“ಆ ಸಂಜೆ ನನಗೆ ನೀರು ಒಡೆದಾಗ ತೀವ್ರ ನೋವಿನಿಂದ ಬಳಲುತ್ತಿದ್ದೆ. ಹೊರಗೆ ಕಳೆದ ಮೂರು ದಿನಗಳಿಂದ ಹಿಮ ಬೀಳುತ್ತಿತ್ತು. ಹೀಗೆ ಹಿಮ ಬೀಳುವಾಗ ಇಲ್ಲಿ ಹಲವು ದಿನಗಳವರೆಗೆ ಬಿಸಿಲು ಬರುವುದಿಲ್ಲ. ಬಿಸಿಲು ಬಾರದೆ ಹೋದರೆ ನಮ್ಮ ಬಳಿಯಿರುವ ಸೌರ ಫಲಕಗಳು ಚಾರ್ಜ್ ಆಗುವುದಿಲ್ಲ.” ಇದು ಜಮ್ಮು ಮತ್ತು ಕಾಶ್ಮೀರದ ಬಂಡೀಪುರ ಜಿಲ್ಲೆಯ ವಜೀರಿಥಾಲ್ ಗ್ರಾಮದ 22 ವರ್ಷದ ಶಮೀನಾ ಬೇಗಂ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ ಕುರಿತು ವಿವರಿಸುತ್ತಿರುವುದು.ಈ ಊರಿನಲ್ಲಿ ಸೂರ್ಯ ಹಲವು ದಿನಗಳವರೆಗೆ ಕಾಣಿಸಿಕೊಳ್ಳುವುದಿಲ್ಲ ಅಥವಾ ಸಾಕಷ್ಟು ಬೆಳಕನ್ನು ನೀಡುವುದಿಲ್ಲ. ಆದರೆ ಇಲ್ಲಿನ ಜನರ ಪಾಲಿಗೆ ಸೂರ್ಯನೇ ಶಕ್ತಿಯ ಮೂಲ. ಸೂರ್ಯನಿಲ್ಲದೆ ಇಲ್ಲಿನ ಸೌರ ವಿದ್ಯುತ್ ಫಲಕಗಳು ಚಾರ್ಜ್ ಆಗುವುದಿಲ್ಲ.
“ನಮ್ಮ ಮನೆ ಒಂದು ಸೀಮೆಎಣ್ಣೆ ಬುಡ್ಡಿ ದೀಪದ ಹೊರತಾಗಿ ಪೂರ್ತಿ ಕತ್ತಲೆಯಾಗಿತ್ತು. ಕೊನೆಗೆ ಅಕ್ಕಪಕ್ಕದ ಮನೆಯ ಬಹಳಷ್ಟು ಜನರು ಅಂದು ನಮ್ಮ ಮನೆಗೆ ತಮ್ಮ ಮನೆಯ ದೀಪಗಳೊಡನೆ ಬಂದರು. ಐದು ಪ್ರಕಾಶಮಾನವಾದ ಹಳದಿ ಜ್ವಾಲೆಗಳು ಕೋಣೆಯನ್ನು ಬೆಳಗಿಸಿದವು, ಅಲ್ಲಿ ನನ್ನ ತಾಯಿ ಹೇಗೋ ರಶೀದಾಗೆ ಜನ್ಮ ನೀಡಲು ನನಗೆ ಸಹಾಯ ಮಾಡಿದರು." ಅದು ಏಪ್ರಿಲ್ 2022ರ ಒಂದು ರಾತ್ರಿಯಾಗಿತ್ತು.
ವಜೀರಿಥಾಲ್ ಬಡುಗಮ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ಯಂತ ಸುಂದರವಾದ ಹಳ್ಳಿಗಳಲ್ಲಿ ಒಂದಾಗಿದೆ. ಇಲ್ಲಿಗೆ ಶ್ರೀನಗರದಿಂದ 10 ಗಂಟೆಗಳ ಪ್ರಯಾಣ, ಆ ಪ್ರಯಾಣದ ಭಾಗವಾಗಿ ರಜ್ದಾನ್ ಪಾಸ್ನಿಂದ ಗುರೇಜ್ ಕಣಿವೆಯ ಮೂಲಕ ನಾಲ್ಕೂವರೆ ಗಂಟೆಗಳ ಕಚ್ಚಾ ದಾರಿಗಳು, ಅರ್ಧ ಡಜನ್ ಚೆಕ್ ಪೋಸ್ಟುಗಳು ಮತ್ತು ಅಂತಿಮ 10 ನಿಮಿಷಗಳ ನಡಿಗೆಯನ್ನು ಒಳಗೊಂಡಿದೆ. ಇಷ್ಟನ್ನು ದಾಟಿ ಬಂದರೆ ಶಮೀನಾ ಅವರ ಮನೆಯನ್ನು ತಲುಪಬಹುದು. ಇಲ್ಲಿಗಿರುವುದು ಅದೊಂದೇ ದಾರಿ.
ಗಡಿ ನಿಯಂತ್ರಣ ರೇಖೆಯಿಂದ ಕೆಲವೇ ಮೈಲಿ ದೂರದಲ್ಲಿರುವ ಗುರೇಜ್ ಕಣಿವೆಯ ಈ ಗ್ರಾಮದಲ್ಲಿನ 24 ಕುಟುಂಬಗಳ ಮನೆಗಳನ್ನು ದೇವದಾರು ಮರದಿಂದ ತಯಾರಿಸಲಾಗಿದೆ ಮತ್ತು ಥರ್ಮಲ್ ಇನ್ಸುಲೇಶನ್ ಸಲುವಾಗಿ ಒಳಬದಿಗೆ ಮಣ್ಣು ಲೇಪಿಸಲಾಗುತ್ತದೆ. ಹಳೆಯ ಯಾಕ್ ಕೊಂಬುಗಳು, ಕೆಲವೊಮ್ಮೆ ಮೂಲ ರೂಪದ, ಕೆಲವೊಮ್ಮೆ ಹಸಿರು ಬಣ್ಣ ಬಳಿಯಲಾದ ಮರದ ಪ್ರತಿಕೃತಿ, ಇಲ್ಲಿನ ಮನೆಗಳ ಮುಖ್ಯ ಬಾಗಿಲುಗಳನ್ನು ಅಲಂಕರಿಸುತ್ತವೆ. ಬಹುತೇಕ ಎಲ್ಲಾ ಕಿಟಕಿಗಳು ಗಡಿಯ ಇನ್ನೊಂದು ಬದಿಯಲ್ಲಿರುವ ದೃಶ್ಯಗಳಿಗೆ ತೆರೆದಿವೆ.
ಶಮೀನಾ ತನ್ನ ಮನೆಯ ಹೊರಗಿನ ಸೌದೆ ರಾಶಿಯ ಮೇಲೆ ಕುಳಿತು ತನ್ನ ಇಬ್ಬರು ಮಕ್ಕಳಾದ ಎರಡು ವರ್ಷದ ಫರ್ಹಾಜ್ ಮತ್ತು ನಾಲ್ಕು ತಿಂಗಳ ರಶೀದಾ (ಹೆಸರುಗಳನ್ನು ಬದಲಾಯಿಸಲಾಗಿದೆ) ಸಂಜೆಯ ಸೂರ್ಯನ ಕೊನೆಯ ರಶ್ಮಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದರು. "ನನ್ನಂತಹ ಬಾಣಂತಿಯರಿಗೆ ಪ್ರತಿದಿನ ನಮ್ಮ ನವಜಾತ ಶಿಶುಗಳೊಂದಿಗೆ ಬೆಳಿಗ್ಗೆ ಮತ್ತು ಸಂಜೆಗಳಲ್ಲಿ ಬೆಚ್ಚಗಿನ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು ಎಂದು ನನ್ನ ತಾಯಿ ಹೇಳುತ್ತಾರೆ," ಎಂದು ಅವರು ಹೇಳುತ್ತಾರೆ. ಆಗಿನ್ನೂ ಆಗಸ್ಟ್ ತಿಂಗಳು ನಡೆಯುತ್ತಿತ್ತಷ್ಟೇ. ಹಿಮ ಇನ್ನೂ ಅಲ್ಲಿನ ಕಣಿವೆಗಳನ್ನು ಆಕ್ರಮಿಸಿಕೊಂಡಿರಲಿಲ್ಲವಾದರೂ, ಮೋಡ ಕವಿದ ದಿನಗಳು, ಸಾಂದರ್ಭಿಕ ಮಳೆ ಮತ್ತು ಸೂರ್ಯನಿಲ್ಲದ ದಿನಗಳು ಹಾಗೂ ವಿದ್ಯುತ್ ಕೊರತೆ ಅವರನ್ನು ಕಾಡತೊಡಗಿದ್ದವು.









