ್ನು ಚಿಂತೆಗೀಡು ಮಾಡಿತು. ಈ ಕತ್ತಲೆಯಲ್ಲಿ ನಾನು ಫೋಟೊಗಳನ್ನು ಹೇಗೆ ತೆಗೆಯೋದು?
ಮೀನು ಆ ಸಮಸ್ಯೆಯನ್ನು ಪರಿಹರಿಸಿತು
ಅವು ಬಲೆಗಳಲ್ಲಿ ತಮ್ಮ ಮೈಯಲ್ಲಿದ್ದ ರಂಜಕದಿಂದ ಹೊಳೆಯುತ್ತಿದ್ದವು (ಅದಕ್ಕೆ ಏನು ಹೇಳುತ್ತಾರೆಂದು ಖಚಿತವಾಗಿ ಗೊತ್ತಿಲ್ಲ) ಅವುಗಳ ಚಡಪಡಿಕೆಯ ಕುಣಿಯುವಿಕೆ ದೋಣಿಯ ಇತರ ಭಾಗಗಳನ್ನು ಬೆಳಗಿಸುತ್ತಿತ್ತು. ಇದು ನಾನು ಫ್ಲ್ಯಾಶ್ ಬಳಸದೆ ಒಂದೆರಡು ಫೋಟೋಗಳನ್ನು ತೆಗೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿತು. (ಫ್ಲಾಶ್ ಎನ್ನುವುದು ನಾನು ಎಂದೂ ಬಳಸಲು ಬಯಸದ ಉಪಕರಣ)
ಇದಾದ ಒಂದು ಗಂಟೆಯ ನಂತರ, ನನಗೆ ತಾಜಾ ಮೀನುಗಳನ್ನು ಹುರಿದು ಆತಿಥ್ಯ ನೀಡಲಾಯಿತು. ಅದನ್ನು ದೊಡ್ಡದೊಂದು ಹಳೆಯ ಎಣ್ಣೆಯ ಟಿನ್ನನ್ನು ಕತ್ತರಿಸಿ ಅದನ್ನು ಬೋರಲು ಹಾಕಿ ಅದರ ಮೇಲೆ ಸುಡಲಾಗಿತ್ತು. ನಾವು ಎರಡು ದಿನಗಳ ಕಾಲ ಕಡಲಿನಲ್ಲಿದ್ದೆವು. 1993ರಲ್ಲಿ ನಾನು ಇಂತಹ ಮೂರು ತಿರುಗಾಟಗಳನನ್ನು ನಡೆಸಿದ್ದೆ. ಪ್ರತಿ ಬಾರಿಯೂ ಮೀನುಗಾರರು ಪುರಾತನ ಉಪಕರಣಗಳೊಂದಿಗೆ ಕಠಿಣ ಪರಿಸ್ಥಿತಿಗಳಲ್ಲಿ ಸಂತೋಷದಿಂದ ಮತ್ತು ಹೆಚ್ಚಿನ ದಕ್ಷತೆಯಿಂದ ಕೆಲಸ ಮಾಡಿದ್ದರು.



