ಏಪ್ರಿಲ್ 5 ರಂದು ನಾವು ಹೃದಯ್ ಪರಭು ಅವರನ್ನು ಭೇಟಿ ಮಾಡಿದಾಗ "ಇಟ್ಟಿಗೆ ಗೂಡಿನಲ್ಲಿ ಯಾವುದೇ ಲಾಕ್ ಡೌನ್ ಇಲ್ಲ. ನಾವು ಎಂದಿನಂತೆ ಪ್ರತಿದಿನ ಕೆಲಸ ಮಾಡುತ್ತಿದ್ದೇವೆ. ಆದರೆ ಈಗ ಆಗಿರುವ ಏಕೈಕ ಬದಲಾವಣೆಯೆಂದರೆ, ಪ್ರತಿವಾರ ನಡೆಯುವ ಊರಿನ ಸಂತೆ ಮುಚ್ಚಿರುತ್ತದೆ, ಆದ್ದರಿಂದ ನಮ್ಮ ಮಾಲೀಕರು ನೀಡುವ ವಾರದ ಭತ್ಯೆಯಲ್ಲಿ ಎಲ್ಲ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದೇವೆ" ಎಂದು ಹೇಳಿದರು.
ಹೃದಯ್ ಈಗ ಕಳೆದ ಮೂರು ವರ್ಷಗಳಿಂದ ತೆಲಂಗಾಣದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಲದ ಹೊರೆಯಿರುವ ಕಾರಣ ಅನಿವಾರ್ಯವಾಗಿ ಅವರು ಈ ಕೆಲಸ ಮಾಡಬೇಕಾಗಿದೆ. ಪ್ರತಿ ವರ್ಷ ಅವರು ಕೆಲಸದ ನಿಮಿತ್ತ ತಮ್ಮ ಪತ್ನಿಯನ್ನು ಒಡಿಶಾದ ಬಾಲಂಗೀರ್ ಜಿಲ್ಲೆಯ ತುರೆಕೆಲಾ ತಾಲ್ಲೂಕಿನಲ್ಲಿರುವ ತಮ್ಮ ಗ್ರಾಮ ಖುತುಲುಮುಂಡಾದಲ್ಲಿ ಬಿಟ್ಟು ಬರುತ್ತಾರೆ. "ನಾನು ನನ್ನ ಹಳ್ಳಿಯಲ್ಲಿ ಲೋಹಕಾರ್(ಕಮ್ಮಾರಿಕೆ) ಕೆಲಸ ಮಾಡುತ್ತಿದ್ದೆ, ಅದರಿಂದ ಚೆನ್ನಾಗಿ ಸಂಪಾದಿಸುತ್ತಿದ್ದೆ, ಆದರೆ ಮನೆ ಕಟ್ಟಿದ ನಂತರ ಸಾಲದ ಸುಳಿಗೆ ಸಿಲುಕಿದ್ದೇನೆ. ಇದರ ಜೊತೆಗೆ ಸರ್ಕಾರವು ನೋಟು ಬಂದಿ (ನೋಟು ಅಮಾನ್ಯೀಕರಣ)ಯನ್ನು ಜಾರಿಗೆ ತಂದಿತು, ಹೀಗಾಗಿ ನನಗೆ ನಮ್ಮ ಊರಿನಲ್ಲಿ ಅಷ್ಟೇನೂ ಕೆಲಸವೂ ಇರಲಿಲ್ಲ, ಒಂದೆಡೆಗೆ ನನ್ನ ಸಾಲವು ಕೂಡ ಹೆಚ್ಚುತ್ತಾ ಬಂದಿತು. ಹೀಗಾಗಿ ನಾನು ಇಟ್ಟಿಗೆಗಳನ್ನು ತಯಾರಿಸಲು ಇಲ್ಲಿಗೆ ಅನಿವಾರ್ಯವಾಗಿ ಬರಬೇಕಾಯಿತು. ಈಗ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಸಹ ಸಾಲದ ಹೊರೆಯಲ್ಲಿದ್ದಾರೆ " ಎಂದು ಅವರು ತಮ್ಮ ಅರೆಬರೆ ಹಿಂದಿಯಲ್ಲಿ ವಿವರಿಸುತ್ತಿದ್ದರು.
ಮಾರ್ಚ್ 25ರಂದು ಸರ್ಕಾರ ವಿಧಿಸಿದ ಅನಿರೀಕ್ಷಿತ ಲಾಕ್ಡೌನ್ ಹೃದಯ್ ಕೆಲಸ ಮಾಡುತ್ತಿದ್ದ ಸಂಗಾರೆಡ್ಡಿ ಜಿಲ್ಲೆಯ ಜಿನ್ನಾರಂ ಮಂಡಲದ ಗಡ್ಡಿಪೋಥರಂ ಗ್ರಾಮದಲ್ಲಿನ ಕಾರ್ಮಿಕರಲ್ಲಿ ಒಂದು ರೀತಿಯ ಗೊಂದಲ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿದೆ. "ಪ್ರತಿ ಶುಕ್ರವಾರ, ನಾವು ಇಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗ್ರಾಮೀಣ ಸಂತೆಗೆ ಹೋಗುತ್ತಿದ್ದೆವು, ನಮಗೆ ಸಿಗುವ ವಾರದ ಭತ್ಯೆಯಲ್ಲಿ ತರಕಾರಿಗಳು ಮತ್ತು ಆಹಾರ ಧಾನ್ಯಗಳನ್ನು ಖರೀದಿಸುತ್ತಿದ್ದೆವು. ಕೆಲವು ಪುರುಷರು ಮದ್ಯವನ್ನೂ ಖರೀದಿಸುತ್ತಿದ್ದರು. ಆದರೆ ಈಗ ಲಾಕ್ ಡೌನ್ನಿಂದಾಗಿ ಮಾರುಕಟ್ಟೆ ಮುಚ್ಚಿರುವುದರಿಂದ ಎಲ್ಲವೂ ಸ್ಥಗಿತಗೊಂಡಿದೆ" ಎಂದು ಅದೇ ಗೂಡುಗಳಲ್ಲಿ ಕೆಲಸ ಮಾಡುವ ಹೃದಯ್ ಅವರ ದೂರದ ಸಂಬಂಧಿ ಜೋಯಂತಿ ಪರಭು ಹೇಳುತ್ತಾರೆ.
ಲಾಕ್ಡೌನ್ ಪ್ರಾರಂಭವಾದ ಎರಡು ದಿನಗಳ ನಂತರ ಕಾರ್ಮಿಕರು ಶುಕ್ರವಾರದ ಸಂತೆಯಿಂದ ಕೆಲವು ಆಹಾರ ಪದಾರ್ಥಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು ಸಹಿತ ಮುಂದಿನ ಶುಕ್ರವಾರದಂದು ಸಂತೆ ಸ್ಥಗಿತಗೊಂಡಿದ್ದರಿಂದ ಅವರು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. " ಈಗ ಅವರಿಗೆ ಆಹಾರವನ್ನು ಸಂಗ್ರಹಿಸುವುದು ಕಷ್ಟಕರವಾಗಿದೆ. ಅಂಗಡಿಗಳನ್ನು ಹುಡುಕುತ್ತಾ ನಾವು ಹಳ್ಳಿಗಳಲ್ಲಿ ಸಾಗುತ್ತಿದ್ದಾಗ ನಮಗೆ ತೆಲುಗು ಭಾಷೆ ಬರದಿರುವುದರಿಂದಾಗಿ ನಮ್ಮನ್ನು ಪೊಲೀಸರು ತಡೆಹಿಡಿದರು" ಎಂದು ಹೃದಯ್ ಹೇಳಿದರು.








