“ಈ ಸಮಯಕ್ಕೆ ನಮ್ಮೂರಿನಲ್ಲಿ ಹಬ್ಬದ ವಾತಾವರಣವಿರುತ್ತಿತ್ತು.” ಎನ್ನುತ್ತಾರೆ ನಂದಾ ಗೋಟಾರ್ನೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳ ಕೊನೆಯಲ್ಲಿ, ಗದ್ದೆಯ ಪಕ್ಕದಲ್ಲಿರುವ ಮೈದಾನವು ಭತ್ತ ಬಡಿಯುವ ಕಣವಾಗಿ ಸಿದ್ಧಗೊಂಡಿರುತ್ತಿತ್ತು. ಇಲ್ಲಿ ಗೇಟ್ಸ್ ಬುದ್ರುಕ್ನ ರೈತರು ಎತ್ತಿನ ಸಹಾಯದೊಂದಿಗೆ ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸುತ್ತಿದ್ದರು. ಈ ಪ್ರಕ್ರಿಯೆ ಸುಮಾರು ನವೆಂಬರ್ ತಿಂಗಳ ಮಧ್ಯ ಭಾಗದವರೆಗೂ ಮುಂದುವರೆಯುತ್ತಿತ್ತು.
ಈ ವರ್ಷ ಹೊಲದ ಪಕ್ಕದ ಮೈದಾನ ಮತ್ತು ಗದ್ದೆಗಳು ಕಳೆದ ತಿಂಗಳ ಕೊನೆಯಲ್ಲಿ ಕೆಸರಿನಿಂದ ತುಂಬಿದೆ. ಈ ಬಾರಿ ಭತ್ತದ ಕೊಯ್ಲಿಗೆ ತಯಾರಿ ನಡೆಸುವ ಬದಲು ನಂದಾ ಮತ್ತು ಅವರ ಪತಿ ಅಕೋಬರ್ 16 ಮತ್ತು 17ರಂದು ತಮ್ಮ 2 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ತೆರವುಗೊಳಿಸಬೇಕಾಯಿತು.
ಎರಡು ದಿನಗಳ ನಂತರ, ಅವರ ಜಮೀನಿನಲ್ಲಿ ಹಿಮ್ಮಡಿ ಮುಳುಗುವಷ್ಟು ನೀರು ಇತ್ತು, ಮತ್ತು 42 ವರ್ಷದ ನಂದಾ ಒದ್ದೆಯಾದ ಭತ್ತದ ಕಟ್ಟುಗಳನ್ನು ಒಣಗಿಸುತ್ತಿದ್ದರು. ಅವರು ತನ್ನ ಸೀರೆಯ ಅಂಚಿನಿಂದ ಕಣ್ಣೀರು ಒರೆಸುತ್ತಾ, "ಹೀಗೆ ಒಣಗಿಸುವುದರಿಂದ ಏನಾದರೂ ಪ್ರಯೋಜನ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ" ಎಂದರು. ನಂದಾ ಅವರ ಪತಿ ಕೈಲಾಶ್ ವಡಾ ತಾಲ್ಲೂಕಿನ ಖಾಸಗಿ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದು ಸುಮಾರು ರೂ. 8,000 ಗಳಿಸುತ್ತಾರೆ. ಅವರಿಗೆ 14 ವರ್ಷದ ಮಗಳು ಮತ್ತು 10 ವರ್ಷದ ಮಗನಿದ್ದು, ಇಬ್ಬರೂ ಸ್ಥಳೀಯ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿದ್ದಾರೆ.
ಅಕ್ಟೋಬರ್ನಲ್ಲಿ, ಅನಿರೀಕ್ಷಿತವಾಗಿ ಸುರಿದ ಧಾರಾಕಾರ ಮಳೆ ನಂದಾ ಅವರ ಕುಟುಂಬ ಮತ್ತು ಬುದ್ರುಕ್ ಗೇಟ್ಸ್ನ 1,134 ಜನಸಂಖ್ಯೆಯ ಊರಿನ ಎಲ್ಲ ರೈತರ ಮೇಲೆ ಪರಿಣಾಮ ಬೀರಿತು.
ಕಾಮಿನಿ ಗೋಟಾರ್ನೆ ಅವರ ಹೊಲವೂ ಕೆಸರಿನಿಂದ ತುಂಬಿತ್ತು. "ಭತ್ತ ಪೂರ್ತಿ ಒದ್ದೆಯಾಗಿದೆ, ತೆನೆಯೆಲ್ಲ ಮಣ್ಣುಹಿಡಿದಿದೆ." ಎಂದು ಅವರು ಅಳಲು ತೋಡಿಕೊಂಡರು. ಅವರು ಮತ್ತು ಅವರ ಪತಿ ಮನೋಜ್ ಕೂಡ ಅಕ್ಟೋಬರ್ನಲ್ಲಿ ತಮ್ಮ ನಾಲ್ಕು ಎಕರೆ ಗದ್ದೆಯಲ್ಲಿ ಹಾನಿಗೊಳಗಾದ ಬೆಳೆಯನ್ನು ತೆರವುಗೊಳಿಸುತ್ತಿದ್ದರು, ಅಡ್ಡ ಮಲಗಿದ್ದ ಭತ್ತದ ಪೈರನ್ನು ಕುಡುಗೋಲಿನಿಂದ ಕತ್ತರಿಸುತ್ತಿದ್ದರು. ಇತರ ನಾಲ್ಕು ರೈತರು ಅವರಿಗೆ ಸಹಾಯ ಮಾಡುತ್ತಿದ್ದರು - ಎಲ್ಲರೂ ಹಳ್ಳಿಯಲ್ಲಿರುವ ಪರಸ್ಪರರ ಜಮೀನುಗಳಲ್ಲಿ ಕೆಲಸದಲ್ಲಿ ತೊಡಗಿದ್ದರು.












