ಅವರು ಸುಮಾರು 50 ವರ್ಷಗಳ ಹಿಂದೆ ತಾವೇ ನಿರ್ಮಿಸಿದ ಈಗಲೂ ಗಟ್ಟಿಮುಟ್ಟಾಗಿರುವ ಸಣ್ಣ ಸೇತುವೆಯ ಮೇಲೆ ಉರಿವ ಬಿಸಿಲಿನಲ್ಲಿಯೂ ತಣ್ಣಗೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಾ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅದು ಊಟದ ಸಮಯವಾಗಿದ್ದರು ನಮ್ಮೊಂದಿಗೆ ತಾಳ್ಮೆಯಿಂದಲೇ ಮಾತನಾಡಿದರು. ಆ ಸೇತುವೆಯ ಮೇಲೆ ನಡೆದಾಡುತ್ತಾ 1959ರಲ್ಲಿ ಈ ಅಣೆಕಟ್ಟನ್ನು ಹೇಗೆ ನಿರ್ಮಿಸಲಾಯಿತು ಎಂಬುದನ್ನು ವಿವರಿಸಿದರು.
ಆರು ದಶಕಗಳ ನಂತರವೂ ಗಣಪತಿ ಈಶ್ವರ ಪಾಟೀಲ್ ಅವರಿಗೆ ನೀರಾವರಿ ಜ್ಞಾನ ಮತ್ತು ರೈತರು ಮತ್ತು ಕೃಷಿಯ ಕುರಿತು ಸಂಪೂರ್ಣ ತಿಳುವಳಿಕೆಯಿದೆ. ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಜ್ಞಾನವನ್ನು ಹೊಂದಿದ್ದಾರೆ, ಅವರು ಅದರ ಭಾಗವಾಗಿದ್ದರು. ಅವರಿಗೆ ಈಗ 101 ವರ್ಷ ಮತ್ತು ಅವರು ನಮ್ಮ ನಡುವೆ ಬದುಕಿರುವ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು.
ಅವರು 1930ರ ನಂತರದ ತಮ್ಮ ಜೀವನವನ್ನು ಬಹಳ ಹಿಂಜರಿಕೆ ಮತ್ತು ನಮ್ರತೆಯಿಂದ ವಿವರಿಸುತ್ತಾರೆ, "ನಾನು ಕೇವಲ ಸಂದೇಶವಾಹಕನಷ್ಟೇ. ಬ್ರಿಟಿಷ್ ವಿರೋಧಿ ಭೂಗತ ಚಳುವಳಿಗಳ ಸಂದೇಶವಾಹಕ." ಇದು ನಿಷೇಧಿತ ಕಮ್ಯುನಿಸ್ಟರು, ಸಮಾಜವಾದಿಗಳು ಮತ್ತು ಕಾಂಗ್ರೆಸ್ ಪಕ್ಷದ ಆಂದೋಲನ ಗುಂಪುಗಳ ಜಾಲವನ್ನು ಒಳಗೊಂಡಿತ್ತು (1942ರ ಕ್ವಿಟ್ ಇಂಡಿಯಾ ಚಳುವಳಿಯ ಸುತ್ತ). ಈ ಕೆಲಸ ಮಾಡುವವರು ಇಂತಹ ಕೆಲಸದಲ್ಲಿ ತುಂಬಾ ಚುರುಕಾಗಿರಬೇಕು, ಏಕೆಂದರೆ ಅವರು ಎಂದಿಗೂ ಸಿಕ್ಕಿಬೀಳಬಾರದು. ಅವರು ಬಹುತೇಕ ತಪ್ಪಿತಸ್ಥ ಧ್ವನಿಯಲ್ಲಿ ಹೇಳುತ್ತಾರೆ, "ನಾನು ಜೈಲಿಗೆ ಹೋಗಿಲ್ಲ." ಅವರು ಸರಕಾರ ನೀಡುವ ತಾಮ್ರಪತ್ರ ಮತ್ತು ಪಿಂಚಣಿಯನ್ನು ಸ್ವೀಕರಿಸಲಿಲ್ಲ ಎನ್ನುವುದನ್ನು ಅವರು ಹೇಳಿಕೊಳ್ಳಲಿಲ್ಲ. ಅದನ್ನು ನಮಗೆ ಬೇರೆಯವರು ಹೇಳಿದರು.







