"ಪೊಲೀಸರು ನಮಗೆ ಮನೆಯೊಳಗೇ ಇರಲು ಕೇಳಿಕೊಂಡರು, ದಿನಸಿ ಅಥವಾ ಇತರ ಅಗತ್ಯ ವಸ್ತುಗಳನ್ನು ತರಲು ಹೊರಗಡೆ ಹೋದಾಗಲೆಲ್ಲಾ ಅವರು ನಮ್ಮನ್ನು ರೂಮ್ ಗಳಿಗೆ ತಲುಪುವವರೆಗೆ ಬಾರಿಸುತ್ತಿದ್ದರು, ರಾತ್ರಿ ವೇಳೆ ನಾವು ಮೂತ್ರ ವಿಸರ್ಜನೆಗೆ ಹೊರಟರೂ ಸಹಿತ ಅವರು ಅಲ್ಲಿ ಹಾಜರಿರುತ್ತಿದ್ದರು, ನಮಗೆ ಹೊಡೆಯಲು ಅವರು ಕಾಯುತ್ತಿದ್ದರು' ಎಂದು ಡೋಲಾ ರಾಮ್ ಹೇಳುತ್ತಾರೆ. ಹೀಗೆ ಮುಂಬೈನಲ್ಲಿ ರಾಷ್ಟ್ರವ್ಯಾಪಿ ಕೊರೊನಾ ಲಾಕ್ ಡೌನ್ ನ ಆರಂಭದ ಕೆಲವು ದಿನಗಳನ್ನು ಸ್ಮರಿಸಿಕೊಳ್ಳುತ್ತಿದ್ದರು.
ಮಾರ್ಚ್ 25ರ ಬೆಳಿಗ್ಗೆ, ಡೋಲಾ ರಾಮ್ ಮತ್ತು ಅವರ ಸಹೋದ್ಯೋಗಿಗಳು ಲಾಕ್ಡೌನ್ ಬಗ್ಗೆ ಕೇಳಿದ ನಂತರ ಮಲಾಡ್ನಲ್ಲಿರುವ ತಮ್ಮ ಕಾರ್ಯಕ್ಷೇತ್ರದಿಂದ ಬೋರಿವಾಲಿಯ ತಮ್ಮ ರೂಮ್ ಗಳಿಗೆ ಮರಳಿದರು. ಪರಿಸ್ಥಿತಿ ಬದಲಾಗಬಹುದು ಎಂದು ನಿರೀಕ್ಷಿಸುತ್ತಾ ಪ್ರತಿಯೊಬ್ಬರು 1000 ರೂ.ದಂತೆ ತಿಂಗಳ ಬಾಡಿಗೆ ನೀಡಿ, ಒಟ್ಟು 15 ಜನ ಆರು ದಿನಗಳ ಕಾಲ ಇಕ್ಕಟ್ಟಾದ ಕೋಣೆಯಲ್ಲಿಯೇ ಇದ್ದರು. ಆದರೆ ಶೀಘ್ರದಲ್ಲೇ ಅವರಿಗೆ ಆಹಾರದ ಕೊರತೆ ಎದುರಾಗಲು ಪ್ರಾರಂಭವಾಯಿತು. ಇದರಿಂದಾಗಿ 37 ವರ್ಷದ ಡೋಲಾ ರಾಮ್ ಮತ್ತು ಇತರರು ರಾಜಸ್ಥಾನದಲ್ಲಿ ತಮ್ಮ ಹಳ್ಳಿಗಳ ಮನೆಗೆ ಹಿಂದಿರುಗಲು ನಿರ್ಧರಿಸಿದರು.
"ಹೋಳಿ ಹಬ್ಬದ ನಂತರ ನಾವು ಹಳ್ಳಿಯಿಂದ ಹಿಂತಿರುಗಿದ್ದರಿಂದ, ಮುಂಬೈನಲ್ಲಿ ಯಾವುದೇ ಕೆಲಸ ಇರಲಿಲ್ಲ. ನಮ್ಮಲ್ಲಿ ಹೆಚ್ಚಿನ ಉಳಿತಾಯವೂ ಇರಲಿಲ್ಲ. ಆದ್ದರಿಂದ ನಗರದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಡೋಲಾ ರಾಮ್ ನಮ್ಮೊಂದಿಗೆ ಫೋನ್ನಲ್ಲಿ ಮಾತನಾಡುತ್ತಾ ತಿಳಿಸಿದರು. ನಗರದಿಂದ ಹೊರಡುವ ಮೊದಲು ಅವರ ಐದು ವರ್ಷದ ಮಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂಬ ಸುದ್ದಿ ಬಂದಿತು. ಅವರ ಪತ್ನಿ ಸುಂದರ್ ಮತ್ತು ಇತರ ಸಂಬಂಧಿಕರು ಮಗುವನ್ನು ಮೊದಲು ಆಸ್ಪತ್ರೆಗೆ, ನಂತರ ಸ್ಥಳೀಯ ನಾಟಿ ವೈದ್ಯರಾದ ಭೋಪಾ ಬಳಿ ಕರೆದೊಯ್ದರೂ ಸಹಿತ ಮಗುವಿಗೆ ಗುಣಮುಖವಾಗಿರಲಿಲ್ಲ.
ರಾಜಸ್ಥಾನದ ಉದಯಪುರ ಜಿಲ್ಲೆಯ ಬರೋಲಿಯಾದಲ್ಲಿ ಹೋಳಿ ಹಬ್ಬವನ್ನು (ಮಾರ್ಚ್ 9-10) ಆಚರಿಸಿದ ಕೆಲವು ದಿನಗಳ ನಂತರ ಡೋಲಾ ರಾಮ್ ಮುಂಬೈಗೆ ಮರಳಿದ್ದರು. ಜೀವನೋಪಾಯಕ್ಕಾಗಿ ಅವರು ವರ್ಷಕ್ಕೆ 8-9 ತಿಂಗಳುಗಳನ್ನು ಸಾಲುಂಬಾರ್ ಬ್ಲಾಕ್ನಲ್ಲಿರುವ ತಮ್ಮ ಹಳ್ಳಿಯಿಂದ ಹೊರಗೆ ಕಳೆಯುತ್ತಾರೆ. ಕಳೆದ 15 ವರ್ಷಗಳಿಂದ ಅವರು ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಕಲ್ಲು ಒಡೆಯುವ ಕೆಲಸವನ್ನು ಮಾಡಿದ್ದಾರೆ, ರಾಜಸ್ಥಾನದಲ್ಲಿರುವ ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ, ಅಥವಾ ಗೋವಾ, ಪುಣೆ ಮತ್ತು ಗುಜರಾತ್ಗೆ ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಮುಂಬೈಗೆ ಬರುತ್ತಿದ್ದಾರೆ. ಡೋಲಾ ರಾಮ್ ಅವರ ಇತ್ತೀಚಿನ ಕೆಲಸವು ಮಾರ್ಬಲ್ ಪಾಲಿಶ್ ಮಾಡುವುದಾಗಿದೆ, ಇದರಿಂದ ಅವರಿಗೆ ತಿಂಗಳಿಗೆ 12,000 ರೂಪಾಯಿ ಸಂಬಳ ಬರುತ್ತದೆ. ಅದರಲ್ಲಿ ಅವರು 7,000-8,000 ರೂ.ಗಳನ್ನು ಮನೆಗೆ ಕಳಿಸುತ್ತಾರೆ.ವರ್ಷದಲ್ಲಿ ಹೋಳಿಹಬ್ಬ ಮತ್ತು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಅವರು ಎರಡು ಬಾರಿ ತಮ್ಮ ಕುಟುಂಬವನ್ನು ಭೇಟಿ ಮಾಡುತ್ತಾರೆ. ಪ್ರತಿ ಬಾರಿ 15ರಿಂದ 30 ದಿನಗಳನ್ನು ಕಳೆದ ನಂತರ ಮತ್ತೆ ಹಿಂತಿರುಗುತ್ತಾರೆ.
ಮುಂಬೈಯಿಂದ ಇತ್ತೀಚೆಗಿನ ಬರೋಲಿಯಾಕ್ಕೆ ಬಂದಿದ್ದ ಪ್ರಯಾಣವು ಡೋಲಾ ರಾಮ್ಗೆ ನಿರೀಕ್ಷಿಸಿದಂತೆ ಇರಲಿಲ್ಲ, ಅದು ಕಷ್ಟಕರವಾಗಿತ್ತು. ಲಾಕ್ ಡೌನ್ ಪ್ರಾರಂಭವಾದ ಆರು ದಿನಗಳ ನಂತರ, ಅಂದರೆ ಮಾರ್ಚ್ 31 ರಂದು ಅವರು ಮತ್ತು ಇತರ ಸಹಚರರು ನಗರವನ್ನು ತೊರೆಯಲು ಆರಂಭಿಸಿದರು.“ರಾಜಸ್ತಾನದಲ್ಲಿನ ನಮ್ಮ ಹಳ್ಳಿಗೆ ತಲುಪಲು 19 ಜನರೆಲ್ಲರೂ ಸೇರಿ ಒಂದು ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಂಡೆವು. ಆದರೆ ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸರು ನಮಗೆ ಹೋಗಲು ಅವಕಾಶ ನೀಡದೆ ವಾಪಸ್ ಕಳಿಸಿದರು. ಇದರಿಂದಾಗಿ ನಾವು ಮುಂಬೈನಲ್ಲಿ ಸಿಕ್ಕಿಕೊಳ್ಳಬೇಕಾಯಿತು”.ಎಂದು ಹೇಳಿದರು.







