ಅದೊಂದು ಪುಟ್ಟ, ರೂಪುಗೆಟ್ಟ ಕಟ್ಟಡ. ಹಾಗೆ ನೋಡಿದರೆ ಸತಾರಾ ಜಿಲ್ಲೆಯ ಕಟ್ಗುನ್ ಹಳ್ಳಿಯ ಗ್ರಾಮಸ್ಥರಿಗೆ ಈ ಕಟ್ಟಡವು ಒಂದು ಹೆಮ್ಮೆಯ ಸ್ಮಾರಕದಂತೆ ಕಾಣಬೇಕಿತ್ತು. ಅವರ ಮನದಲ್ಲಿ ಇಂಥಾ ಪೂಜ್ಯ ಭಾವನೆಗಳು ಇರಬಹುದೇನೋ. ಆದರೆ ಹಳ್ಳಿಯ ಪಂಚಾಯತ್ ಮಾತ್ರ ಅಂತಹ ಯಾವುದೇ ವಿಶೇಷ ಪ್ರಾಮುಖ್ಯತೆಯನ್ನು ಈ ಕಟ್ಟಡಕ್ಕೆ ಕೊಟ್ಟಂತೆ ಕಾಣುತ್ತಿಲ್ಲ. ಇದು ಮಹಾರಾಷ್ಟ್ರ ಸರಕಾರದ ವಿಚಾರದಲ್ಲೂ ಸತ್ಯ.
ಇದು ಅಂತಿಂಥ ಮನೆಯೇನಲ್ಲ. ಈ ಮನೆಯು ಪ್ರಖ್ಯಾತ ಸಾಮಾಜಿಕ ಸುಧಾರಕರಾಗಿದ್ದ ಜ್ಯೋತಿಬಾ ಫುಲೆಯವರ ಪೂರ್ವಜರಿಗೆ ಸೇರಿದ್ದು. ಫುಲೆಯವರ ತಾತ ಈ ಮನೆಯನ್ನು ಕಟ್ಟಿಸಿದ್ದರು. ಸದ್ಯ ಈ ಕಟ್ಟಡವು ಅದೆಂಥಾ ದುಸ್ಥಿತಿಯಲ್ಲಿದೆಯೆಂದರೆ ಕಟ್ಟಡದ ಒಳಭಾಗದಲ್ಲಿ ಸಿಮೆಂಟಿನ ಪ್ಲಾಸ್ಟರ್ ಸಡಿಲವಾದ ತೇಪೆಗಳಂತೆ ನೆಲಕ್ಕುದುರಿ ಬೀಳುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನಾ (ಗ್ರಾಮೀಣ ಬಡಜನರಿಗೆಂದು ಪ್ರಧಾನಮಂತ್ರಿಯವರ ಹೆಸರಿನಲ್ಲಿ ರಚಿಸಲಾದ ಗೃಹನಿರ್ಮಾಣ ಯೋಜನೆ) ದ ಮನೆಗಳೇ ಇದಕ್ಕಿಂತ ಉತ್ತಮ ಸ್ಥಿತಿಯಲ್ಲಿವೆಯೇನೋ! ಈ ಗೃಹಯೋಜನೆಯ ಮನೆಯೊಂದನ್ನು ಮತ್ತೊಮ್ಮೆ ಕೆಟ್ಟದಾಗಿ ನವೀಕರಣಗೊಳಿಸಿ ನಿರ್ಮಿಸಿದರೆ ಹೇಗಿರುತ್ತೋ ಫುಲೆಯವರ ಈ ಚಾರಿತ್ರಿಕ ಮನೆಯು ಸದ್ಯ ಅಂತಹ ಸ್ಥಿತಿಯಲ್ಲಿದೆ.
ಅಸಲಿಗೆ ಈ ಮನೆಯನ್ನು ರಿಪೇರಿ ಮಾಡಲು ಮತ್ತು ಸ್ವಚ್ಛಗೊಳಿಸಲು ಹೆಚ್ಚಿನ ಸಮಯವೂ ಬೇಡ. ಅಷ್ಟು ಚಿಕ್ಕದಾಗಿದೆ ಈ ಮನೆ. ಇಂಥಾ ನವೀಕರಣಗಳಿಗಾಗಿ ಪಂಚಾಯತ್ ನ ಬಳಿ ಅವಶ್ಯಕ ಸಂಪನ್ಮೂಲವೂ ಇದೆ ಎಂಬುದನ್ನು ಲೆಕ್ಕ ಹಾಕಲು ಕಟ್ಟಡದ ಹಿಂಭಾಗದಲ್ಲಿ ಎದ್ದು ನಿಂತಿರುವ ಸುಸಜ್ಜಿತ ವ್ಯಾಯಾಮಶಾಲೆಯೇ ಸಾಕ್ಷಿ. ಇನ್ನು ಇದರ ವಿರುದ್ಧ ದಿಕ್ಕಿನಲ್ಲಿಯೇ ಫುಲೆಯವರ ಹೆಸರಿನಲ್ಲಿ ನಡೆಸಲಾಗುತ್ತಿರುವ ವಿದ್ಯಾಸಂಸ್ಥೆಯ ಶಿಥಿಲ ಕಟ್ಟಡವೊಂದಿದೆ. ಇದರದ್ದೇ ಒಂದು ಭಾಗವಾದ ತೆರೆದ ವೇದಿಕೆಯೂ ಕೂಡ ರಸ್ತೆಯ ಪಕ್ಕದಲ್ಲೇ ಇದೆ.



