ಇಲ್ಲಿರುವ ಎಂಟು ಹಾಡುಗಳಲ್ಲಿ, ಬೀಡ್ ಜಿಲ್ಲೆಯ ಮಜಲ್ಗಾಂವ್ನ ಮೂವರು ಗಾಯಕಿಯರು ಮಧ್ಯಪ್ರದೇಶದ ಮೋವ್ನಲ್ಲಿ ಭೀಮರಾವ್ ಅವರ ಜನನವಾದ ಸಂದರ್ಭವನ್ನು ಹೊಗಳಿ ಹಾಡಿದ್ದಾರೆ. ತಮ್ಮ ಹಾಡುಗಳ ಮೂಲಕ ಅಂಬೇಡ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸುವುದರೊಡನೆ ಬೌದ್ಧಧರ್ಮವು ಅವರಿಗೆ ನೀಡಿರುವ ಹೊಸ ಗುರುತಿನ ಕುರಿತಾಗಿಯೂ ಹಾಡಿದ್ದಾರೆ. ಏಪ್ರಿಲ್ 14ರ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಸಲುವಾಗಿ, ʼಪರಿಯ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ʼ ಅಡಿಯಲ್ಲಿ ಈ ತಿಂಗಳು ಪೂರ್ತಿ ಡಾ. ಅಂಬೇಡ್ಕರ್ ಮತ್ತು ಜಾತಿ ಸಮಸ್ಯೆಗಳ ಕುರಿತ ದ್ವಿಪದಿಗಳನ್ನು ಹಂಚಿಕೊಳ್ಳಲಾಗುತ್ತದೆ.
ಗ್ರೈಂಡ್ ಮಿಲ್ ಸಾಂಗ್ ಪ್ರಾಜೆಕ್ಟ್ನ ಈ ಆವೃತ್ತಿಯಲ್ಲಿನ ಎಂಟು ಚರಣಗಳನ್ನು ಮೂವರು ಹಾಡುಗಾರ್ತಿಯರಾದ ರಂಗುಬಾಯಿ ಪೋತ್ಬಾರೆ, ವಲ್ಹಾಬಾಯಿ ತಾಕಂಖರ್ ಮತ್ತು ರಾಧಾ ಬೋರ್ಡೆ ಅವರಿಂದ ಸಂಗ್ರಹಿಸಲಾಗಿದೆ. ಈ ಮೂವರು ಬೀಡ್ ಜಿಲ್ಲೆಯ ಮಜಲಗಾಂವ್ ನ ತಾಲೂಕು ಗ್ರಾಮವಾದ ಭೀಮ್ ನಗರದ ನಿವಾಸಿಗಳು.
ಮಜಲ್ಗಾಂವ್ ಒಂದು ತಾಲೂಕು ಗ್ರಾಮವಾಗಿದ್ದು ಭೀಮ್ ನಗರ ಅಲ್ಲಿನ ಪ್ರಧಾನವಾಗಿ ದಲಿತ ಜನಸಂಖ್ಯೆಯನ್ನು ಹೊಂದಿರುವ ಕಾಲೊನಿಯಾಗಿದೆ. ಈ ಕಾಲೊನಿಯು ನಮ್ಮ ʼಗ್ರೈಂಡ್ಮಿಲ್ ಸಾಂಗ್ಸ್ ಪ್ರಾಜೆಕ್ಟ್ʼಗೆ ಮೊಗೆದಷ್ಟೂ ಉಕ್ಕುವ ಚಿಲುಮೆಯಂತೆ ಒದಗಿ ಬಂದಿದೆ. ದೀನ-ದಲಿತರ ಬದುಕಿಗೆ ದಾರಿದೀಪವಾಗುವಂತಹ ಕೆಲಸಗಳನ್ನು ಮಾಡಿದ ರಾಜತಾಂತ್ರಿಕ, ರಾಷ್ಟ್ರೀಯ ನಾಯಕ, ತುಳಿತಕ್ಕೊಳಗಾದವರ ಮತ್ತು ಅಂಚಿನಲ್ಲಿರುವ ಜನರ ಧ್ವನಿ, ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ಬಹಳಷ್ಟು ಹಾಡುಗಳು ಇಲ್ಲಿಯೇ ದೊರೆತವು.
ಇಲ್ಲಿರುವ ಎಂಟು ಓವಿಗಳಲ್ಲಿ (ಬೀಸುಕಲ್ಲಿನ ಪದ), ಮೊದಲನೆಯ ಓವಿಯಲ್ಲಿ ರಂಗೂಬಾಯಿ ಮೋವ್ನಲ್ಲಿ ಮಗು ಹುಟ್ಟಿದ ದಿನದಂದು ಅಲ್ಲಿ ನೆಲೆಸಿದ್ದ ಸಂಭ್ರಮ ಮತ್ತು ಉತ್ಸಾಹದ ಕುರಿತು ಹಾಡಿದ್ದಾರೆ. ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮೋವ್ ಎಂಬ ನಗರದಲ್ಲಿ 1891ರ ಎಪ್ರಿಲ್ 14ರಂದು ಜನಿಸಿದರು. ಕಂಟೋನ್ಮೆಂಟ್ ನಗರವಾಗಿದ್ದ ಇದನ್ನು 2003ರಲ್ಲಿ ಇದನ್ನು ಅಧಿಕೃತವಾಗಿ ಡಾ. ಅಂಬೇಡ್ಕರ್ ನಗರ ಎಂದು ಕರೆಯಲಾಯಿತು. ರಾಮಜೀಯವರಿಗೆ ಮಗನೊಬ್ಬ ಹುಟ್ಟಿದ ಸುದ್ದಿಯ ಸಂಭ್ರಮ ನಗರದೆಲ್ಲೆಡೆ ಹರಡಿತ್ತೆಂದು ಈ ಪದ್ಯ ತಿಳಿಸುತ್ತದೆ.




