“ಸಾಮಾನ್ಯ ದಿನದಲ್ಲಿ ನಾನು ಬಕೆಟ್ ಮತ್ತು ಬಿಂದಿಗೆಗಳಂತಹ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ಬೈಸಿಕಲ್ ಮೂಲಕ 40-50 ಕಿಲೋಮೀಟರ್ ಸವಾರಿ ಮಾಡುತ್ತೇನೆ" ಎಂದು ಶಿವಕುಮಾರ್ ಹೇಳುತ್ತಾರೆ. ನಾಗಪಟ್ಟಿಣಂ ಜಿಲ್ಲೆಯ ಆದಿವಾಸಿ ಕುಗ್ರಾಮವಾದ ಅರಸೂರಿನಲ್ಲಿರುವ 33 ವರ್ಷದ ಈ ಯುವಕನಿಗೆ, ಆ ದಿನ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತದೆ. ಬಣ್ಣ ಬಣ್ಣದ ಪ್ಲಾಸ್ಟಿಕ್ ಸರಕುಗಳನ್ನು ಹೊಂದಿರುವ ನವೀಕೃತ ಬೈಸಿಕಲ್ನಲ್ಲಿ, ಅವರು ಜೀವನೋಪಾಯಕ್ಕಾಗಿ ಮಾರಾಟ ಮಾಡುತ್ತಾರೆ, ಅದರ ಎಲ್ಲಾ ಬದಿಗಳಲ್ಲಿ ಸರಕುಗಳನ್ನು ಕಟ್ಟಲಾಗಿರುತ್ತದೆ.ಸಾಮಾನ್ಯ ದಿನಗಳಲ್ಲಿ ಅವರು 300-400 ರೂ.ಗಳನ್ನು ಗಳಿಸುತ್ತಾರೆ, ಇದರಿಂದ ಅವರ ಆರು ಸದಸ್ಯರ ಕುಟುಂಬವನ್ನು ಪೋಷಿಸಲು ಸಾಕಾಗುತ್ತದೆ ಎಂದು ಹೇಳುತ್ತಾರೆ.
ಇವು ಈಗ ಸಾಮಾನ್ಯ ದಿನಗಳಲ್ಲ
ಈಗ ಲಾಕ್ಡೌನಿನಿಂದಾಗಿ ಜೀವನದ ಆ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿದೆ, ಮತ್ತು ಅದೇ ಅವರ ಕುಟುಂಬದ ಇದುವರೆಗಿನ ಆದಾಯದ ಮೂಲವಾಗಿತ್ತು. ಆದರೆ ಇಂತಹ ಕೋವಿಡ್ -19 ಬಿಕ್ಕಟ್ಟಿನ ಕಾರ್ಮೋಡದ ನಡುವೆಯೂ ಶಿವಕುಮಾರ್ ಭರವಸೆಯ ಆಶಾಕಿರಣವನ್ನು ಎದುರು ನೋಡುತ್ತಿದ್ದಾರೆ. "ಒಂದು ವೇಳೆ ವಾನವಿಲ್ ಇಲ್ಲದೆ ಹೋಗಿದ್ದರೆ, ನಾವು ಹಸಿವಿನಿಂದ ಬಳಲುತ್ತಿದ್ದೆವು" ಎಂದು ಹೇಳುತ್ತಾರೆ.
ತಮಿಳಿನಲ್ಲಿ ವಾನವಿಲ್ ಎಂದರೆ ‘ಕಾಮನಬಿಲ್ಲು’ ಎಂದರ್ಥ. ಇದು ಈ ಜಿಲ್ಲೆಯ ನಾಗಪಟ್ಟಣಂ ಬ್ಲಾಕ್ನ ಸಿಕ್ಕಲ್ ಗ್ರಾಮದಲ್ಲಿರುವ ಒಂದು ಪ್ರಾಥಮಿಕ ಶಾಲೆಯ ಹೆಸರಾಗಿದೆ. ಏಪ್ರಿಲ್ 21ರವರೆಗೆ 44 ಜನರಿಗೆ ಕರೋನವೈರಸ್ ಇರುವುದು ಧೃಡಪಟ್ಟಿದೆ, ಜೊತೆಗೆ ನಾಗಪಟ್ಟಿಣಂ ಈಗಾಗಲೇ ತಮಿಳುನಾಡಿನ ಕೋವಿಡ್-19 ಹಾಟ್ಸ್ಪಾಟ್ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.
ಈ ಶಾಲೆಯು ಮುಖ್ಯವಾಗಿ ಅಲೆಮಾರಿ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತದೆ ಮತ್ತು ತರಗತಿಗಳು ಮುಚ್ಚಲ್ಪಟ್ಟಿದ್ದರೂ ಸಹ ಅರಸೂರ್ ಮತ್ತು ಇತರ ಹಳ್ಳಿಗಳಲ್ಲಿನ ಕುಟುಂಬಗಳಿಗೆ ದಿನಸಿ ವ್ಯವಸ್ಥೆ ಮಾಡುವುದರಲ್ಲಿ ಬಳಕೆಯಾಗುತ್ತಿದೆ. ಒಂದೆಡೆ ಲಾಕ್ಡೌನ್ನ ಪ್ರಭಾವವು ತೀವ್ರವಾಗುತ್ತಿದ್ದಂತೆ, ಶಾಲೆಯು ಸಹಾಯ ಮಾಡುತ್ತಿರುವ ಕುಟುಂಬಗಳ ಸಂಖ್ಯೆ ಈಗ 1,228ಕ್ಕೆ ಏರಿದೆ. ಅದರಲ್ಲಿ ಸುಮಾರು 1,000 ಕುಟುಂಬಗಳು ಬಡ ಶೋಷಿತ ಸಮುದಾಯಕ್ಕೆ ಸೇರಿವೆ. ಆ ಮೂಲಕ ಇಲ್ಲಿರುವ ಸಾವಿರಾರು ಬಡ ಜನರಿಗೆ, ಈ ಶಾಲೆ ಈಗ ಅವರ ಆಹಾರ ಭದ್ರತೆಯ ಪ್ರಮುಖ ಕೇಂದ್ರವಾಗಿದೆ.










