"ನಾನು ಶಾಲೆಯಲ್ಲಿ ಏನು ಕಲಿಯುತ್ತೇನೋ ಅದು ನನ್ನ ಮನೆಯ ವಾಸ್ತವಕ್ಕೆ ವಿರುದ್ಧವಾಗಿದೆ."
ಪ್ರಿಯಾ ಪರ್ವತ ರಾಜ್ಯ ಉತ್ತರಾಖಂಡದ ರಜಪೂತ ಸಮುದಾಯಕ್ಕೆ ಸೇರಿದ 16 ವರ್ಷದ ಶಾಲಾ ಬಾಲಕಿ. ಅವರು ಋತುಸ್ರಾವದ ಸಮಯದಲ್ಲಿ ಅನುಸರಿಸಬೇಕಾದ ಕಠಿಣ ಮತ್ತು ಸ್ಪಷ್ಟವಾಗಿ ರೂಪಿಸಲಾದ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ. "ಪರಿಸ್ಥಿತಿ ಎರಡು ವಿಭಿನ್ನ ಪ್ರಪಂಚಗಳಲ್ಲಿ ವಾಸಿಸುವಂತಿದೆ. ಮನೆಯಲ್ಲಿ ನನ್ನನ್ನು ನಾನು ಪ್ರತ್ಯೇಕಿಸಿಕೊಳ್ಳುವಂತೆ ಮತ್ತು ಎಲ್ಲಾ ಪದ್ಧತಿಗಳು ಮತ್ತು ನಿರ್ಬಂಧಗಳನ್ನು ಅನುಸರಿಸುವಂತೆ ಮಾಡಲಾಗಿದೆ, ಆದರೆ ಶಾಲೆಯಲ್ಲಿ ಮಹಿಳೆಯರು ಪುರುಷರಿಗೆ ಸಮಾನರು ಎಂದು ನನಗೆ ಕಲಿಸಲಾಗುತ್ತದೆ" ಎಂದು ಅವರು ಹೇಳುತ್ತಾರೆ.
11ನೇ ತರಗತಿಯ ವಿದ್ಯಾರ್ಥಿನಿಯಾದ ಪ್ರಿಯಾ ಓದುತ್ತಿರುವ ಶಾಲೆಯು ಅವರ ಹಳ್ಳಿಯಲ್ಲಿರುವ ಮನೆಯಿಂದ ಏಳು ಕಿಲೋಮೀಟರ್ ದೂರದ ನಾನಕ್ಮಠ ಪಟ್ಟಣದಲ್ಲಿದೆ. ಪ್ರತಿದಿನ ಆಕೆ ಸೈಕಲ್ ಮೂಲಕ ಶಾಲೆಗೆ ಹೋಗಿ ಬರುತ್ತಾರೆ. ಉತ್ತಮ ವಿದ್ಯಾರ್ಥಿನಿಯಾದ ಅವರು ಆರಂಭದಲ್ಲಿ ಈ ವಿಷಯದ ಬಗ್ಗೆ ಸ್ವತಃ ಶಿಕ್ಷಣ ಪಡೆಯಲು ಪ್ರಯತ್ನಿಸಿದರು. "ನಾನು ಪುಸ್ತಕಗಳನ್ನು ಓದುತ್ತೇನೆ ಮತ್ತು ನಾನು ಏನೆಲ್ಲ ಮಾಡಬಲ್ಲೆ ಎಂದು ಭಾವಿಸಿದ್ದೆ; ನಾನು ಜಗತ್ತನ್ನು ಬದಲಾಯಿಸುತ್ತೇನೆ ಎನ್ನುವುದು ನನ್ನ ಯೋಚನೆಯಾಗಿತ್ತು. ಆದರೆ ಈ ಪದ್ಧತಿಗಳಿಗೆ ಯಾವುದೇ ಅರ್ಥವಿಲ್ಲ ಎಂದು ನನ್ನ ಕುಟುಂಬಕ್ಕೆ ಮನವರಿಕೆ ಮಾಡಿಕೊಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅವರೊಂದಿಗೆ ಹಗಲಿರುಳು ವಾಸಿಸುತ್ತಿದ್ದೇನೆ ಆದರೆ ಈ ನಿರ್ಬಂಧಗಳಿಗೆ ಯಾವುದೇ ಅರ್ಥವಿಲ್ಲವೆಂದು ಅವರಿಗೆ ಅರ್ಥವಾಗುವಂತೆ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ.
ಈ ನಿಯಮಗಳು ಮತ್ತು ನಿಬಂಧನೆಗಳ ಕುರಿತು ಆಕೆಗಿದ್ದ ಅಶಾಂತಿ ಮತ್ತು ಅಸಮ್ಮತಿ ಭಾವ ಇನ್ನೂ ಕಡಿಮೆಯಾಗಿಲ್ಲವಾದರೂ ಈಗೀಗ ಆಕೆ ತನ್ನ ಹೆತ್ತವರು ಹೇಳಿದಂತೆ ಕೇಳಲು ಆರಂಭಿಸಿದ್ದಾರೆ.
ಪ್ರಿಯಾ ಮತ್ತು ಅವರ ಕುಟುಂಬವು ರಾಜ್ಯದಲ್ಲಿ ಅತಿ ಹೆಚ್ಚು ಇಳುವರಿ ನೀಡುವ ಕೃಷಿ ಪ್ರದೇಶವಾದ ತೇರೈ (ತಗ್ಗು ಪ್ರದೇಶ) ಪ್ರದೇಶದಲ್ಲಿ ವಾಸಿಸುತ್ತಿದೆ (ಜನಗಣತಿ 2011). ಈ ಪ್ರದೇಶವು ಖಾರಿಫ್, ರಬಿ ಮತ್ತು ಜೈದ್ ಎಂಬ ಮೂರು ಬೆಳೆ ಹಂಗಾಮುಗಳನ್ನು ಹೊಂದಿದೆ ಮತ್ತು ಇಲ್ಲಿನ ಹೆಚ್ಚಿನ ಜನಸಂಖ್ಯೆಯು ಕೃಷಿಯಲ್ಲಿ ನಿರತವಾಗಿದೆ ಮತ್ತು ಜಾನುವಾರುಗಳನ್ನು, ಹೆಚ್ಚಾಗಿ ಹಸುಗಳು ಮತ್ತು ಎಮ್ಮೆಗಳನ್ನು ಸಾಕುತ್ತದೆ.











