“ಇಲ್ಲಿಗೆ ಬಂದು ನಮ್ಮ ಸ್ಥಿತಿಯನ್ನು ನೋಡಿ. ನಾವೆಲ್ಲರೂ ಆದೇಶಗಳನ್ನು ಮತ್ತು ಪರಸ್ಪರ ದೈಹಿಕ ಅಂತರವನ್ನು ಪಾಲಿಸುತ್ತಿದ್ದು, ಮಾಸ್ಕ್ ಧರಿಸುತ್ತಿದ್ದೇವೆ. ಪಡಿತರದ ಸೌಲಭ್ಯಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಆದರೆ, ಇದು ನನ್ನ ಕುಟುಂಬವನ್ನು ಕೆಲವು ದಿನಗಳವರೆಗೆ ಮಾತ್ರವೇ ಸಲಹಬಲ್ಲದು. ನಂತರ, ನಾವೇನು ಮಾಡುತ್ತೇವೋ ತಿಳಿಯದಾಗಿದೆ” ಎಂದರಾಕೆ.
ರಾಜಾಸ್ಥಾನದ ಛುರು ಜಿಲ್ಲೆಯ ಸುಜನ್ಘರ್ ಊರಿನ ದಿಶ ಶೇಖಾವತಿ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಶಿಬೊರಿ ಕಲೆಯ ಕೆಲಸದಲ್ಲಿ ತೊಡಗಿರುವ 55ರ ವಯಸ್ಸಿನ ದುರ್ಗಾ ದೇವಿಯವರು, ಪಡಿತರವನ್ನು ಪಡೆಯಲು ಸಾಲಿನಲ್ಲಿ ಕಾಯುತ್ತಿರುವ ಸಮಯದಲ್ಲಿ, ನಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಶಿಬೊರಿ ಎಂಬುದು, ಬಟ್ಟೆಯನ್ನು ಕಟ್ಟಿ ಅದಕ್ಕೆ ಬಣ್ಣವನ್ನು ಹಾಕಿ (tie & die), ಸಂಪೂರ್ಣವಾಗಿ ಕೈಯಿಂದಲೇ ನಿರ್ವಹಿಸಲ್ಪಡುವ ಒಂದು ಕುಶಲ ಕಲೆ. ತಮ್ಮ ಭಯಾನಕ ಭವಿಷ್ಯವಾಣಿಗೆ ನಗುವನ್ನು ಸೂಸುತ್ತ, “ಯಾವಾಗ ನಾವು ಕೊರಾನಾ ರೋಗದ ಸೋಂಕಿತರಾಗುತ್ತೇವೋ ತಿಳಿಯದು. ಆದರೆ, ಅದಕ್ಕೂ ಮೊದಲು ನಾವು ಹಸಿವಿನಿಂದಲೇ ಸತ್ತುಹೋಗುತ್ತೇವೆ” ಎಂದರು ದುರ್ಗಾ ದೇವಿ.
ಮದ್ಯವ್ಯಸನಿಯಾಗಿದ್ದ ದುರ್ಗಾ ದೇವಿಯವರ ಪತಿಯು ಕೆಲವು ವರ್ಷಗಳ ಹಿಂದೆ ಸಾವಿಗೀಡಾದ ನಂತರ ಆಕೆಯ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿದೆ. ಒಂಭತ್ತು ಮಕ್ಕಳ ಪಾಲನೆ ಪೋಷಣೆಯನ್ನು ಸ್ವತಃ ನಿರ್ವಹಿಸುತ್ತಿರುವ ಇವರು, 200 ರೂ.ಗಳ ದಿನಗೂಲಿಯನ್ನು ಸಂಪಾದಿಸುತ್ತಾರೆ. ಮಾಹೆಯಾನ ಸುಮಾರು 15 ದಿನಗಳ ಕೆಲಸವು ದೊರೆಯುತ್ತದೆಂದು ಆಕೆ ತಿಳಿಸಿದರು.
ಪಡಿತರಕ್ಕಾಗಿ ಸಾಲಿನಲ್ಲಿ ತನ್ನ ಹಿಂದೆ ನಿಂತಿದ್ದ 35ರ ವಯಸ್ಸಿನ ಪರಮೇಶ್ವರಿಗೆ ಅವರು ಫೋನನ್ನು ದಾಟಿಸಿದರು. ಈಕೆಯೂ ದಿನಗೂಲಿಯನ್ನು ಪಡೆಯುವ ಕುಶಲಕರ್ಮಿ. “ತಮ್ಮ ಪತಿಯು ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ದುಡಿಯುತ್ತಿದ್ದು (ಇವರು ತಮ್ಮ ಮೊದಲ ಹೆಸರನ್ನು ಬಳಸಲು ಇಚ್ಛಿಸುತ್ತಾರೆ), ಅವು ಲಾಕ್ಡೌನ್ ಕಾರಣದಿಂದಾಗಿ ಮುಚ್ಚಿರುವ ಕಾರಣ, ಈಗ ಕೆಲಸವಿಲ್ಲದಂತಾಗಿದ್ದಾರೆ. ನಮಗೆ ಕೆಲಸವೂ ಇಲ್ಲ ಹಣವೂ ಇಲ್ಲ” ಎಂದರು ಪರಮೇಶ್ವರಿ. ದುರ್ಗಾ ದೇವಿಯವರಂತೆ ಈಕೆಯೂ 5 ಕೆ.ಜಿ. ಹಿಟ್ಟು, ಒಂದು ಕೆ.ಜಿ ಬೇಳೆ ಮತ್ತು ದನಿಯ, ಅರಿಶಿಣ ಹಾಗೂ ಮೆಣಸಿನಕಾಯಿಗಳ ತಲಾ 200 ಗ್ರಾಂ. ಪೊಟ್ಟಣಗಳಿಂದ ತಾನು, ತನ್ನ ಪತಿ ಹಾಗೂ 4 ಮಕ್ಕಳ ಊಟದ ವ್ಯವಸ್ಥೆಯನ್ನು ಕೆಲವು ದಿನಗಳ ಮಟ್ಟಿಗೆ ನಿಭಾಯಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
65 ವರ್ಷದ ಚಾಂದಿ ದೇವಿಯವರು ಈಗೀಗ ಶಿಬೊರಿ ಕೆಲಸವನ್ನು ನಿಲ್ಲಿಸಿದ್ದಾರಾದರೂ, ಪಡಿತರಕ್ಕಾಗಿ ಬಂದವರ ಸಾಲಿನಲ್ಲಿ ನಿಂತಿದ್ದರು. “ನಾನು ಊಟಮಾಡಿದ್ದು 24 ಗಂಟೆಗಳ ಹಿಂದೆ. ಅನ್ನವನ್ನು ಮಾತ್ರ ತಿಂದಿದ್ದೆ. ಬರೀ ಅನ್ನವಷ್ಟೇ. ಈ ಪ್ರದೇಶದಲ್ಲಿ ನಿನ್ನೆ, ಕೆಲವು ವಸ್ತುಗಳ ಸರಬರಾಜಿಗೆಂದು ಒಂದು ವ್ಯಾನ್ ಬಂದಿತ್ತು. ಆದರೆ ನಾನು ನಡೆಯುವುದು ನಿಧಾನ. ಆ ಜಾಗವನ್ನು ನಾನು ತಲುಪುವಷ್ಟರಲ್ಲಿ ಎಲ್ಲವೂ ಮುಗಿದುಹೋಗಿತ್ತು. ನನಗೆ ಬಹಳ ಹಸಿವಾಗುತ್ತಿದೆ” ಎಂದರಾಕೆ.










