ಆಗಸ್ಟ್ 2020ರಲ್ಲಿ, ತನ್ನ ಎರಡನೇ ಮಗುವಿನ ಜನನದ ನಂತರ, ಅಂಜನಿ ಯಾದವ್ ತನ್ನ ತವರಿಗೆ ಬಂದರು. ಅವರು ಇಂದಿಗೂ ತನ್ನ ಅತ್ತೆಯ ಮನೆಗೆ ಮರಳಿಲ್ಲ. 31 ವರ್ಷದ ಅಂಜನಿ ಈಗ ತನ್ನ ಇಬ್ಬರು ಮಕ್ಕಳೊಂದಿಗೆ ಬಿಹಾರದ ಗಯಾ ಜಿಲ್ಲೆಯ ಬೋಧ್ ಗಯಾ ಬ್ಲಾಕ್ನ ಬಕ್ರೌರ್ ಎನ್ನುವ ಹಳ್ಳಿಯಲ್ಲಿರುವ ತವರು ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ತನ್ನ ಗಂಡನ ಮನೆಯಿರುವ ಊರಿನ ಹೆಸರನ್ನು ಹೇಳಲು ಬಯಸಲಿಲ್ಲವಾದರೂ, ಅವರ ಗಂಡನ ಮನೆಗೆ ಅಲ್ಲಿಂದ ಅರ್ಧ ಗಂಟೆಯ ದೂರದ ದಾರಿ.
ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಮನೆಗೆ ಬಂದ ಎರಡು ದಿನಗಳಲ್ಲೇ ನನ್ನ ಬಾಭಿ [ಗಂಡನ ಅತ್ತಿಗೆ] ಅಡುಗೆ ಮತ್ತು ಇತರ ಮನೆಗೆಲಸಗಳನ್ನು ಮಾಡಲು ಹೇಳಿದರು. ತಾನೂ ಹೆರಿಗೆ ಮಾಡಿಸಿಕೊಂಡು ಬಂದ ದಿನದಿಂದಲೇ ಇದನ್ನೆಲ್ಲ ಮಾಡಿದ್ದಾಗಿ ಹೇಳಿದರು. ಅವರು ನನಗಿಂತಲೂ ಹತ್ತು ವರ್ಷ ದೊಡ್ಡವರು. ಹೆರಿಗೆಯ ಸಮಯದಲ್ಲಿ ನನಗೆ ಬಹಳ ರಕ್ತಸ್ರಾವವಾಗಿತ್ತು. ಅಲ್ಲದೆ ಹೆರಿಗೆಗೆ ಮೊದಲೇ ನರ್ಸ್ ನನಗೆ ಖೂನ್ ಕೀ ಕಮೀ [ತೀವ್ರ ರಕ್ತ ಹೀನತೆ] ಇದ್ದು ಹೆಚ್ಚು ಹೆಚ್ಚು ಹಾಲು, ಹಣ್ಣು ಮತ್ತು ತರಕಾರಿಗಳನ್ನು ಸೇವಿಸಲು ಹೇಳಿದ್ದರು. ನಾನಿನ್ನೂ ನನ್ನ ಅತ್ತೆಯ ಮನೆಯಲ್ಲೇ ಉಳಿದಿದ್ದರೆ ನನ್ನ ಆರೋಗ್ಯ ಇನ್ನಷ್ಟು ಹದಗೆಡುತ್ತಿತ್ತು.
ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಪರೀತ ಹೆಚ್ಚಾಗಿದೆಯೆಂದು ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್-5) ಹೇಳಿದೆ.
ಅಂಜನಿ ಮುಂದುವರೆದು ಹೇಳುತ್ತಾರೆ. ಆಕೆಯ ಪತಿ ಸುಖಿರಾಮ್, 32, ಗುಜರಾತಿನ ಸೂರತ್ನಲ್ಲಿ ಬಟ್ಟೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಅವರ ಗಂಡ ಕಳೆದ ಒಂದೂವರೆ ವರ್ಷಗಳಿಂದ ಮನೆಗೆ ಬಂದಿಲ್ಲ. “ಅವರು ನನ್ನ ಹೆರಿಗೆಗೆ ಬರಬೇಕಿತ್ತು ಆದರೆ ಕಂಪನಿಯವರು ಎರಡು ದಿನಗಳಿಗಿಂತಲೂ ಹೆಚ್ಚಿನ ರಜೆ ತೆಗದುಕೊಂಡರೆ ಕೆಲಸದಿಂದ ತೆಗೆದುಹಾಕುವುದಾಗಿ ಹೆದರಿಸಿದ ಕಾರಣ ಬರಲಿಲ್ಲ. ಹೀಗಾಗಿ ನಾನು ಒಬ್ಬಳೇ ಇದ್ದುಕೊಂಡು ಇದೆಲ್ಲವನ್ನೂ ನಿಭಾಯಿಸಬೇಕಾಯಿತು. ಈ ಕೊರೋನಾ ಕಾಯಿಲೆಯಂತೂ ನಮ್ಮಂತಹ ಬಡವರ ಬದುಕನ್ನು ಇನ್ನಷ್ಟು ಹದಗೆಡಿಸಿದೆ. ನಾವು ಆರ್ಥಿಕ, ಭಾವನಾತ್ಮಕ ಮತ್ತು ಆರೋಗ್ಯದ ವಿಷಯಗಳಲ್ಲಿ ಕುಸಿದು ಹೋಗಿದ್ದೇವೆ.
“ಇದೇ ಕಾರಣಕ್ಕಾಗಿ ನಾನು ನರಕದಂತಹ ವಾತಾವರಣದಿಂದ ತಪ್ಪಿಸಿಕೊಂಡು ಬರಬೇಕಾಯಿತು. ಬಾಣಂತಿ ಆರೈಕೆಯ ಮಾತು ಬಿಡಿ, ದಿನದ ಕೆಲಸಗಳಿಗೆ ಹಾಗೂ ಮಗುವನ್ನು ನೋಡಿಕೊಳ್ಳಲು ಸಹ ಯಾರೂ ಸಹಾಯ ಮಾಡುತ್ತಿರಲಿಲ್ಲ.” ಎಂದು ʼಪರಿʼಗೆ ಹೇಳಿದರು. ಅಂಜನಿ ಯಾದವ್ ರಾಜ್ಯದಲ್ಲಿರುವ ಇತರ ಲಕ್ಷಾಂತರ ಮಹಿಳೆಯರಂತೆ ಈಗಲೂ ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಬಿಹಾರದಲ್ಲಿ ಸುಮಾರು 64 ಶೇಕಡಾದಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆಂದು ಎನ್ಎಫ್ಎಚ್ಎಸ್-5ರ ವರದಿ ಹೇಳುತ್ತದೆ.
2020ರ ಜಾಗತಿಕ ಪೌಷ್ಟಿಕಾಂಶ ವರದಿಯ ಪ್ರಕಾರ, ಕೊರೋನಾ ಪಿಡುಗಿನ ಸಂದರ್ಭದಲ್ಲಿ "ಮಹಿಳೆಯರಲ್ಲಿನ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುವ ಗುರಿಯಲ್ಲಿ ಭಾರತವು ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಮತ್ತು ದೇಶದ 15ರಿಂದ 49ರ ವಯೋಮಾನದ 51.4%ದಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ."








