ಆ ರಾತ್ರಿ ಮೀನಾ ನಿದ್ದೆ ಮಾಡಲಿಲ್ಲ. ಮಳೆ ನೀರು ಅವರ ಮನೆಗೆ ನುಗ್ಗಿತ್ತು. ಮೇಲೆ ಹೊದೆಸಿದ್ದ ದುರ್ಬಲವಾದ ಟಾರ್ಪಲಿನ್ ಶೀಟಿಗೆ ಧಾರಾಕಾರ ಮಳೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಮತ್ತು ಅದು ಕೆಲವೇ ನಿಮಿಷಗಳಲ್ಲಿ ಬಿದ್ದುಹೋಯಿತು. ಕೊನೆಗೆ ಮೀನಾ ಮತ್ತು ಅವರ ಕುಟುಂಬ ಓಡಿಹೋಗಿ ಮುಚ್ಚಿದ ಅಂಗಡಿಯ ಮುಂದೆ ಆಶ್ರಯ ಪಡೆಯಬೇಕಾಯಿತು.
"ನಾವು ರಾತ್ರಿಯಿಡೀ [ಜುಲೈ ಆರಂಭದಲ್ಲಿ] ಮಳೆ ನಿಲ್ಲುವವರೆಗೂ ಅಲ್ಲಿಯೇ ಕುಳಿತುಕೊಂಡೆವು," ಎಂದು ಮಧ್ಯಾಹ್ನ ಮುಖ್ಯ ರಸ್ತೆಯ ಪಕ್ಕದಲ್ಲಿನ ಬಿಳಿ ಮುದ್ರಿತ ಹಾಳೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಅವರು ಹೇಳಿದರು, ಅವರ ಎರಡು ವರ್ಷದ ಮಗಳು ಶಮಾ ಅವರ ಪಕ್ಕದಲ್ಲಿ ಮಲಗಿದ್ದಳು.
ಆ ಧಾರಾಕಾರ ಮಳೆಯ ನಂತರ, ಮೀನಾ ಮತ್ತೆ ಬಂದು ತನ್ನ ವಾಸಸ್ಥಾನವನ್ನು ಪುನಃಸ್ಥಾಪಿಸಿದರು. ಆದರೆ ಅಷ್ಟರೊಳಗೆ ಅವರ ಅನೇಕ ಸಾಮಾನುಗಳು - ಪಾತ್ರೆಗಳು, ಧಾನ್ಯಗಳು, ಶಾಲಾ ಪುಸ್ತಕಗಳು - ನೀರಿನಲ್ಲಿ ಕೊಚ್ಚಿ ಹೋಗಿದ್ದವು.
ನಮ್ಮಲ್ಲಿದ್ದ ಮುಖಗವುಸುಗಳೂ ಕೊಚ್ಚಿಕೊಂಡು ಹೋಗಿವೆ ಎಂದು ಮೀನಾ ಹೇಳುತ್ತಾರೆ. ಲಾಕ್ಡೌನ್ನ ಆರಂಭಿಕ ದಿನಗಳಲ್ಲಿ ಈ ಹಸಿರು ಬಟ್ಟೆಯ ಮುಖವಾಡಗಳನ್ನು ಸ್ವಯಂಸೇವಕರು ಅವರಿಗೆ ನೀಡಿದ್ದರು. "ನಾವು ಮುಖಗವುಸುಗಳನ್ನು ಧರಿಸಿದರೆ, ಅದು ಯಾವ ವ್ಯತ್ಯಾಸವನ್ನುಂಟುಮಾಡುತ್ತದೆ?" ಎಂದು ಅವರು ಕೇಳುತ್ತಾರೆ. "ನಮ್ಮನ್ನು ಈಗಾಗಲೇ ಸತ್ತಿರುವ ಮನುಷ್ಯರಂತೆ ನೋಡಲಾಗುತ್ತದೆ, ಇನ್ನು ನಮಗೆ ಕೊರೋನಾ ತಗುಲಿದರೆ ಅದನ್ನು ಕಟ್ಟಿಕೊಂಡು ಯಾರಿಗೆ ಏನಾಗಬೇಕಿದೆ?"
ಮೀನಾ (ಅವರು ತಮ್ಮ ಮೊದಲ ಹೆಸರನ್ನು ಮಾತ್ರ ಬಳಸುತ್ತಾರೆ) ಮತ್ತು ಅವರ ಕುಟುಂಬ - ಪತಿ ಮತ್ತು ನಾಲ್ವರು ಮಕ್ಕಳು - ಅವರ ವಸ್ತುಗಳು ನೀರಿನಲ್ಲಿ ತೇಲಿಹೋಗುವುದನ್ನು ನೋಡಿ ನೋಡಿ ಅಭ್ಯಾಸವಾಗಿ ಹೋಗಿದೆ. ಈ ಮಾನ್ಸೂನ್ ಪ್ರಾರಂಭವಾದಾಗಿನಿಂದ ಈ ರೀತಿ ಒಂದಕ್ಕಿಂತ ಹೆಚ್ಚು ಬಾರಿ ನಡೆದಿದೆ ಮತ್ತು ಇದು ಪ್ರತಿ ವರ್ಷ ಹೀಗಾಗುತ್ತದೆ - ಧಾರಾಕಾರ ಮಳೆಯು ಉತ್ತರ ಮುಂಬೈಯ ಕಾಂದಿವಲಿ ಪೂರ್ವ ಉಪನಗರದಲ್ಲಿ ಕಾಲುದಾರಿಯ ಮೇಲೆ ನಿರ್ಮಿಸಿದ ಅವರ ಗುಡಿಸಲನ್ನು ನಾಶಗೊಳಿಸುತ್ತದೆ.
ಆದರೆ ಕಳೆದ ವರ್ಷದವರೆಗೂ, ಹೆಚ್ಚು ಮಳೆಯಾದಾಗ, ಕುಟುಂಬವು ಆಶ್ರಯ ಪಡೆಯಲು ಹತ್ತಿರದ ನಿರ್ಮಾಣ ಸ್ಥಳಗಳಿಗೆ ಓಡಬಹುದಿತ್ತು. ಆದರೆ ಇದು ಈಗ ನಿಂತುಹೋಗಿದೆ. ಸುಮಾರು 30 ವರ್ಷ ವಯಸ್ಸಿನ ಮೀನಾ, "ನಾವು ಈ ಮಳೆಗೆ ಒಗ್ಗಿಕೊಂಡಿದ್ದೇವೆ, ಆದರೆ ಈ ಬಾರಿ, ಕೊರೊನಾ ನಮಗೆ ಸಮಸ್ಯೆ ತಂದಿಟ್ಟಿದೆ. ನಾವು ಆ ಕಟ್ಟಡಗಳಿಗೆ ಹೋಗಿ ಕಾಯುತ್ತಿದ್ದೆವು. ಕಾವಲುಗಾರರಿಗೆ ನಮ್ಮ ಪರಿಚಯವಿತ್ತು. ಅಂಗಡಿಯವರು ಸಹ ಮಧ್ಯಾಹ್ನ ತಮ್ಮ ಅಂಗಡಿಗಳ ಹೊರಗೆ ಕುಳಿತುಕೊಳ್ಳಲು ನಮ್ಮನ್ನು ಬಿಡುತ್ತಿದ್ದರು. ಆದರೆ ಈಗ ಅವರು ನಮ್ಮನ್ನು ಹತ್ತಿರದಲ್ಲಿ ನಡೆಯಲು ಸಹ ಬಿಡುವುದಿಲ್ಲ."













