ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ವನ್ ಗುಜ್ಜರ್ ಬಸ್ತಿಯಲ್ಲಿ ಒಂದು ಮಧ್ಯಾಹ್ನ.ಫಾತಿಮಾ ಬಾನೊ ಹಿಂದಿಯಲ್ಲಿ ಕವಿತೆಯೊಂದನ್ನು ಓದುತ್ತಿದ್ದಳು: "ಫ್ಯಾನ್ ತಿರುಗುತ್ತಿದೆ ಮೇಲೆ, ಮಗು ಮಲಗಿದೆ ಕೆಳಗೆ. ಮಲಗು ನನ್ನ ಮಗುವೇ ಮಲಗು, ದೊಡ್ಡ ಕೆಂಪು ಹಾಸಿಗೆಯ ಮೇಲೆ ಮಲಗು..." ಒಂಬತ್ತು ವರ್ಷದ ಅವಳು ತರಗತಿಯ ಮಕ್ಕಳ ಗುಂಪಿನ ನೋಟದಿಂದ ತನ್ನನ್ನು ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಳು.
ತಬಸ್ಸುಮ್ ಬೀವಿಯವರ ಮನೆಯ ಮುಂದಿನ ಅಂಗಳದಲ್ಲಿ ಅಂದು ಅವರ ‘ಶಾಲೆ’ನಡೆಯುತ್ತಿತ್ತು. 5ರಿಂದ 13 ವರ್ಷದೊಳಗಿನ ವಿದ್ಯಾರ್ಥಿಗಳ ಗುಂಪು ದೊಡ್ಡ ಕಾರ್ಪೆಟ್ ಒಂದರ ಮೇಲೆ ಕುಳಿತಿತ್ತು ಮತ್ತು ಅವರಲ್ಲಿ ಕೆಲವರ ಕೈಯಲ್ಲಿ ನೋಟ್ ಪುಸ್ತಕಗಳಿದ್ದವು. ತಬಸ್ಸುಮ್ ಬೀವಿಯವರ ಇಬ್ಬರು ಮಕ್ಕಳು ಕೂಡಾ ಆ ಮಕ್ಕಳ ನಡುವೆ ಕುಳಿತಿದ್ದರು, ಅವರಿಗೆ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು ಮಗು. ತಬಸ್ಸುಮ್ ಬೀವಿ ಅವರ ಕುಟುಂಬವು ಈ ಬಸ್ತಿಯಲ್ಲಿನ ಬಹುತೇಕ ಎಲ್ಲರಂತೆ ಎಮ್ಮೆಗಳನ್ನು ಸಾಕುತ್ತಾರೆ ಮತ್ತು ಹಾಲು ಮಾರಾಟ ಮಾಡುತ್ತಾರೆ.
ಈ ಶಾಲೆಯನ್ನು 2015ರಿಂದ ಕುನಾವೂ ಚೌಡ್ ಬಸ್ತಿಯ ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಕೆಲವೊಮ್ಮೆ ಅಂಗಳದಲ್ಲಿ ನಡೆದರೆ ಇನ್ನೂ ಕೆಲವೊಮ್ಮೆ ಮನೆಯ ದೊಡ್ಡ ಕೋಣೆಯಲ್ಲಿ ನಡೆಯುತ್ತದೆ. ತರಗತಿಗಳು ಸೋಮವಾರದಿಂದ ಶುಕ್ರವಾರದವರೆಗೆ 9:30ರಿಂದ 12:30ರವರೆಗೆ ನಡೆಯುತ್ತವೆ. ಡಿಸೆಂಬರ್ 2020ರಲ್ಲಿ, ಒಮ್ಮೆ ನಾನು ಅಲ್ಲಿಗೆ ಹೋಗಿದ್ದಾಗ, ಫಾತಿಮಾ ಬಾನೋ ಕವನವನ್ನು ಓದುತ್ತಿದ್ದಳು ಮತ್ತು ತರಗತಿಯಲ್ಲಿ 11 ಹುಡುಗಿಯರು ಮತ್ತು 16 ಹುಡುಗರಿದ್ದರು.
ವನ್ ಗುಜ್ಜರ್ ಯುವಕರ ಗುಂಪೊಂದು ಇಲ್ಲಿನ ಮಕ್ಕಳಿಗೆ ಕಲಿಸುತ್ತದೆ. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಯಮಕೇಶ್ವರ ಬ್ಲಾಕ್ನಲ್ಲಿರುವ ಸುಮಾರು 200 ಕುಟುಂಬಗಳ ಕುನಾವೂ ಚೌಡ್ ಕುಗ್ರಾಮದಲ್ಲಿನ ಈ ಯುವ ಶಿಕ್ಷಕರು ಶಿಕ್ಷಣದಲ್ಲಿನ ದೊಡ್ಡ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. (ಸಮುದಾಯದ ಕಾರ್ಯಕರ್ತರ ಪ್ರಕಾರ, 70,000 - 100,000 ವನ್ ಗುಜ್ಜರ್ ಜನರು ರಾಜ್ಯದ ಕುಮಾವೂನ್ ಮತ್ತು ಗರ್ವಾಲ್ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ; ಅವರನ್ನು ಉತ್ತರಾಖಂಡದಲ್ಲಿ ಓಬಿಸಿಗಳೆಂದು ಪಟ್ಟಿಮಾಡಲಾಗಿದೆ, ಆದರೆ ಅವರು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.) ಸಂರಕ್ಷಿತ ಪ್ರದೇಶದಲ್ಲಿರುವ ಈ ನೆಲೆಯಲ್ಲಿನ ಮನೆಗಳನ್ನು ಸಾಮಾನ್ಯವಾಗಿ ಮಣ್ಣು ಮತ್ತು ಹುಲು ಬಳಸಿ ಕಟ್ಟಲಾಗಿರುತ್ತದೆ. ಇದಕ್ಕೆ ಕಾರಣ ಪಕ್ಕಾ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿರುವುದು. ಇಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ, ಇಲ್ಲಿನ ಜನರು ನಿತ್ಯದ ಬಳಕೆಗೆ ಕಾಡಿನ ಹೊಳೆಗಳ ನೀರನ್ನೇ ಬಳಸುತ್ತಾರೆ.














