ಕಳೆದ ವರ್ಷದ ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಆದಿಲಕ್ವ್ಮಿಗೆ (72) ಏರನ್ನು ಹತ್ತಿ ತನ್ನ ಮನೆಯನ್ನು ತಲುಪುವುದು ಕಷ್ಟವಾಗುತ್ತಿದೆ. ಬೆಂಗಳೂರಿನ ದಕ್ಷಿಣ ಭಾಗದ ಸುದ್ದಗುಂಟೆ ಪಾಳ್ಯದಲ್ಲಿರುವ ಭವಾನಿ ನಗರದ ಕೊಳೆಗೇರಿ ಕಾಲೋನಿಯಲ್ಲಿನ ಆಕೆಯ ಮನೆಯಲ್ಲಿರುವುದು ಏಕೈಕ ಕೊಠಡಿಯಷ್ಟೇ. ಕುಟುಂಬದ ಇತರೆ ಆರು ಜನರ ವಾಸವೂ ಅಲ್ಲಿಯೇ.
ಸುಮಾರು 30 ವರ್ಷಗಳ ಹಿಂದೆ ಆದಿಲಕ್ಷ್ಮಿ ಮತ್ತು ಆಕೆಯ ಪತಿ ಕುನ್ನಯ್ಯ ರಾಮ್ (83) ಕೆಲಸವನ್ನರಸಿ ತಮಿಳು ನಾಡಿನ ಮಧುರೈ ಜಿಲ್ಲೆಯಿಂದ ಬೆಂಗಳೂರಿಗೆ ವಲಸೆ ಬಂದರು. ಕುನ್ನಯ್ಯ ರಾಮ್, ತನಗೆ ದೊರೆತ ಬಡಗಿಯ ಕೆಲಸದಲ್ಲಿ ತೊಡಗಿರುತ್ತಿದ್ದರೆ, ಆದಿಲಕ್ಷ್ಮಿಯು ತನ್ನ ಇಬ್ಬರು ಗಂಡು ಹಾಗೂ ಹೆಣ್ಣುಮಕ್ಕಳ ಪಾಲನೆ ಪೋಷಣೆಯಲ್ಲಿ ಮಗ್ನಳಾದಳು.
ವಯಸ್ಸಾಗಿದೆಯೆಂದಾಕ್ಷಣ ನಾನು ಊಟಕ್ಕೆ ಅರ್ಹಳಲ್ಲವೆಂದೇ? ಮಾಹೆಯಾನ ಪ್ರತಿಯೊಬ್ಬ ವ್ಯಕ್ತಿಗೆ ನೀಡಲಾಗುವ ಏಳು ಕೆ. ಜಿ. ಅಕ್ಕಿಯನ್ನು ಆಕೆ ಹಾಗೂ ಆಕೆಯ ಪತಿಗೆ ನಿರಾಕರಿಸಿದಾಗಿನಿಂದಲೂ ಆದಿಲಕ್ಷ್ಮಿ ಈ ಪ್ರಶ್ನೆಯನ್ನು ಅನೇಕ ಬಾರಿ ಪುನರುಚ್ಚರಿಸಿದ್ದಾಳೆ. ಅಕ್ಕಿಯೊಂದಿಗೆ ಉಪ್ಪು, ಸಕ್ಕರೆ, ತಾಳೆ ಎಣ್ಣೆ ಹಾಗೂ ಸಾಬೂನುಗಳನ್ನು ಸಹ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದ್ದು, ಇದಕ್ಕೆ ಅವರು 150 ರೂ.ಗಳನ್ನು ಪಾವತಿಸತಕ್ಕದ್ದು. ಆದರೆ ಇದನ್ನೂ ಸಹ ಅವರಿಗೆ ನಿಲ್ಲಿಸಲಾಗಿದೆ.
ಈ ವಯೋವೃದ್ಧ ದಂಪತಿಗಳಿಗೆ ಪಡಿತರವನ್ನು ನಿರಾಕರಿಸಿದ್ದೇಕೆ? ಅವರು ಆಗಾಗ್ಗೆ ಭೇಟಿ ನೀಡುವ ಇವರ ಮನೆಯಿಂದ ಸುಮಾರು ಎರಡು ಕಿ. ಮೀ. ದೂರದ ಸಾರ್ವಜನಿಕ ವಿತರಣಾ ಕೇಂದ್ರದಲ್ಲಿ ಈ ಇಬ್ಬರ ಬೆರಳ ಗುರುತಿನ ದೃಢೀಕರಣವು ವಿಫಲಗೊಂಡಿತು. ಈ ಕಾರ್ಯನಿರ್ವಹಣೆಗೆಂದೇ ಚಿಕ್ಕ ಯಂತ್ರಗಳನ್ನು ಬೆಂಗಳೂರಿನ ಪಡಿತರ ವಿತರಣಾ ಕೇಂದ್ರಗಳಲ್ಲಿ ಅಳವಡಿಸಲಾಗಿದೆ. ಈ ಜಿಲ್ಲೆಯಲ್ಲಿ ಇಂತಹ ಸುಮಾರು 1,800 ವಿತರಣಾ ಕೇಂದ್ರಗಳಿವೆ.







