ಸಮಿತಾರವರ ವಠಾರದ ಮನೆಯಿಂದ ಹತ್ತಿರದ ಅಪಾರ್ಟಮೆಂಟುಗಳಿಗೆ ಬಟ್ಟೆಯ ಗಂಟುಗಳು ಓಡಾಡುವುದು ನಿಂತುಹೋಗಿದೆ. ಎರಡು ತಿಂಗಳ ಕೆಳಗಿನವರೆಗೂ ಪ್ರತಿದಿನ ಬೆಳಿಗ್ಗೆ ವಾಡಾ ಪೇಟೆಯ ಅಶೋಕವನ ಕಾಂಪ್ಲೆಕ್ಸಿನಲ್ಲಿರುವ ಮನೆಗಳಿಂದ ತೊಳೆದು ಜೋಡಿಸಿಟ್ಟ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ತಲೆಯ ಮೇಲೊಂದು, ಕಂಕುಳಲ್ಲೊಂದು ಬಟ್ಟೆಯ ಗಂಟನ್ನು ಹೊತ್ತುಕೊಂಡು ಅದೇ ಪೇಟೆಯಲ್ಲಿ ಎರಡು ಕಿಮೀ ದೂರದಲ್ಲಿದ್ದ ಭಾನುಶಾಲಿ ವಠಾರಕ್ಕೆ ಹಿಂದಿರುಗುತ್ತಾರೆ. ಅಲ್ಲಿ ಅವರು ಅವುಗಳನ್ನು ಇಸ್ತ್ರಿ ಮಾಡಿ, ಅಚ್ಚುಕಟ್ಟಾಗಿ ಮಡಚಿದ ಮೇಲೆ ಅದೇದಿನ ಸಾಯಂಕಾಲ ಆಯಾ ಮನೆಗಳಿಗೆ ಕೊಟ್ಟುಬಿಡುತ್ತಾರೆ.
“ಲಾಕ್ ಡೌನ್ ಶುರುವಾದಾಗಿನಿಂದ, ಇಸ್ತ್ರಿಗೆ ಬಟ್ಟೆ ಬರುವುದೇ ನಿಂತುಹೋಗಿದೆ” ಅಸಹಾಯಕತೆಯಿಂದ ಹೇಳುತ್ತಾರೆ 32 ವಯಸ್ಸಿನ ಸಮಿತಾ ಮೋರೆ. ಮಾರ್ಚಿ, 24ರಂದು ಲಾಕ್ ಡೌನ್ ಶುರುವಾಗವರೆಗೆ ದಿನಕ್ಕೆ ಕನಿಷ್ಟ ನಾಲ್ಕು ಮನೆಯ ಬಟ್ಟೆಗಳಾದರೂ ಸಿಗುತ್ತಿತ್ತು. ಆದರೆ ಅದು ಈಗ ವಾರಕ್ಕೆ ಒಂದೆರಡಕ್ಕೆ ಇಳಿದಿದೆ. ಅಂಗಿ ಅಥವಾ ಪ್ಯಾಂಟೊಂದಕ್ಕೆ 5 ರೂ ಮತ್ತು ಒಂದು ಸೀರೆಗೆ 30 ರೂ. ಗಳಿಸುತ್ತಿದ್ದ- ದಿನವೊಂದಕ್ಕೆ 150-200 ರೂ. ಗಳಿಸುತ್ತಿದ್ದವರಿಗೆ ಏಪ್ರಿಲ್ಲಿನಲ್ಲಿ ವಾರಕ್ಕೆ ರೂ. 100 ದುಡಿಯಲಷ್ಟೇ ಸಾಧ್ಯವಾಗುತ್ತಿದೆ. “ಇಷ್ಟು ಹಣದಲ್ಲಿ ಬದುಕುವುದಾದರೂ ಹೇಗೆ?” ಎಂದು ಕೇಳುತ್ತಾರೆ.
ಸಮಿತಾರ ಗಂಡ 48 ವರ್ಷದ ಸಂತೋಷ್ ಈ ಹಿಂದೆ ಆಟೋ ರಿಕ್ಷಾದ ಡ್ರೈವರಾಗಿ ಕೆಲಸ ಮಾಡುತ್ತಿದ್ದರು. ಆದರೆ ವಾಡಾದ ಹತ್ತಿರ ಟೆಂಪೋದಲ್ಲಿ ಪ್ರಯಾಣಿಸುವಾಗ ಕಲ್ಲು ಹೊಡೆದದ್ದರಿಂದ, 2005 ರಲ್ಲಿ ಒಂದು ಕಣ್ಣನ್ನೇ ಕಳೆದುಕೊಂಡರು. “ಈಗ ನಾನು ಬೇರೆ ಯಾವ ಕೆಲಸ ಮಾಡಲೂ ಆಗುವುದಿಲ್ಲ. ಆದ್ದರಿಂದ ಇಸ್ತ್ರಿ ಮಾಡಲು ನನ್ನ ಹೆಂಡತಿಗೆ ಸಹಾಯ ಮಾಡುತ್ತೇನೆ. ಪ್ರತಿದಿನ ಸತತವಾಗೆ 4 ಗಂಟೆ ನಿಂತುಕೊಂಡೇ ಇಸ್ತ್ರಿ ಮಾಡುವುದರಿಂದ ನನ್ನ ಕಾಲುಗಳು ನೋಯುತ್ತವೆ” ಎನ್ನುತ್ತಾರೆ ಅವರು.
ಸಂತೋಷ್ ಮತ್ತು ಸಮಿತಾ 15 ವರ್ಷಗಳಿಂದ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿದ್ದಾರೆ. “ಇವರಿಗೆ ಅಪಘಾತವಾದ ಮೇಲೆ, ಇನ್ನು ಊಟಕ್ಕಾಗಿ ಮತ್ತು ಇಬ್ಬರು ಮಕ್ಕಳನ್ನು ಶಾಲೆಗೆ ಕಳಿಸಲು ಹಣ ಬೇಕಲ್ಲವೆ? ಅದಕ್ಕೇ ಈ ಕೆಲಸ ಶುರು ಮಾಡಿದೆ. ಆದರೆ ಈ ಲಾಕ್ ಡೌನ್ ನಿಜವಾಗಿಯೂ ಕೆಟ್ಟದ್ದು” ಎನ್ನುತ್ತಾರೆ ಸಮಿತಾ. ಕಳೆದ ಕೆಲವು ವಾರಗಳಲ್ಲಿ ಈ ಕುಟುಂಬವು ಸಾಸಿವೆ ಡಬ್ಬದ ಸಣ್ಣ ಉಳಿತಾಯವನ್ನೂ ಕರಗಿಸಿದ್ದಾರೆ. ಮತ್ತೆ ದಿನಸಿಗಳನ್ನು ಕೊಳ್ಳಲು ಹಾಗೂ ಬಂದಿದ್ದ 900 ರೂಪಾಯಿಗಳ ಕರೆಂಟ್ ಬಿಲ್ಲನ್ನು ಕಟ್ಟಲು ಸಂಬಂಧಿಕರಿಂದ ರೂ. 4000ಗಳಷ್ಟು ಸಾಲ ಮಾಡಿಕೊಂಡಿದ್ದಾರೆ.






