ಶಾಹಬಾಯ್ ಘಾರತ್ ಒಂದು ವರ್ಷದಿಂದ ಕೊರೋನಾ ಸೋಂಕನ್ನು ಬೆನ್ನತ್ತಿದ್ದರು-ಅದು ಅವರನ್ನು ಆವರಿಸಿಕೊಳ್ಳುವವರೆಗೂ ಬೆನ್ನತ್ತಿದ್ದರು. ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ ಅಥವಾ ಆಶಾ ಆಗಿರುವ ಶಾಹಬಾಯ್, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ತನ್ನ ಗ್ರಾಮವಾದ ಸುಲ್ತಾನ್ಪುರದಲ್ಲಿ ಮನೆ ಮನೆಗೆ ಹೋಗಿ ಕೋವಿಡ್-19 ಸೋಂಕನ್ನು ಪತ್ತೆಹಚ್ಚುತ್ತಿದ್ದರು. ಆದರೆ ಮೇ ತಿಂಗಳ ಕೊನೆಯ ವಾರದಲ್ಲಿ ಅವರ ಆತಂಕವೆಂಬುದು ನನಸಾಗಿತ್ತು, ಕಾರಣ ಸೋಂಕು ಅವರನ್ನು ಆವರಿಸಿತ್ತು.
38 ವರ್ಷದ ಶಹಬಾಯ್ ಅವರಿಗೆ ಸಾಂಕ್ರಾಮಿಕ ಸಂದರ್ಭದಲ್ಲಿ ತನ್ನ ಕೆಲಸದಲ್ಲಿನ ಅಪಾಯದ ಅರಿವು ಇದ್ದೇ ಇದ್ದಿತ್ತು, ಆದರೆ ಅದು ಯಾವ ರೀತಿಯಲ್ಲಿ ಕವಲೊಡೆಯುತ್ತದೆ ಎಂಬುದರ ಬಗ್ಗೆ ಅವರಿಗೆ ಮುಂದಾಲೋಚನೆ ಇರಲಿಲ್ಲ. ಅವರು ಸೋಂಕು ತಗಲಿದ ಕೂಡಲೇ 65ವರ್ಷದ ಅವರ ತಾಯಿಗೂ ಸೋಂಕು ತಗಲಿತು. ನಂತರ ನಾಲ್ಕು ಮಂದಿ ಸಹೋದರಳಿಯಂದಿರಿಗೂ ಸೋಂಕು ತಗಲಿತು, ಈ ಕಾಯಿಲೆಯಿಂದಾಗಿ ಇಡೀ ಕುಟುಂಬವೇ ಬೇಗುದಿಗೆ ಸಿಲುಕಿತು.
ಶಹಬಾಯ್ ಅವರಿಗೆ ಗುಣಮುಖರಾಗಲು ಕೆಲವು ವಾರಗಳೇ ತಗಲಿತು. “ನನ್ನ ಸಹೋದರಳಿಯಂದಿರು ಕೂಡ ಗುಣಮುಖರಾದರು, ಆದರೆ ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು,” ಎನ್ನುತ್ತಾರೆ ಶಹಬಾಯ್, ಒಂದು ವಾರ ಪರ್ಯಂತ ಆಮ್ಲಜನಕದ ನೆರವಿನಲ್ಲಿ ಇರಬೇಕಾಯಿತೆಂದು ಅವರು ತಿಳಿಸಿದುರ. “ನನ್ನ ತಾಯಿಯ ಚಿಕಿತ್ಸೆಗೆ 2.5 ಲಕ್ಷ ರೂ. ವೆಚ್ಚವಾಯಿತು. ಇದಕ್ಕಾಗಿ ನಾನು 2.5 ಎಕರೆ ಕೃಷಿ ಭೂಮಿಯನ್ನು ಮಾರಿದೆ, ಮತ್ತು ಕೆಲವು ಚಿನ್ನಾಭರಣಗಳನ್ನು ಮಾರಿ ಹಣ ನೀಡಿದೆ,”
ಆಶಾ ಕಾರ್ಯಕರ್ತೆಯಾಗಿ ಅವರ ಕೆಲಸ ಅಷ್ಟು ಸುಲಭವಲ್ಲ, ಆದರೆ ಸಾಂಕ್ರಾಮಿಕ ಪಿಡುಗು ಅದನ್ನು ಇನ್ನೂ ಹದಗೆಡಿಸಿತು. “ನಾನು ಬೆದರಿಕೆ ಮತ್ತು ನಿಂದನೆಗಳನ್ನು ಎದುರಿಸಿದೆ. ಆರಂಭದಲ್ಲಿ ಜನರು ರೋಗಲಕ್ಷಣಗಳನ್ನು ಮರೆಮಾಚುತ್ತಿದ್ದರು,” ಎಂದಿರುವ ಶಹಬಾಯ್, “ನಾನು ಹಳ್ಳಿಯಲ್ಲಿ ನನ್ನ ಕೆಲಸವನ್ನು ಮಾಡುವಾಗ ಸಾಕಷ್ಟು ಋಣಾತ್ಮಕ ಪ್ರತಿಕ್ರಿಯೆಗಳನ್ನು ಎದುರಿಸಿದೆ,”
ಮಹಾರಾಷ್ಟ್ರದಲ್ಲಿ 70,000 ಕ್ಕೂ ಹೆಚ್ಚು ಮಾನ್ಯತೆ ಪಡೆದ ಆಶಾ ಕಾರ್ಯಕರ್ತೆಯರಿದ್ದಾರೆ. 2020ರ ಮಾರ್ಚ್ನಲ್ಲಿ ಕೊರೋನಾ ವೈರಸ್ ಸ್ಫೋಟಗೊಂಡಾಗಿನಿಂದ ರಕ್ಷಣಾ ಕಾರ್ಯದಲ್ಲಿ ಈ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದರು. ಮನೆಗಳಿಗೆ ಭೇಟಿ ನೀಡುವುದರ ಜತೆಯಲ್ಲಿ ಚುಚ್ಚುಮದ್ದು ಬಗೆಗಿನ ಗೊಂದಲಗಳನ್ನು ನಿವಾರಿಸುವಲ್ಲಿಯೂ ಹೋರಾಟ ಮಾಡಿದ್ದರು.












