ಅಲಂಕಾರಿಕ ಆಭರಣಗಳನ್ನು ತಯಾರಿಸಲು ನಾನು ಶೋಲಾಪಿತ್ [ಶೋಲಾ ಮರದ ತಿರುಳು] ಬಳಸುತ್ತೇನೆ. ಇದು ಬಳಕೆಗೆ ಸುಲಭವಾಗಿದ್ದು ಇದನ್ನು ವಿವಿಧ ಆಕಾರಗಳಲ್ಲಿ ಮತ್ತು ವಿನ್ಯಾಸಗಳಲ್ಲಿ ಕತ್ತರಿಸಬಹುದು. ಇದು ಹಗುರವಾಗಿಯೂ ಇರುತ್ತದೆ. ನಾವು ಇದನ್ನು ಒಡಿಶಾದಲ್ಲಿ ಶೋಲಾಪಿತ್ ಕಾಮ [ಶೋಲಾಪಿತ್ ಕೆಲಸ] ಎಂದು ಕರೆಯುತ್ತೇವೆ.
ನಾನು ನೆಕ್ಲೇಸ್ಗಳು, ದಸರಾ ಕಸೂತಿ, ಹೂವುಗಳು ಮತ್ತು ಇತರ ಶೋಪೀಸ್ಗಳನ್ನು ಮಾಡಬಲ್ಲೆ, ಆದರೆ ತಹಿಯಾ ತಯಾರಿಕೆಗೆ ಹೆಸರುವಾಸಿಯಾಗಿದ್ದೇನೆ - ಒಡಿಸ್ಸಿ ನೃತ್ಯಗಾರರು ವೇದಿಕೆಯಲ್ಲಿ ಪ್ರದರ್ಶನ ನೀಡುವಾಗ ಧರಿಸುವ ಅಲಂಕಾರಿಕ ಕಿರೀಟ.
ಪ್ಲಾಸ್ಟಿಕ್ ತಹಿಯಾಗಳು ಸಹ ಲಭ್ಯವಿವೆ ಆದರೆ ಅವು ನರ್ತಕಿಯ ನೆತ್ತಿಗೆ ಕಿರಿಕಿರಿ ಉಂಟುಮಾಡುತ್ತವೆ, ಇದರಿಂದಾಗಿ ಬಹಳ ಹೊತ್ತಿನವರೆಗೆ ಧರಿಸಲು ಕಷ್ಟವಾಗುತ್ತದೆ. ಅಲ್ಲದೆ, ಪ್ಲಾಸ್ಟಿಕ್ಕನ್ನು ವಿವಿಧ ವಿನ್ಯಾಸಗಳಲ್ಲಿ ಕೆತ್ತಲು ಸಾಧ್ಯವಿಲ್ಲ.
ಇತರ ಅನೇಕ ನುರಿತ ಕುಶಲಕರ್ಮಿಗಳು ತಹಿಯಾ ತಯಾರಿಸುವುದನ್ನು ನಿಲ್ಲಿಸಿದ್ದಾರೆ, ಆದರೆ ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ.












