"ಸಬ್ ಮಾಚ್ ಶೇಶ್ [ಎಲ್ಲಾ ಮೀನುಗಳು ಮುಗಿದಿವೆ]," ಎಂದು ಮುರಳಿ ತಮ್ಮ ಹರಕು ಮುರುಕು ಬೆಂಗಾಲಿಯಲ್ಲಿ ಹೇಳುತ್ತಾರೆ, ನಿರಾಶೆಯಿಂದ ಆದರೆ ನಗುತ್ತಾ. "ಶೋಬ್ ಕಿಚ್ಚು ಡಿಫರೆಂಟ್ [ಎಲ್ಲವೂ ಬದಲಾಗಿದೆ]," ನಾವು ಎರಡು ವರ್ಷಗಳ ಹಿಂದೆ ಜಲಧಾ ಗ್ರಾಮದ ಬಳಿಯ ರಾಮನಗರ ಮೀನು ಮಾರುಕಟ್ಟೆಯಲ್ಲಿ ಭೇಟಿಯಾದಾಗಿನಿಂದ, ಮುರಳಿ ಅವರ ಅನುಭವ ಹಂಚಿಕೊಳ್ಳುತ್ತಾರೆ. ಬಂಗಾಳಕೊಲ್ಲಿಯಲ್ಲಿ ಮೀನುಗಳು ಕಣ್ಮರೆಯಾಗುತ್ತಿರುವುದನ್ನು ಸಹ ಮುರಳಿ ಗಮನಿಸಿದ್ದಾರೆ.
ಇವರು ಸಾಗರದ ಮಧ್ಯದಲ್ಲಿ 'ಕಾಲೋ ಜೋನ್' ಬಗ್ಗೆ ಮಾತನಾಡುತ್ತಾರೆ. 2017ರಲ್ಲಿ, ವಿಜ್ಞಾನಿಗಳು ಈ ಪ್ರದೇಶದ ಸುಮಾರು 60,000 ಚದರ ಕಿಲೋಮೀಟರ್ ವಲಯವನ್ನು 'ನಿಷ್ಕ್ರಿಯ ಪ್ರದೇಶ (Dead area)' ಎಂದು ವರದಿ ಮಾಡಿದ್ದಾರೆ. ಇಲ್ಲಿನ ನೀರಿನಲ್ಲಿ ಅತ್ಯಲ್ಪ ಪ್ರಮಾಣದ ಆಮ್ಲಜನಕವಿದೆ, ಸಾರಜನಕ ಇಲ್ಲವಾಗಿದೆ ಮತ್ತು ಬಹುತೇಕ ಸಮುದ್ರ ಜೀವಿಗಳೇ ಇಲ್ಲದಾಗಿದೆ. ಇದು ನೈಸರ್ಗಿಕ ಪ್ರಕ್ರಿಯೆಗಳು ಮತ್ತು ಮಾನವನ ಮಧ್ಯಸ್ಥಿಕೆಗಳ ಫಲಿತಾಂಶವಾಗಿದೆ ಎಂದು ವರದಿಗಳು ಹೇಳುತ್ತವೆ.
ಬೆಸ್ತ ಮೀನುಗಾರ ಸಮುದಾಯಕ್ಕೆ ಸೇರಿದ ಮುರಳಿ (ಅವರ ಕೊನೆಯ ಹೆಸರು ಲಭ್ಯವಿಲ್ಲ), ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಗೋವುಂಡ್ಲಪಾಲೆಂ ಗ್ರಾಮದಲ್ಲಿ (ಜನಗಣತಿಯ ಗುಂಡ್ಲಪಾಲೆಂ) ಬೆಳೆದರು. ಎರಡು ದಶಕಗಳಿಂದ, ಅವರು ಅಕ್ಟೋಬರ್-ಮಾರ್ಚ್ ಮೀನುಗಾರಿಕೆ ಋತುವಿನಲ್ಲಿ ಬಂಗಾಳ ಕೊಲ್ಲಿ ಕರಾವಳಿಯ ಪುರ್ಬಾ ಮೇದಿನಿಪುರ್ ಜಿಲ್ಲೆಯ ರಾಮನಗರ ಬ್ಲಾಕ್ನಲ್ಲಿರುವ ಜಲಧಾ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಅವರು ಹಲವು ವರ್ಷಗಳಿಂದ ಇಲ್ಲಿದ್ದು ಒಂದಿಷ್ಟು ಬಂಗಾಳಿ ಭಾಷೆಯನ್ನು ಕಲಿತಿದ್ದು ಅದಕ್ಕೆ ಇಂಗ್ಲಿಷ್ ಮತ್ತು ಹಿಂದಿ ಮಿಶ್ರಣ ಮಾಡಿ ಮಾತನಾಡುತ್ತಾರೆ.
ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಕರಾವಳಿಯುದ್ದಕ್ಕೂ ಅನೇಕ ಬಂದರುಗಳಲ್ಲಿ ಕುಟುಂಬ ಮತ್ತು ಸ್ನೇಹಿತರನ್ನು ಹೊಂದಿರುವ ಹೆಗ್ಗಳಿಕೆ ಮುರಳಿ ಅವರದು. "ಜಾಫ್ನಾದಿಂದ ಜಂಬೂದ್ವೀಪ್ ವರೆಗೆ, ಎಲ್ಲರೂ ಕುಟುಂಬದವರು," ಎಂದು ಹರ್ಷಚಿತ್ತದಿಂದ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರು ನನಗೆ ಹೆಚ್ಚಿನ ವಿವರಗಳನ್ನು ಹೇಳುವುದಿಲ್ಲ, ಆದರೆ ಅವರ ಸ್ನೇಹಿತ ಸ್ವಪನ್ ದಾಸ್ ಅವರಿಗೆ ನನ್ನನ್ನು ಪರಿಚಯಿಸಿದರು - "ಐ ಅಮರ್ ಭಾಯ್" [ಅವರು ನನ್ನ ಸಹೋದರ]," ಸುಮಾರು 40 ರ ಮುರಳಿ ಹೇಳುತ್ತಾರೆ.






