ಸಕಾಲದಲ್ಲಿ ರೋಗವನ್ನು ಪತ್ತೆಹಚ್ಚಿದ್ದಲ್ಲಿ, “ಅವರ ಈ ಭಾವಚಿತ್ರವು ಗೋಡೆಯ ಮೇಲಿರುತ್ತಿರಲಿಲ್ಲ. ಅವರು ಇಲ್ಲಿ ನಮ್ಮೊಂದಿಗಿರುತ್ತಿದ್ದರು” ಎಂದರು ಶೀಲ ತಾರೆ.
ಆಕೆಯ ಪತಿ, ಅಶೋಕ್ ಅವರ ನೀಲಿ ವರ್ಣದ ಹಿನ್ನೆಲೆಯಿದ್ದ ಭಾವಚಿತ್ರದ ಕೆಳಗೆ ಮರಾಠಿಯಲ್ಲಿ “ಮರಣ: ೩೦.೫.೨೦೨೦ ಎಂದು ಬರೆಯಲಾಗಿತ್ತು.”
ಪಶ್ಚಿಮ ಮುಂಬೈನ ಬಾಂದ್ರಾದಲ್ಲಿನ ಕೆ.ಬಿ. ಭಾಭಾ ಆಸ್ಪತ್ರೆಯಲ್ಲಿ ಅಶೋಕ್ ಕೊನೆಯುಸಿರೆಳೆದರು. ಕೋವಿಡ್ 19 ಸೋಂಕಿನಿಂದಾಗಿ ಅವರು ಮೃತಪಟ್ಟಿರಬಹುದೆಂದು ‘ಊಹಿಸಲಾಯಿತು.ʼ 46 ವರ್ಷದ ಇವರು, ಗ್ರೇಟರ್ ಮುಂಬೈ ಮುನಿಸಿಪಲ್ ಕಾರ್ಪರೇಷನ್ನಿನ (ಬಿ.ಎಂ.ಸಿ) ಸಫಾಯಿ ಕರ್ಮಚಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
40ರ ವಯಸ್ಸಿನ ಶೀಲಾ, ತಮ್ಮ ಕಣ್ಣೀರನ್ನು ತಡೆಯುವ ಪ್ರಯತ್ನದಲ್ಲಿದ್ದರು. ಪೂರ್ವ ಮುಂಬೈನ ಚೆಂಬೂರಿನಲ್ಲಿನ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಕಟ್ಟಡದಲ್ಲಿ ಬಾಡಿಗೆಗೆ ಪಡೆದ 269 ಚದರಡಿಯ ಮನೆಯಲ್ಲಿ ಮೌನ ನೆಲೆಸಿತ್ತು. ಆಕೆಯ ಪುತ್ರರಾದ ನಿಕೇಶ್, ಸ್ವಪ್ನಿಲ್ ಹಾಗೂ ಮಗಳು ಮನಿಷ, ತಾಯಿಯು ಮಾತನಾಡುವುದನ್ನೇ ಕಾಯುತ್ತಿದ್ದರು.
“ಏಪ್ರಿಲ್ 8 ಮತ್ತು 10ರ ಮಧ್ಯ ಭಾಗದಲ್ಲಿ, ಭಾಂಡುಪ್ನಲ್ಲಿನ ಇವರ ಚೌಕಿಯ ಮುಕದಮ್, ಕೋವಿಡ್-೧೯ ಸೋಂಕಿತರಾಗಿದ್ದು ತಿಳಿದುಬಂದಿತು, ಅವರು ಆ ಚೌಕಿಯನ್ನು ಮುಚ್ಚಿ, ಎಲ್ಲ ನೌಕರರಿಗೂ ನಹುರ್ ಚೌಕಿಯಲ್ಲಿ (ನಗರದ ಎಸ್ ವಿಭಾಗದಲ್ಲಿರುವ ಅದೇ ಪ್ರದೇಶ) ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದರು. ಒಂದು ವಾರದ ನಂತರ ಉಸಿರಾಡಲು ತೊಂದರೆಯಾಗುತ್ತಿರುವುದಾಗಿ ಅಶೋಕ್ ತಿಳಿಸಿದರು.”
ಭಾಂಡುಪ್ನಲ್ಲಿನ ಅನೇಕ ಜಾಗಗಳಿಂದ ಕಸವನ್ನು ಸಂಗ್ರಹಿಸುವ ಟ್ರಕ್ ಕೆಲಸಗಾರರ ತಂಡದೊಂದಿಗೆ ಅಶೋಕ್ ಸಹ ಕೆಲಸವನ್ನು ನಿರ್ವಹಿಸುತ್ತಿದ್ದರು. ಅವರು ಯಾವುದೇ ಸುರಕ್ಷಾ ಸಾಧನಗಳನ್ನೂ ಧರಿಸುತ್ತಿರಲಿಲ್ಲ. ಅಲ್ಲದೆ ಅವರಿಗೆ ಸಕ್ಕರೆ ಖಾಯಿಲೆಯೂ ಇತ್ತು. ತಮ್ಮ ಖಾಯಿಲೆಯ ಲಕ್ಷಣಗಳ ಬಗ್ಗೆ ಮುಖ್ಯ ಮೇಲ್ವಿಚಾರಕರ ಗಮನಸೆಳೆಯಲು ಅವರು ಪ್ರಯತ್ನಿಸಿದರು. ಅನಾರೋಗ್ಯದ ರಜೆ ಹಾಗೂ ವೈದ್ಯಕೀಯ ತಪಾಸಣೆಗಾಗಿ ಅವರು ಮಾಡಿದ ಮನವಿಗಳನ್ನು ಉಪೇಕ್ಷಿಸಲಾಯಿತು. ತಾನು ಅಶೋಕ್ ಅವರ ಜೊತೆ ನಹುರ್ ಚೌಕಿಗೆ ತೆರಳಿದ ದಿನವನ್ನು ಶೀಲ ನೆನೆಸಿಕೊಳ್ಳುತ್ತಾರೆ.
“ಐದು ದಿನಗಳ ರಜೆಯನ್ನು ಮಂಜೂರುಮಾಡಬೇಕೆಂದು ಸಾಹೇಬರನ್ನು ಯಾಚಿಸಲು ನಾನು ಅವರೊಂದಿಗೆ ಹೋಗಿದ್ದೆ. ನಗದೀಕರಿಸಬಹುದಾದ ೨೧ ದಿನಗಳ ರಜೆಯೂ ಸಹ ಬಾಕಿಯಿತ್ತು. ಕುರ್ಚಿಯಲ್ಲಿ ಕುಳಿತಿದ್ದ ಸಾಹೇಬರು, ಪ್ರತಿಯೊಬ್ಬರೂ ರಜೆಯ ಮೇಲೆ ತೆರಳಿದರೆ, ಈ ಪರಿಸ್ಥಿತಿಯಲ್ಲಿ ಕೆಲಸ ಮಾಡುವವರು ತಾನೇ ಯಾರು?” ಎಂದರು.
ಹೀಗಾಗಿ, ಏಪ್ರಿಲ್ ಮತ್ತು ಮೇವರೆಗೂ ಅಶೋಕ್ ಕೆಲಸವನ್ನು ಮುಂದುವರಿಸಿದರು. ಇವರ ಸಹೋದ್ಯೋಗಿ, ಸಚಿನ್ ಬಂಕರ್ (ಅವರ ಕೋರಿಕೆಯ ಮೇರೆಗೆ ಹೆಸರನ್ನು ಬದಲಿಸಲಾಗಿದೆ.), ಕೆಲಸ ಮಾಡಲು ಅವರಿಗೆ ಕಷ್ಟವಾಗುತ್ತಿತ್ತು ಎಂದು ತಿಳಿಸಿದರು.











