ತನ್ನ ಮನೆಯ ಹೊರಗೆ ಒಂದು ಮಂಚದ ಮೇಲೆ ತನ್ನ ತಾಯಿಯ ಬರುವಿಕೆಯನ್ನು ಕಾಯುತ್ತಾ ಕುಳಿತಿದ್ದ ಮಲನ್ ಅವರ ನೆಚ್ಚಿನ ಹೂವಿನ ರವಿಕೆ ಮತ್ತು ಪಾದದವರೆಗಿನ ಸ್ಕರ್ಟ್ ತೊಟ್ಟಿದ್ದರು. ನಾನು ಅಲ್ಲಿ ಹೋದಾಗ ಹಿಂದಿನ ಭೇಟಿಯ ನೆನಪಿನಿಂದ ನನ್ನನ್ನು ಗುರುತಿಸಿದ ಮಲನ್ ಮುಖ ಬೆಳಗಿತು. ನಾನು ಅವರ ಕುಟುಂಬವಿರುವ ಎರಡು ಕೋಣೆಗಳ ಇಟ್ಟಿಗೆ, ಕಲ್ಲು ಮತ್ತು ಮಣ್ಣಿನ ಮನೆಯ ಎದುರು ಕುಳಿತಾಗ “ಆಯಿ ನಹಿ ಘರಿ [ತಾಯಿ ಮನೆಯಲ್ಲಿಲ್ಲ],” ಎಂದು ಹೇಳಿದರು.
ಮಲನ್ ಮೋರೆ 63 ವರ್ಷದ ತನ್ನ ತಾಯಿ ರಾಹಿಬಾಯಿ, ಮತ್ತು 83 ವರ್ಷದ ತಂದೆ ನಾನಾ ಅವರೊಂದಿಗೆ ವಾಡಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ (ಅವರ ಹೆಸರುಗಳು ಮತ್ತು ಹಳ್ಳಿಯ ಹೆಸರನ್ನು ಬದಲಾಯಿಸಲಾಗಿದೆ). ಈ ಗ್ರಾಮವು ಪುಣೆ ಜಿಲ್ಲೆಯ ಮುಲ್ಶಿ ತಾಲ್ಲೂಕಿನಲ್ಲಿದೆ, ಅಲ್ಲಿ ಈ ಕುಟುಂಬವು ಸುಮಾರು ಮೂರು ಎಕರೆ ಭೂಮಿಯಲ್ಲಿ ಭತ್ತ, ಗೋಧಿ ಮತ್ತು ತರಕಾರಿಗಳನ್ನು ಬೆಳೆಯುತ್ತದೆ.
ಮಲನ್ 18ರ ಪ್ರಾಯದ ಆಸುಪಾಸಿನಲ್ಲಿದ್ದಾಗ, ಪುಣೆಯ ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ ಆಕೆಗೆ ‘ಬಾರ್ಡರ್ಲೈನ್ ಮೆಂಟಲ್ ರಿಟಾರ್ಡೇಷನ್’ ಇರುವುದನ್ನು ಪತ್ತೆ ಮಾಡಲಾಯಿತು.
ಅದಕ್ಕೂ 12 ವರ್ಷಗಳ ಮೊದಲು ಅವರು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. "ಅವಳ ಎಲ್ಲಾ ಸಹಪಾಠಿಗಳು 4ನೇ ತರಗತಿಯನ್ನು ಮುಗಿಸಿ ಮುಂದೆ ಹೋದರು, ಆದರೆ ಇವಳು ನೆಲದ ಮೇಲೆ ಗೀಚುವುದನ್ನು ಮೀರಿ ಇನ್ನೇನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ರಾಹಿಬಾಯಿ ಹೇಳುತ್ತಾರೆ. "ಕೊನೆಗೆ, ತರಗತಿಯ ಶಿಕ್ಷಕರು ಅವಳನ್ನು ಶಾಲೆಯಿಂದ ಹೊರಗೆ ಕರೆದೊಯ್ಯಲು ಕೇಳಿಕೊಂಡರು." ಆಗ ಮಲನ್ಗೆ ಸುಮಾರು 15 ವರ್ಷ.
ಅಂದಿನಿಂದ, ಮಲನ್ ತನ್ನ ತಾಯಿಯೊಂದಿಗೆ ಮನೆಯಲ್ಲಿ ಸಣ್ಣ ಕೆಲಸಗಳನ್ನು ಮಾಡುತ್ತಾ ತನ್ನ ದಿನಗಳನ್ನು ಕಳೆಯುತ್ತಿದ್ದಾರೆ, ಆದೂ ಕೂಡ ಮಕ್ಕಳಾಟದಂತೆ ಮಾತ್ರ. ಅವರು ಅಪರೂಪಕ್ಕೊಮ್ಮೆ ಮಾತನಾಡುತ್ತಾರೆ ಅದೂ ಕೂಡ ರಾಹಿಬಾಯಿ ಮತ್ತು ಇತರ ಕೆಲವರೊಂದಿಗೆ ಮಾತ್ರ. ಆದರೆ ಅವರು ಮಾತನಾಡಬಲ್ಲರು ಮತ್ತು ಗ್ರಹಿಸಬಲ್ಲರು. ನಾನು ಅವರೊಂದಿಗೆ ಮಾತನಾಡುವಾಗ, ಅವರು ತಲೆಯಾಡಿಸಿ, ಮುಗುಳ್ನಗುತ್ತಿದ್ದರು ಮತ್ತು ಕ್ಷಣಿಕವಾಗಿ ಮಾತನಾಡುತ್ತಿದ್ದರು.






