ವಿಠಲ್ ಚವಾಣ್ ಕಳೆದೆರಡು ತಿಂಗಳುಗಳನ್ನು ‘ಕರೆ’ಯೊಂದರ ನಿರೀಕ್ಷೆಯಲ್ಲಿ ಕಳೆದಿದ್ದಾನೆ. ಆತ ಫೆಬ್ರವರಿ 28 ರಂದು ಒಸ್ಮಾನಾಬಾದಿನ ಕಲಾಂಬ ತಾಲೂಕಿನಲ್ಲಿರುವ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆಗಳ ಒಕ್ಕೂಟದ (National Agricultural Cooperative Marketing Federation of India, NAFED) ಕೇಂದ್ರಕ್ಕೆ ತನ್ನ 7 ಕ್ವಿಂಟಲ್ ತೊಗರಿಯನ್ನು ನೋಂದಾಯಿಸಲು ಹೋಗಿದ್ದ. ಈ ವ್ಯವಸ್ಥೆಯ ಪ್ರಕಾರ ನೋಂದಾವಣೆಯ ನಂತರ ಸರಕಾರವು ಅವನಿಂದ ಆ ಬೇಳೆಯನ್ನು ಕೊಳ್ಳುತ್ತೆ. ಆದರೆ ಅಂದು ಅವನ ಹೆಸರು ಮತ್ತು ನಂಬರನ್ನು ಬರೆದುಕೊಂಡ ಅಲ್ಲಿಯ ಅಧಿಕಾರಿ, “ನಿನಗೆ ಆಮೇಲೆ ಕರೆ ಬರುತ್ತೆ” ಎಂದು ಹೇಳಿ ಕಳುಹಿಸಿದ್ದ.
ಮೇ ತಿಂಗಳ ಒಂದು ಬೆಳಗಿನ ಜಾವದಲ್ಲಿ ಕೇಂದ್ರದ ಅಧಿಕಾರಿಯ ಟೇಬಲ್ ಬಳಿ ಕುಳಿತು, “ದಿನ ಬಿಟ್ಟು ದಿನ ನಾನು ಇವರಿಗೆ ಫೋನ್ ಕರೆ ಮಾಡ್ತಾನೇ ಇದ್ದೆ. ಅಲ್ಲದೆ ಕೇಂದ್ರಕ್ಕೆ ಫೆಬ್ರವರಿ 28 ರ ನಂತರ 4-5 ಸಲ ಖುದ್ದು ಹೋಗಿ ಬಂದಿದ್ದೇನೆ”, ಎನ್ನುವ ವಿಠಲ್ ನಿಗೆ ಪಾನಗಾಂವ್ ನಲ್ಲಿ ಒಂಬತ್ತು ಎಕರೆ ಜಮೀನಿದೆ. ತನ್ನ ತೊಗರಿಯನ್ನು ಕೊಳ್ಳುತ್ತಾರೇನು ಎಂದು ವಿಚಾರಿಸುವ ಸಲುವಾಗಿ ಆತ ಮತ್ತೊಮ್ಮೆ 25 ಕಿಲೋಮೀಟರುಗಳ ದೂರವನ್ನು ಕ್ರಮಿಸಿ ಕಲಾಂಬದಲ್ಲಿರುವ NAFED ಕೇಂದ್ರಕ್ಕೆ ಬಂದಿದ್ದಾನೆ. ಹಾಗೆ ನೋಡಿದರೆ ಇದೇ ತರಹದ ಸಮಸ್ಯೆಯಿಂದ ಬಳಲುತ್ತಿರುವ ಸಾಕಷ್ಟು ರೈತರು ಈ ಪ್ರದೇಶದಲ್ಲಿದ್ದಾರೆ. “ಸಂಗ್ರಹಣೆ ತುಂಬಾ ಜಾಸ್ತಿಯಾಗಿದೆ, ಸಾಕಷ್ಟು ಗೋಣಿಚೀಲಗಳು ಇಲ್ಲ... ಹೀಗೆ ಒಂದಿಲ್ಲೊಂದು ಸಬೂಬುಗಳನ್ನು ಅವರು ಹೇಳ್ತಾನೇ ಇದ್ದಾರೆ. ಈಗ ಕೊನೆಯ ದಿನಾಂಕದ ಗಡುವು ಬೇರೆ ಮುಗಿದು ಹೋಗಿದೆ. ನಾನು ನಿಜಕ್ಕೂ ನೋಂದಾಯಿಸಿದ್ದೆ ಎಂಬುದನ್ನು ಪ್ರಮಾಣೀಕರಿಸಲು ನನ್ನ ಬಳಿ ಯಾವ ಪುರಾವೆಯೂ ಇಲ್ಲ”, ಎನ್ನುತ್ತಿದ್ದಾರೆ ವಿಠಲ್ ಚವಾಣ್.
ಕಳೆದ ವರ್ಷ ತೊಗರಿಯ ಬಂಪರ್ ಬೆಳೆ ಬಂದ ಕಾರಣ ಡಿಸೆಂಬರ್ 2016 ರ ಮಧ್ಯದಲ್ಲಿ ಮಹಾರಾಷ್ಟ್ರ ಸರಕಾರವು ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ NAFED ಕೇಂದ್ರಗಳನ್ನು ಶುರು ಮಾಡಿತು. ದಲ್ಲಾಳಿಗಳು ರೈತರಿಂದ ಅತೀ ಅಗ್ಗದ ಬೆಲೆಗೆ ತೊಗರಿ ಖರೀದಿಸಿ ರೈತರನ್ನು ಲೂಟಿ ಮಾಡಬಾರದು ಅನ್ನುವ ಸದುದ್ದೇಶದಿಂದ ಈ ಕೇಂದ್ರಗಳನ್ನು ಶುರು ಮಾಡಲಾಗಿತ್ತು.


