ಐವತ್ತು ಚಿಲ್ಲರೆ ವಯಸ್ಸಿನ ಪಿಲಿ ಪಾರ್ಧಿ ಎಂಬ ಮಹಿಳೆಯೊಬ್ಬಳು ಕಸ್ತೂರ್ಬಾ ರಸ್ತೆಯ ಹೋಟೇಲೊಂದರ ಹೊರಭಾಗದಲ್ಲಿ ಗ್ರಾಹಕನೊಬ್ಬನ ಬರುವಿಕೆಗಾಗಿ ಕಾಯುತ್ತಿದ್ದಾಳೆ. ಅದು ಮುಂಜಾನೆಯ ಒಂಭತ್ತರ ಸಮಯ. ಹೋಟೇಲಿನ ಬಹಳಷ್ಟು ಚೆಕೌಟ್ ಗಳು ಶುರುವಾಗುವುದು ಈ ಸಮಯದಲ್ಲೇ. ಪಿಲಿಯ ಸೊಸೆಯಾದ ಅರುಣಾ ಕೂಡ ಆಕೆಯ ಜೊತೆಯಲ್ಲಿದ್ದಾಳೆ. ಹೀಗೆ ಮಥೇರನ್ ನಲ್ಲಿ ಪಿಲಿ, ಅರುಣಾ ಮತ್ತು ಪಿಲಿಯ ಮಗ ಈ ಮೂವರೂ ಸೇರಿ ಪೋರ್ಟರ್ ಗಳ ಕೆಲಸವನ್ನು ಮಾಡುತ್ತಿದ್ದಾರೆ.
ಜಯಾ ಪೇಢ್ಕರ್ ಎಂಬ ಮಹಿಳೆಯೂ ಕೂಡ ಮಾಡುತ್ತಿರುವುದು ಇದನ್ನೇ. ಉಳಿದ ಮಹಿಳೆಯರಂತೆಯೇ ಮೂವತ್ತು ಚಿಲ್ಲರೆ ವಯಸ್ಸಿನ ಜಯಾ ಕೂಡ ನಿತ್ಯವೂ 10-40 ಕಿಲೋಗಳಷ್ಟು ತೂಕದ ಸಾಮಾನು ಸರಂಜಾಮುಗಳನ್ನು ತಲೆಯ ಮೇಲೆ ಹೊತ್ತು ದಿನಕ್ಕೆ 3-4 ಬಾರಿ ನಗರದ ಹೋಟೇಲುಗಳಿಂದ ದಸ್ತೂರಿ ಪಾರ್ಕಿಂಗ್ ಜಾಗದ ನಡುವೆ ಓಡಾಡಿಕೊಂಡಿರುತ್ತಾಳೆ. ಮಥೇರನ್ನಿನ ಮುಖ್ಯ ಮಾರುಕಟ್ಟೆಯಿಂದ ಸುಮಾರು 3.5 ಕಿಲೋಮೀಟರುಗಳ ದೂರದಲ್ಲಿರುವ ಈ ಜಾಗವು ಹಿಲ್ ಸ್ಟೇಷನ್ನಿನಲ್ಲಿರುವ ಕೆಲ ಹೋಟೇಲುಗಳಿಂದಲೂ ಸಾಕಷ್ಟು ದೂರದಲ್ಲಿದೆ.





