ನಮ್ಮ ಜೀವನದ ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಟ್ಟಿಗೆ ಒಂದು ಅದ್ಭುತ, ಮನತಟ್ಟುವ ಕ್ಷಣವೊಂದು ಜೂನ್ 07 ರ ಬುಧವಾರದಂದು ನಡೆದುಹೋಯಿತು. ಇನ್ನು 'ಪರಿ'ಯ ಮೊದಲ ಹೆಜ್ಜೆಯಿಂದಲೇ ಇದು ಸಾಧ್ಯವಾಯಿತು ಎಂದು ಹೇಳಲು ನನಗಂತೂ ಹೆಮ್ಮೆ. 'ಕ್ಯಾಪ್ಟನ್ ದೊಡ್ಡಣ್ಣ ಮತ್ತು ಸುಂಟರಗಾಳಿಯ ಸೈನ್ಯ' ವರದಿಯು ನಿಮಗೆ ನೆನಪಿದೆಯಲ್ಲವೇ? ಆ ಕ್ಷಣವೂ ಕೂಡ ಕ್ಯಾಪ್ಟನ್ ದೊಡ್ಡಣ್ಣ ಮತ್ತು ಇತರ ಮರೆತ ಸಾಹಸಿಗಳನ್ನೊಳಗೊಂಡಿತ್ತು ಎಂಬುದು ವಿಶೇಷ.
ಕಾಲಚಕ್ರವು ಉರುಳುತ್ತಾ ಹೋದಂತೆ ವಿಷಾದವೂ ಮೆಲ್ಲನೆ ಆವರಿಸತೊಡಗುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕೊನೆಯ ಹೋರಾಟಗಾರರು ಸಾಯುತ್ತಲೇ ಇದ್ದಾರೆ. ಭಾರತದ ಮುಂದಿನ ಪೀಳಿಗೆಯ ಮಕ್ಕಳಿಗೆ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರನ್ನು ನೋಡುವ ಅಥವಾ ಅವರ ಮಾತುಗಳಿಗೆ ಕಿವಿಯಾಗುವ ಭಾಗ್ಯವಿಲ್ಲ. ಬಹುಷಃ ಈ ಲೇಖನವನ್ನು ಓದುತ್ತಿರುವ ಹಲವರೂ ಕೂಡ ಈ ಅನುಭವವನ್ನು ದಕ್ಕಿಸಿಕೊಂಡವರಲ್ಲ.
ಈ ಕಾರಣಕ್ಕಾಗಿಯೇ ಕಳೆದ ಹಲವು ವರ್ಷಗಳಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆಯರ ಮತ್ತು ಪುರುಷರ ಮಾತುಗಳನ್ನು ಧ್ವನಿಮುದ್ರಿಸಿಕೊಂಡು ನಾನು ದಾಖಲೆಗಳನ್ನಾಗಿಸಿಕೊಂಡಿದ್ದೇನೆ. ಅವರ ಜೀವನವನ್ನು ಚಿತ್ರೀಕರಿಸಿದ್ದೇನೆ, ಅವರ ಬಗ್ಗೆ ಬರೆದಿದ್ದೇನೆ. ಅವರ ರಾತ್ರಿಗಳು ಅಷ್ಟೇನೂ ಸುಖಕರವಾಗಿ ಕಳೆಯುತ್ತಿಲ್ಲವೆಂಬ ಪಶ್ಚಾತ್ತಾಪವು ನನ್ನನ್ನು ಪ್ರತೀ ಬಾರಿಯೂ ಕಾಡಿದೆ. ಒಂದು ರೀತಿಯಲ್ಲಿ ಇವರೆಲ್ಲರದ್ದು ಪ್ರತಿಫಲಗಳಿಲ್ಲದ, ಗುರುತಿಸಲ್ಪಡದ ಜೀವನ.
ಹೀಗಾಗಿ ಸತಾರಾದ 'ಪ್ರತಿ ಸರ್ಕಾರ್' ಅಥವಾ 1943-46 ರ ತಾತ್ಕಾಲಿಕ ಭೂಗತ ಸರಕಾರದಲ್ಲಿದ್ದ ಹೋರಾಟಗಾರರಲ್ಲಿ ಬದುಕಿರುವವರನ್ನು ಮತ್ತೆ ಒಂದುಗೂಡಿಸಲು ಪುನರ್ಮಿಲನ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲು ನಾವು ನೆರವಾಗಿದ್ದೆವು. ಈ ಕಾರ್ಯಕ್ರಮದಲ್ಲಿ ಆಗಲೇ ಮುಪ್ಪಿಗೆ ಬಂದಾಗಿದ್ದ ತೂಫಾನ್ ಸೇನಾದ ಸೈನಿಕರನ್ನು ಮತ್ತು ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಜಿಲ್ಲೆಗಳ ಇತರ ಸ್ವಾತಂತ್ರ್ಯ ಹೋರಾಟಗಾರರನ್ನೂ ಕೂಡ ಜೂನ್ 07 ರಂದು ಸನ್ಮಾನಿಸಲಾಯಿತು. 1943 ರ ಇದೇ ದಿನದಂದು ಈ ಸೈನಿಕರು ಸತಾರಾದ ಶೆನೋಲಿ ಹಳ್ಳಿಯಲ್ಲಿ ಬ್ರಿಟಿಷ್ ರಾಜ್ ನ ಅಧಿಕಾರಿಗಳ ಸಂಬಳದ ಮೊತ್ತವನ್ನು ಕೊಂಡೊಯ್ಯುತ್ತಿದ್ದ ರೈಲಿನ ಮೇಲೆ ದಾಳಿ ಮಾಡಿದ್ದರು. ಹೀಗೆ ಎತ್ತಿಕೊಂಡ ಅಧಿಕಾರಿಗಳ ಸಂಬಳದ ಮೊತ್ತವನ್ನು ಈ ಸೈನಿಕರು ಊರಿನ ಬಡವರಿಗೆ ಹಂಚಿ, ಸ್ಥಾಪಿಸಿದ್ದ 'ಪ್ರತಿ ಸರ್ಕಾರ್' ಅನ್ನು ನಡೆಸಲು ಬೇಕಾಗಿರುವ ಖರ್ಚಿಗೆಂದು ವಿನಿಯೋಗಿಸಿದ್ದರು.
ನಿವೃತ್ತ ರಾಜತಾಂತ್ರಿಕರೂ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರೂ, ಮಹಾತ್ಮಾ ಗಾಂಧಿಯವರ ಮೊಮ್ಮಗನೂ ಆಗಿರುವ ಗೋಪಾಲ್ ಗಾಂಧಿಯವರನ್ನು ದೆಹಲಿಯಿಂದ ಈ ಕಾರ್ಯಕ್ರಮಕ್ಕೆ ಬರಲು ನಾವು ಆಹ್ವಾನಿಸಿದ್ದೆವು. ಗೋಪಾಲ್ ಗಾಂಧಿಯವರು ಕಾರ್ಯಕ್ರಮಕ್ಕೆ ಆಗಮಿಸಿದರಲ್ಲದೆ ಅಲ್ಲಿ ಕಂಡ ದೃಶ್ಯಗಳು ಅವರ ಮನವನ್ನೂ ಕೂಡ ತಟ್ಟಿದ್ದು ಸತ್ಯ.
'ದ ತೂಫಾನ್ ಸೇನಾ' (ಸುಂಟರಗಾಳಿ ಸೇನೆ) ಆ ದಿನಗಳಲ್ಲಿ ಪ್ರತಿ ಸರ್ಕಾರ್ ನ ಸಶಸ್ತ್ರ ವಿಂಗ್ ಆಗಿ ಕಾರ್ಯನಿರ್ವಹಿಸುತ್ತಿತ್ತು. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಒಂದು ವಿಶಿಷ್ಟ ಅಧ್ಯಾಯಗಳಲ್ಲೊಂದು ಎಂದರೆ ತಪ್ಪಾಗಲಿಕ್ಕಿಲ್ಲ. 1942 ರ ಕ್ವಿಟ್ ಇಂಡಿಯಾ ಚಳುವಳಿಯ ಒಂದು ಶಾಖೆಯಾಗಿ ಮೂಡಿಬಂದು ಕ್ರಾಂತಿಕಾರರಿಂದ ನಡೆಸಲ್ಪಡುತ್ತಿದ್ದ ಈ ಗುಂಪು ಸತಾರಾದಲ್ಲಿ ಹೊಸದೊಂದು ಸಮಾನಾಂತರ ಸರಕಾರವನ್ನೇ ಘೋಷಿಸಿತ್ತು. ಸಾಂಗ್ಲಿಯನ್ನೂ ಒಳಗೊಂಡಿದ್ದ ಸತಾರಾ ಆ ಕಾಲದ ದೊಡ್ಡ ಜಿಲ್ಲೆಯೂ ಹೌದು.




