''ಕುದುರೆಗಳನ್ನು ನಾವು ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇವೆ. ಅವುಗಳ ವೈದ್ಯನ ಜವಾಬ್ದಾರಿಯನ್ನೂ ನಿಭಾಯಿಸುವ ನಾನು ಅಗತ್ಯವಿದ್ದಾಗಲೆಲ್ಲಾ ಮುಂಬೈಯಿಂದ ಔಷಧಿಗಳನ್ನು ತರುತ್ತೇನೆ. ಅವುಗಳ ಆರೋಗ್ಯವು ಚೆನ್ನಾಗಿಲ್ಲದ ಸಂದರ್ಭಗಳಲ್ಲಿ ಈ ಔಷಧಿಗಳನ್ನು ಚುಚ್ಚುಮದ್ದಿನ ಮೂಲಕವಾಗಿ ನಾನು ನೀಡುತ್ತೇನೆ. ಅವುಗಳಿಗೆ ಸ್ನಾನ ಮಾಡಿಸಿ ಸ್ವಚ್ಛವಾಗಿಡುವ ಕೆಲಸವೂ ಕೂಡ ನನ್ನದೇ'', ಎನ್ನುತ್ತಿದ್ದಾರೆ ಮನೋಜ್ ಕಸುಂಡೆ. ಮಥೇರನ್ ಪ್ರದೇಶದಲ್ಲಿ ಪರವಾನಗಿಯ ಸಮೇತವಾಗಿ ಕುದುರೆಗಳನ್ನು ಹೊಂದಿರುವ ಮತ್ತು ಜೀವನೋಪಾಯಕ್ಕಾಗಿ ಪ್ರವಾಸಿಗರನ್ನು ಕುದುರೆ ಸವಾರಿ ಮಾಡಿಸುವ ವೃತ್ತಿಯನ್ನವಲಂಬಿಸಿಕೊಂಡು ಬದುಕುತ್ತಿರುವ ಹಲವರಲ್ಲಿ ಕಸುಂಡೆ ಕೂಡ ಒಬ್ಬರು. ಪ್ರವಾಸಿಗರನ್ನು ಕುದುರೆ ಸವಾರರಂತೆ ಕೂರಿಸಿಕೊಂಡು ಇವುಗಳು ಮಥೇರನ್ ನ ಬೆಟ್ಟವನ್ನು ಹತ್ತಿಳಿದರೆ ಹ್ಯಾಂಡ್ಲರ್ ಮತ್ತು ಕೀಪರ್ ಗಳು ಜೊತೆಯಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ.
ಕಸುಂಡೆಗಳು ಒಂದು ರೀತಿಯಲ್ಲಿ ಇದ್ದರೂ ಇಲ್ಲದಂತಿರುವವರು. ಇವರ ಬಗ್ಗೆ ಹೆಚ್ಚಿನ ಮಾಹಿತಿಗಳಾಗಲೀ, ತಿಳಿದುಕೊಳ್ಳುವ ಅವಕಾಶಗಳಾಗಲೀ ಇರುವುದು ಕಮ್ಮಿ. ಇವರುಗಳ ಬಗ್ಗೆ ನಾವು ವಿಚಾರಿಸದಿರುವುದೂ ಕೂಡ ಇದಕ್ಕೊಂದು ಕಾರಣವಾಗಿರಬಹುದು. ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ, ಮುಂಬೈಯ ದಕ್ಷಿಣಕ್ಕೆ ಸುಮಾರು 90 ಕಿಲೋಮೀಟರ್ ದೂರವಿರುವ ಈ ಜನಪ್ರಿಯ ಹಿಲ್ ಸ್ಟೇಷನ್ ನಲ್ಲಿ ಬರೋಬ್ಬರಿ 460 ಕುದುರೆಗಳು ಓಡಾಡುತ್ತಿವೆಯೆಂದರೆ ನೀವು ನಂಬಲೇಬೇಕು. ''ಪ್ರತಿನಿತ್ಯವೂ ನಾವುಗಳು 20-25 ಕಿಲೋಮೀಟರ್ ದೂರದ ಬೆಟ್ಟವನ್ನು ಹತ್ತಿ ಇಳಿಯಬೇಕು'', ಎನ್ನುತ್ತಿದ್ದಾರೆ ಈ ಕುದುರೆಗಳನ್ನು ನೋಡಿಕೊಳ್ಳುತ್ತಿರುವ ಕೀಪರ್ ಗಳು (ಇವರಲ್ಲಿ ಎಲ್ಲರೂ ಮಾಲಕರಲ್ಲ). ಈ ಮಾತುಗಳನ್ನು ಕೇಳಿದರೆ ಹೊರೆಯನ್ನು ಹೊರುವ ಪಾಡು ಕುದುರೆಗಳದ್ದೋ ಅಥವಾ ಕೀಪರ್ ಗಳದ್ದೋ ಎಂಬ ಪ್ರಶ್ನೆಯು ಮೂಡಿದರೆ ಅಚ್ಚರಿಯಿಲ್ಲ.






