ರೋಪಿ ಖಾಸಗಿ ಹೆರಿಗೆ ಕ್ಲಿನಿಕ್ಕಿನ ವೈದ್ಯರ ಬಳಿ ಈ ಮಹಿಳೆ ಇಬ್ಬರು ಮಕ್ಕಳನ್ನು ಹೆರುತ್ತಾಳೆಂದು ಆತ್ಮವಿಶ್ವಾಸದಿಂದ ಹೇಳಿದರು, ಆದರೆ ಹೀಗೆ ಕರಾರುವಕ್ಕಾಗಿ ಹೇಳಿದ ಅವರ ಬಳಿ ಇದನ್ನು ದೃಢಪಡಿಸುವ ಅಲ್ಟ್ರಾಸೌಂಡ್ ವರದಿಯೇನೂ ಇದ್ದಿರಲಿಲ್ಲ.
ರೋಪಿ ಮನ್ನು ಬೇಟೆ ಎರಡು ವರ್ಷಗಳ ಹಿಂದಿನ ಘಟನೆಯನ್ನು ಬಹಳ ಸಂಭ್ರಮ ಮತ್ತು ಸಂತೋಷದಿಂದ ನೆನಪಿಸಿಕೊಂಡರು. “ಕಾನ್ ಮೇ ವ್ಹೋ ಲಗಾಯಾ” [‘ಅವರು ಅದನ್ನು ಕಿವಿಗೆ ಹಾಕಿಕೊಂಡರುʼ] ಎಂದು ವೈದ್ಯರು ಸ್ಟೆತಸ್ಕೋಪ್ ಬಳಸುವಂತೆ ಸನ್ನೆ ಮಾಡಿ ತೋರಿಸುತ್ತಾ ಹೇಳಿದರು. ವೈದ್ಯರು ದುರ್ಬಲ ದೇಹದ ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಪರೀಕ್ಷಿಸಿದವರು ರೋಪಿಯವರ ಅವಳಿ ಭವಿಷ್ಯದ ಹೇಳಿಕೆಯನ್ನು ತಿರಸ್ಕರಿಸಿದರು.
ಕ್ಲಿನಿಕ್ಕಿನ ಹೆರಿಗೆ ಕೊಟಡಿಯಲ್ಲಿ ಸ್ಟೂಲ್ ಮೇಲೆ ಕುಳಿತು, "ಮೇಡಂ, ದೋ, ದೋ ಹೋತಾ, [ಎರಡು, ಎರಡು ಆಗುತ್ತೆ ಮೇಡಂ]," ಎಂದು ತನ್ನ ಅನಿಸಿಕೆಯನ್ನು ಪುನರುಚ್ಚರಿಸಿದರು. ತಾಯಿಯಾಗಲಿರುವ ಸುಮಾರು 70 ವರ್ಷದ ರೋಪಿ ಮತ್ತು ಹೆರಿಗೆ ನೋವಿನಿಂದ ನರಳುತ್ತಿರುವ ಮಹಿಳೆ ಆ ಹೊತ್ತಿನಲ್ಲಿ ಈಶಾನ್ಯ ಮಹಾರಾಷ್ಟ್ರದ ಮೇಲ್ಘಾಟ್ ಅರಣ್ಯದ ಅಂಚಿನಲ್ಲಿರುವ ಅವರ ಗ್ರಾಮವಾದ ಜೈತದೇಹಿಯಿಂದ 20 ಕಿಮೀ ದೂರದಲ್ಲಿರುವ ಪರತ್ವಾಡ ಪಟ್ಟಣದಲ್ಲಿದ್ದರು.
ಸಂಜೆಯ ಹೊತ್ತಿಗೆ, ಮೊದಲಿಗೆ ಒಂದು ಗಂಡು ಮಗು ಹುಟ್ಟಿತು, ಅದಾದ ಕೆಲವು ಸೆಕೆಂಡುಗಳಲ್ಲಿ ಇನ್ನೊಂದು ಮಗುವಿನ ತಲೆ ಹೊರಗೆ ಬಂದಿತು. ಈ ಬಾರಿ ಹೆಣ್ಣು ಮಗು ಹುಟ್ಟಿತ್ತು. ಅವಳಿ ಜವಳಿ ಮಕ್ಕಳಾಗಿದ್ದವು.
ತನ್ನ ಮಣ್ಣಿನ ಗೋಡೆ ಮತ್ತು ಸೆಗಣಿಯಿಂದ ಸಾರಿಸಲಾದ ನೆಲವಿರುವ ಸಾಂಪ್ರದಾಯಿಕ ಮನೆಯ ವರಾಂಡದಲ್ಲಿದ್ದ ಮರದ ಮಂಚದ ಮೇಲೆ ಕುಳಿತಿದ್ದ ರೋಪಿ, ಜೋರಾಗಿ ನಗುತ್ತಿದ್ದರು. ಮರದ ಮುಚ್ಚಿಗೆಯನ್ನು ಹೊಂದಿದ್ದ ಮನೆಯೊಳಗಿನ ಮೂರು ಕೋಣೆಗಳು ಖಾಲಿಯಿದ್ದವು. ಅವರ ಮೂವರು ಗಂಡು ಮಕ್ಕಳು ಬೇಸಾಯದ ಕೆಲಸಕ್ಕೆಂದು ಹೊಲಕ್ಕೆ ಹೋಗಿದ್ದರು. ಅವರ ಕುಟುಂಬವು ಎರಡು ಎಕರೆ ಜಮೀನು ಹೊಂದಿದೆ.
ಹಾಗೆ ನಗುತ್ತಾ ಅವರ ಮನೆ ಮಾತಾದ ಕೊರ್ಕು ಭಾಷೆಯಲ್ಲಿ ಕೆಟ್ಟ ಪದವೊಂದನ್ನು ಹೇಳಿದರು. ಅದನ್ನು ಅನುವಾದಿಸಿದರೆ ಕತ್ತೆಯ ಖಾಸಗಿ ಅಂಗವೆಂದು ಆಗುತ್ತದೆ. ಅದನ್ನು ಹೇಳಿದ ನಂತರ ಆಕೆ ಇನ್ನಷ್ಟು ಜೋರಾಗಿ ನಗಲಾರಂಭಿಸಿದರು. ಹಾಗೆ ನಗುವಾಗ ಅವರ ಆಳಕ್ಕಿಳಿದ ಕೆನ್ನೆಯ ಸುಕ್ಕುಗಟ್ಟಿದ ಚರ್ಮ ಇನ್ನಷ್ಟು ಆಳಕ್ಕಿಳಿದಂತೆ ಕಾಣುತ್ತಿತ್ತು. “ಹಾಗೇ ಬೈದಿದ್ದೆ, ಅವಳಿಗೆ” ಎಂದು ತಾನು ಸಿಟಿಯ ಆಸ್ಪತ್ರೆಯ ಡಾಕ್ಟರಿಗೆ ಬೈದಿದ್ದನ್ನು ನೆನಪಿಸಿಕೊಂಡು ಮತ್ತೊಮ್ಮೆ ಮುಗುಳ್ನಕ್ಕರು.











