ದೊಡ್ಡ ಹುಣಸೆ ಮರಗಳಿಂದ ಸುತ್ತುವರೆದಿರುವ ಅವರ ವರ್ಕ್ಶಾಪ್ನಲ್ಲಿ ಕುಳಿತುಕೊಂಡು, ಮಣಿರಾಮ್ ಮಾಂಡವಿ ಅವರು ಕೊಳಲನ್ನು ತಯಾರಿಸುತ್ತಾರೆ – ಗಾಳಿಯ ಸಹಾಯದಿಂದ ಸಂಗೀತವನ್ನು ಹೊರಹೊಮ್ಮಿಸುವ ವಾದ್ಯ ಅದು. ಇದು ಪ್ರಾಣಿಗಳನ್ನು ಹೆದರಿಸಲು ಉಪಯೋಗಿಸುವ ಒಂದು ಪರಿಣಾಮಕಾರಿ 'ಆಯುಧ'ವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ. 42 ವರ್ಷದ ಮಣಿರಾಮ್ ಅವರು ಚಿಕ್ಕವರಾಗಿದ್ದಾಗ ಕಾಡಿನಲ್ಲಿ ಹುಲಿಗಳು, ಚಿರತೆಗಳು ಮತ್ತು ಕರಡಿಗಳು ಇದ್ದವು ಎಂದು ಹೇಳುತ್ತಾರೆ, ಕೊಳಲನ್ನು ಬಾರಿಸಿದಾಗ ಅವು ನಮ್ಮಿಂದ ದೂರ ಉಳಿಯುತ್ತಿದ್ದವು ಎನ್ನುತ್ತಾರೆ.
ಅವರು ಬಿದಿರಿನ ವಾದ್ಯವನ್ನು 'ತಿರುಗುವ ಕೊಳಲು' ಎಂದು ಕರೆಯುತ್ತಾರೆ - ಅಥವಾ ಛತ್ತೀಸ್ಗಢಿಯಲ್ಲಿ ಉಕುಡ ಕೊಳಲು ಎಂದು ಕರೆಯುತ್ತಾರೆ. ಈ ವಾದ್ಯಕ್ಕೆ ಬಾಯಿ ಇರುವುದಿಲ್ಲ, ಕೇವಲ ಎರಡು ರಂಧ್ರಗಳಿವೆ, ಮತ್ತು ಗಾಳಿಯಿಂದ ಊದಬೇಕಾಗುತ್ತದೆ.
42 ವರ್ಷದ ಮಣಿರಾಮ್ ತಯಾರಿಸುವ ಪ್ರತಿಯೊಂದು ಕೊಳಲು, ಪಟ್ಟಣದಲ್ಲಿ ಮತ್ತು ಕರಕುಶಲ ಸಂಸ್ಥೆಗಳ ವತಿಯಿಂದ ನಡೆಯುವ ವಸ್ತುಪ್ರದರ್ಶನದ ಸಮಯದಲ್ಲಿ ಸುಮಾರು ಒಂದಕ್ಕೆ 50 ರೂಗಳಿಗೆ ಮಾರಾಟವಾಗುತ್ತವೆ. ನಂತರ ಗ್ರಾಹಕರು ಸುಮಾರು ಒಂದಕ್ಕೆ 300 ರೂಪಾಯಿ ಕೊಟ್ಟು ಖರೀದಿಸುತ್ತಾರೆ.
ಅದು ಅಂದಿನ ಕೊಳಲು ತಯಾರಕ ಮಂದರ್ ಸಿಂಗ್ ಮಾಂಡವಿ ಅವರೊಂದಿಗಿನ ಆಕಸ್ಮಿಕ ಭೇಟಿಯು, ಸುಮಾರು ಮೂರು ದಶಕಗಳ ಹಿಂದೆ ಮಣಿರಾಮ್ ಅವರನ್ನು ಬಾನ್ಸುರಿ ಕ್ರಾಫ್ಟ್ಗೆ ಕರೆತರಲು ಕಾರಣವಾಯಿತು. "ನನಗೆ ಆಗ ಸುಮಾರು 15 ವರ್ಷ ವಯಸ್ಸಾಗಿತ್ತು, ಮತ್ತು ಕಾಡಿನಿಂದ ಉರುವಲು ತರಲು ಹೋಗಿದ್ದೆ. ಆಗ ಅವರು ನನ್ನನ್ನು ಕರೆದು 'ನೀನು ಶಾಲೆಗೆ ಹೋಗುತ್ತಿಲ್ಲವಲ್ಲ ಬಾ, ನಾನು ನಿನಗೆ ಏನಾದರೂ ಕಲಿಸುತ್ತೇನೆ” ಎಂದು ಮಂದರ್ ಹೇಳಿದ್ದರಂತೆ ಎಂದು ಮಣಿರಾಮ್ ಹೇಳುತ್ತಾರೆ. ಹಾಗಾಗಿ ಮಣಿರಾಮ್ ಸಂತೋಷದಿಂದ ಶಾಲೆಯನ್ನು ತೊರೆದರು ಮತ್ತು ಅಂದಿನಿಂದ ದಿವಂಗತ ಮಾಸ್ಟರ್ ಕುಶಲಕರ್ಮಿಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದರು.




