ರಾಚೇನಹಳ್ಳಿಯ ಕೊಳಗೇರಿಯ ಕಾಲೋನಿಯಲ್ಲಿ ವಾಸಿಸುತ್ತಿರುವ ಮಕ್ತುಂಬೆ ಎಂ.ಡಿ ಅವರು ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ತಮ್ಮ ಕುಟುಂಬವನ್ನು ಹೇಗೆ ಪೋಷಿಸುವುದೆನ್ನುವ ಚಿಂತೆಯಲ್ಲಿದ್ದರು."ನಮ್ಮ ಯಜಮಾನ್ರಿಗೆ ವಾರಕೊಮ್ಮೆ ಪಗಾರ ಸಿಗ್ತಿತ್ತು, ಆಗ ನಾವೆಲ್ಲಾ ರೇಷನ್ ಸಾಮಾನಗಳನ್ನೆಲ್ಲಾ ಖರೀದಿ ಮಾಡಾಕ ಹೋಗತಿದ್ವಿ. ಆದರೆ ಈಗ ಎರಡು ವಾರಗಳಾಗಲಿಕ್ಕೆ ಬಂತು, ಯಾರಿಗೂ ಪಗಾರ ಸಿಕ್ಕಿಲ್ಲ, ಹಂಗಾಗಿ ಈ ಸಾರಿ ನಾವು ರೇಷನ್ ತಂದಿಲ್ಲ." ಎಂದು 37 ವರ್ಷದ ಗೃಹಿಣಿ ಮಕ್ತುಂಬೆ ಹೇಳುತ್ತಿದ್ದರು, ಬೆಂಗಳೂರು ನಗರ ಲಾಕ್ ಡೌನ್ ಆದ 10 ದಿನಗಳ ನಂತರ ನಾವು ಅವರನ್ನು ಭೇಟಿಯಾದಾಗ, ವೃತ್ತಿಪರ ಪೇಂಟರ್ ಆಗಿರುವ ಅವರ ಪತಿ ಸಾಮಾನ್ಯವಾಗಿ ವಾರಕ್ಕೆ ಈ ಕೆಲಸದಿಂದ 3,500 ರೂ. ದುಡಿಯುತ್ತಿದ್ದರು, ಆದರೆ, ಮಾರ್ಚ್ 25 ರಂದು ಲಾಕ್ಡೌನ್ ಪ್ರಾರಂಭವಾದಾಗಿನಿಂದ ಅವರಿಗೆ ಕೆಲಸ ಸಿಕ್ಕಿಲ್ಲ ಎನ್ನುವ ವಿಷಯ ತಿಳಿಯಿತು.
ಮೂವರು ಮಕ್ಕಳಿರುವ ದಂಪತಿ 10 ವರ್ಷಗಳ ಹಿಂದೆ ಕೆಲಸವನ್ನು ಅರಸಿ ವಿಜಯಪುರ ಜಿಲ್ಲೆಯ ತಾಳಿಕೋಟೆಯಿಂದ ಬೆಂಗಳೂರಿಗೆ ವಲಸೆ ಬಂದಿದ್ದರು. ಮಕ್ತುಂಬೆ ಪತಿ ಮೌಲಾಸಾಬ್ ದೊಡಮನಿ ಅವರು ಪ್ರತಿ ಭಾನುವಾರ ಪಡೆಯುವ ವೇತನದ ಮೇಲೆ ಅವರ ಕುಟುಂಬ ಅವಲಂಬಿತವಾಗಿದೆ. “ನಾವು ವಾರಕ್ಕೊಮ್ಮೆ ರೇಷನ್ ಸಾಮಾನು ಖರೀದಿ ಮಾಡ್ತಿವಿ- ಐದು ಕಿಲೋ ಅಕ್ಕಿ, ಒಂದು ಕಿಲೋ ಎಣ್ಣೆ, ಬೇಳೆ, ಹಿಂಗ್ ನಮ್ಮ ಜೀವನ ಸಾಗಿಸ್ತಾ ಇದ್ದೀವಿ, ಆದ್ರ ಈಗ ಎಲ್ಲಾ ಬಂದ್ ಆಗಿ, ಎಲ್ಲೂ ಹೋಗಲ್ಲಂಗ ಆಗಿದೆ, ಆದ್ರೆ ನಮಗ ನೋಡಿದ್ರ ಹೊಟ್ಟೆಯ ಉಪ ಜೀವನಕ್ಕಾದ್ರೂ ಹೊರಗ ಹೋಗಬೇಕು ಅಂತಾ ಅನ್ಸುತ್ತ " ಎಂದು ಅವರು ಹೇಳುತ್ತಿದ್ದರು.
ಏಪ್ರಿಲ್ 4ರಂದು ನಾವು ಭೇಟಿಯಾದಾಗ, ಉತ್ತರ ಬೆಂಗಳೂರಿನ ವಲಸೆ ದಿನಗೂಲಿ ಕಾರ್ಮಿಕರ ಕಾಲೋನಿಯ ನಿವಾಸಿಗಳು ತಾವು ಎದುರಿಸುತ್ತಿರುವ ಹಲವಾರು ಕಷ್ಟಗಳನ್ನು ನಮ್ಮ ಮುಂದೆ ಹೇಳಿಕೊಳ್ಳುತ್ತಿದ್ದರು. ಕೇಂದ್ರ ಹಣಕಾಸು ಸಚಿವರ ಪರಿಹಾರ ಪ್ಯಾಕೇಜ್ನ ಅಡಿಯಲ್ಲಿ ನೀಡಿರುವ ಭರವಸೆಗೆ ಅನುಗುಣವಾಗಿ ಸರ್ಕಾರದ-ಸಬ್ಸಿಡಿ ಆಹಾರ ಧಾನ್ಯಗಳನ್ನು ಸ್ವೀಕರಿಸಲು ಅವರಲ್ಲಿ ಯಾರೂ ಅರ್ಹರಲ್ಲ. ಬಹುತೇಕ ವಲಸೆ ಕಾರ್ಮಿಕರಿಗೆ ರೇಷನ್ ಕಾರ್ಡುಗಳಿಲ್ಲ. ಕೆಲವರಿಗೆ ಇದ್ದರೂ ಕೂಡ ಅದು ಅವರ ಮನೆಯ ವಿಳಾಸದಿಂದ ನೋಂದಾಯಿಸಲ್ಪಟ್ಟಿರುತ್ತದೆ ಎಂದು ಉತ್ತರ ಕರ್ನಾಟಕದ ರಾಯಚೂರು ಮೂಲದ ಮಾಣಿಕ್ಯಮ್ಮ(30) ವಿವರಿಸುತ್ತಿದ್ದರು. “ಆ ಕಾರ್ಡ್ ಇಲ್ಲಿ ಬೆಂಗಳೂರಿನ್ಯಾಗ ನಡೆಯಲ್ಲರ್ರಿ” ಎಂದು ಅವರು ಹೇಳುತ್ತಿದ್ದರು.
“ಈಗ ಕೆಲ್ಸಾ ಇಲ್ಲದೇ ಇರೋದು ನಮಗ ಬಾಳ್ ತ್ರಾಸ್ ಆಗೈತಿ, ನಮಗ ಮಕ್ಕಳ ಬೇರೆ ಅದಾವ್ರಿ, ಮತ್ತ ಬಾಡಿಗೆ ಬೇರೆ ತುಂಬಬೇಕು.ಇದನ್ನೆಲ್ಲಾ ಹೆಂಗ್ ಮಾಡಬೇಕು ಹೇಳಿ"? ಎಂದು ಅವರು ಕೇಳುತ್ತಿದ್ದರು. ಮಾಣಿಕ್ಯಮ್ಮ ಮತ್ತು ಅವರ ಪತಿ ಹೇಮಂತ್ ಲಾಕ್ಡೌನ್ಗೆ ಮೊದಲು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು; ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದಿದ್ದ ಅವರಿಗೆ ಈಗ ನಾಲ್ವರು ಮಕ್ಕಳಿದ್ದಾರೆ.
ರಾಯಚೂರಿನವರಾದ 27ರ ಹರೆಯದ ಲಕ್ಷ್ಮಿ ಎನ್. ಅವರು ಮಾಣಿಕ್ಯಮ್ಮ ಬಂದಿದ್ದ ಸಮಯದಲ್ಲೇ ಬೆಂಗಳೂರಿಗೆ ವಲಸೆ ಬಂದಿದ್ದರು. ಲಾಕ್ಡೌನ್ ಪ್ರಾರಂಭವಾಗುವವರೆಗೂ ಅವರು ಬೆಂಗಳೂರಿನ ಉತ್ತರ ಭಾಗದಲ್ಲಿ ಕಟ್ಟಡ ನಿರ್ಮಾಣದಂತಹ ಕೆಲಸಗಳನ್ನು ಮಾಡುತ್ತಿದ್ದರು. “ನಾವು ಸಿಮೆಂಟ್ ತಯಾರು ಮಾಡೋದು ಮತ್ತು ಕಲ್ಲ ಒಡೆಯೋ ಕೆಲಸಗಳನ್ನೆಲ್ಲಾ ಮಾಡ್ತೀವಿ. ಈ ಕೆಲ್ಸಕ್ಕೆ ನಮಗ ದಿನಕ್ಕ 300 ರೂಪಾಯಿ ಪಗಾರ ಸಿಗುತ್ತರ್ರಿ" ಎಂದು ಅವರು ನನಗೆ ಹೇಳಿದರು. ರಾಚೇನಹಳ್ಳಿಯಲ್ಲಿ ಅವರೊಬ್ಬರೇ ವಾಸಿಸುವ ತಾತ್ಕಾಲಿಕ ಶೆಡ್ ಗೆ ಅವರು ತಿಂಗಳಿಗೆ 500 ರೂ. ಬಾಡಿಗೆ ಪಾವತಿಸುತ್ತಾರೆ.


