ಗುಲಾಬ್ ಮತ್ತು ಶಹಜಾದ್ ತಮ್ಮ ಮುಖ್ಯ ಮ್ಯಾಜಿಕ್ ಟ್ರಿಕ್ ಅನ್ನು ಪ್ರಾರಂಭಿಸುವ ಮೊದಲು, ಅವರು "ಹುರುಕ್ ಬೊಮ್ ಬೊಮ್ ಖೇಲಾ!" ಎಂದು ಜೋರಾಗಿ ಕಿರುಚುತ್ತಾರೆ. ಇದು ಅವರ ಸ್ವಂತ ಬಂಗಾಳಿ ಆವೃತ್ತಿಯ “ಅಬ್ರಕಾದಾಬ್ರಾ!” ಈ ಕೂಗು ಅವರ ಪ್ರದರ್ಶನಕ್ಕೆ ಸುಮಾರು 80-90 ಜನ ಪ್ರೇಕ್ಷಕರನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತದೆ - ಪುರುಷರು, ಮಹಿಳೆಯರು ಮತ್ತು ಮಕ್ಕಳ ತಮಾಷೆಯ ಮಾತುಗಳು ಅಲ್ಲಿ ಪ್ರಾರಂಭಗೊಳ್ಳುತ್ತದೆ. ನಂತರ ಇಬ್ಬರು ಸಹೋದರರಲ್ಲಿ ಹಿರಿಯರಾದ ಗುಲಾಬ್, ಪ್ರೇಕ್ಷಕರಲ್ಲಿ ಒಬ್ಬರಾದ ಮಿಂಟು ಹಾಲ್ದರ್ ಅವರನ್ನು ಸಹಾಯ ಮಾಡುವಂತೆ ಕೇಳುತ್ತಾರೆ. ಮಿಂಟು ಧೈರ್ಯದಿಂದ ಮುಂದೆ ಹೆಜ್ಜೆ ಹಾಕುತ್ತಾರೆ. ಮ್ಯಾಜಿಕ್ ಟ್ರಿಕ್ ಪ್ರಾರಂಭವಾಗುತ್ತದೆ.
ಕಿರಿಯ ಸಹೋದರ ಶಹಜಾದ್ ಕಣ್ಮರೆಯಾಗುತ್ತಾರೆಂದು ಗುಲಾಬ್ ಭರವಸೆ ನೀಡುತ್ತಾರೆ. ಶೀಘ್ರದಲ್ಲೇ ಮಾಯವಾಗಲಿರುವ ಸಹೋದರ ದೊಡ್ಡ ಬಲೆಯೊಳಗೆ ಕುಳಿತುಕೊಳ್ಳುತ್ತಾನೆ, ನಂತರ ಮಿಂಟು ಶಹಜಾದ್ ಕುಳಿತಿರುವ ಬಲೆಯ ಮೇಲ್ಬಾಗವನ್ನು ಬಿಗಿಗೊಳಿಸುತ್ತಾರೆ. ಗುಲಾಬ್ ಒಂದು ಪೆಟ್ಟಿಗೆಯನ್ನು ಇರಿಸಿ, ಎರಡು ಬದಿ ತೆರೆದು ಶಹಜಾದ್ನನ್ನು ಅದರಡಿ ಮರೆಯಾಗಿಸುತ್ತಾರೆ ಮತ್ತು ಅದನ್ನು ಬಟ್ಟೆಗಳಿಂದ ಮುಚ್ಚುತ್ತಾರೆ. ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ, ಮುಂದೆ ಏನು ಏನಾಗಬಹುದೆಂಬ ಕುತೂಹಲದೊಂದಿಗೆ ಕಾಯುತ್ತಿದ್ದಾರೆ.
ಮುಂದೆ, ಪ್ರಾಣಿಯ ಮೂಳೆಯ ತುಂಡನ್ನು ಕೈಗೆತ್ತಿಕೊಂಡು ಅದನ್ನು ತಿರುಗಿಸುತ್ತಾ ಮತ್ತು ಹುಡುಗನನ್ನು ಕಣ್ಮರೆಯಾಗುವಂತೆ ಮಾಡಲು ಹೆಚ್ಚಿನ ಶಕ್ತಿಯನ್ನು ಕೋರುತ್ತಾರೆ: “ಅರ್ಘಾಟ್ ಖೋಪ್ಡಿ ಮಾರ್ಗಟ್ ಮಸಾನ್, ಬಚ್ಚಾ ಕೆ ಲೇಜಾ ತೆಲಿಯಾ ಮಸಾನ್.” ನಂತರ ತನ್ನ ಕೈಯಿಂದ ಪೆಟ್ಟಿಗೆಯ ಪ್ರತಿಯೊಂದು ಮೂಲೆಯನ್ನೂ ಮುಟ್ಟಿ ನೋಡುವಂತೆ ಮಿಂಟುಗೆ ಹೇಳುತ್ತಾರೆ. ಮಿಂಟು ಹೇಳಿದಂತೆ ಮಾಡುತ್ತಾರೆ ಮತ್ತು ಬಾಕ್ಸ್ 'ಖಾಲಿ'ಯಾಗಿದೆ. ಶಹಜಾದ್ ಎಲ್ಲಿಯೂ ಕಂಡುಬರುವುದಿಲ್ಲ.
“ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ: ಈ ಹುಡುಗನಿಗೆ ಕಷ್ಟವಾಗಿದೆಯೇ? ಎಲ್ಲರೂ ನನಗೆ ಹೇಳಬೇಕೆಂದು ನಾನು ಬಯಸುತ್ತೇನೆ: ಅವನು ಇದ್ದಾನೋ ಅಥವಾ ಇಲ್ಲವೋ?” ಎಂದು ಗುಲಾಬ್ ಕೇಳುತ್ತಾರೆ. ಈಗ ಅಗೋಚರವಾಗಿರುವ ಶಹಜಾದ್ ನಿಜಕ್ಕೂ ಕಠಿಣ ಸಮಯವನ್ನು ಹೊಂದಿರಬೇಕು ಎಂದು ಪ್ರೇಕ್ಷಕ ಜನರು ಒಪ್ಪುತ್ತಾರೆ.



