ಮೋಟಾರು ಬೈಕಿನ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ 28 ವರ್ಷದ ಬಿಮ್ಲೇಶ್ ಜೈಸ್ವಾಲ್ ಅವರು ಮುಂಬೈನ ಹೊರವಲಯದ ಪನ್ವೇಲ್ ನಲ್ಲಿರುವ ತಮ್ಮ ಬಾಡಿಗೆ ಕೊಠಡಿಯಿಂದ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ಹೋಂಡಾ ಆಕ್ಟಿವಾದಲ್ಲಿ 1,200 ಕಿಲೋಮೀಟರ್ಗಿಂತ ಹೆಚ್ಚು ದೂರ ಸವಾರಿ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಈ ಸ್ಕೂಟರ್ ಸೈಡ್-ಕಾರ್ ನ್ನು ಒಳಗೊಂಡಿದೆ.ಅವರ 26 ವರ್ಷದ ಪತ್ನಿ ಸುನೀತಾ ಮತ್ತು ಅವರ 3 ವರ್ಷದ ಮಗಳು ರೂಬಿಯೊಂದಿಗೆ ಆ ಪ್ರಯಾಣವನ್ನು ಬೆಳೆಸಿದ್ದರು."ನನಗೆ ಬೇರೆ ಆಯ್ಕೆ ಇರಲಿಲ್ಲ" ಎಂದು ಅವರು ಹೇಳುತ್ತಾರೆ.
ಹೊಸ ಯೋಜನೆಯನ್ನು ಹಿಡಿಯುವ ಗುತ್ತಿಗೆದಾರರನನ್ನು ಬೆನ್ನತ್ತಿ ಬಿಮ್ಲೇಶ್ ಧೂಳು ಹೊಡೆಯುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಹಲವು ಕೆಲಸವನ್ನು ಪನ್ವೇಲ್ ನಲ್ಲಿ ಮಾಡಿದ್ದಾರೆ. "ಒಂದೇ ಕಾಲಿನಿಂದ ಯಾವುದೇ ಕೆಲಸ ಮಾಡುವುದು ಕಷ್ಟಕರವಾಗುತ್ತದೆ, ಆದರೆ ಇದು ಅನಿವಾರ್ಯವಾಗಿರುವುದರಿಂದಾಗಿ ಈ ಕೆಲಸವನ್ನು ಮಾಡಲೇಬೇಕಾಗುತ್ತದೆ" ಎಂದು ಅವರು ರೇವಾದ ಹಿನೌತಿ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಫೋನ್ ಕರೆಯಲ್ಲಿ ಹೇಳಿದರು. ಇದೇ ಸ್ಫೂರ್ತಿ ಅವರಿಗೆ ನಿಸ್ಸಂಶಯವಾಗಿ ಕೆಲವೊಮ್ಮೆ 40 ಡಿಗ್ರಿ ಸೆಲ್ಸಿಯಸ್ ದಾಟುವ ಉಷ್ಣಾಂಶದಲ್ಲೂ ಇಂತಹ ಅನಿರೀಕ್ಷಿತ ಪ್ರಯಾಣಕ್ಕೆ ಪ್ರೇರಕವಾಯಿತು.ಇದು ಅವರಂತೆ ಧೈರ್ಯ ಮತ್ತು ಧೃಢ ನಿರ್ಧಾರದ ಮೂಲಕ ಮನೆ ತಲುಪಲು ಹತಾಶಗೊಂಡಿರುವ ವಲಸೆ ಕಾರ್ಮಿಕರ ನಿದರ್ಶನವಾಗಿದೆ.
ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದಾಗ, ಬಿಮ್ಲೇಶ್ ಅವರಂತಹ ಲಕ್ಷಾಂತರ ದಿನಗೂಲಿ ಕಾರ್ಮಿಕರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದರು.”ನಮಗೆ ಯಾವುದೇ ಕೆಲಸವಿರಲಿಲ್ಲ, ಆದ್ದರಿಂದ ಆಹಾರವನ್ನು ಪಡೆಯುವುದು ಹೇಗೆ ಎಂದು ನಮಗೆ ತಿಳಿದಿರಲಿಲ್ಲ" ಎಂದು ಅವರು ಹೇಳುತ್ತಾರೆ.’ಬಾಡಿಗೆ ಮತ್ತು ವಿದ್ಯುತ್ ಬಿಲ್ ನ್ನು ನಾವೇ ಬರಿಸಬೇಕು. ನಾಲ್ಕು ಗಂಟೆಗಳ ನೋಟಿಸ್ ಮೂಲಕ ದೇಶವನ್ನು ಯಾರು ಮುಚ್ಚುತ್ತಾರೆ ಹೇಳಿ? ಎಂದು ಅವರು ಪ್ರಶ್ನಿಸುತ್ತಾರೆ.
50 ದಿನಗಳ ಕಾಲ ಕುಟುಂಬವು ಪನ್ವೇಲ್ ನಲ್ಲಿಯೇ ಉಳಿದಿತ್ತು."ಸ್ಥಳೀಯ ಎನ್ಜಿಒಗಳು ನಮಗೆ ಆಹಾರ ಮತ್ತು ರೇಷನ್ ಸಾಮಾಗ್ರಿಗಳನ್ನು ವಿತರಿಸುತ್ತಿದ್ದವು" ಎಂದು ಬಿಮ್ಲೇಶ್ ಹೇಳುತ್ತಾರೆ. ‘ನಾವು ಹೇಗೋ ಬದುಕುಳಿದೆವು. ಪ್ರತಿ ಹಂತದ ಕೊನೆಯಲ್ಲಿ ಲಾಕ್ಡೌನ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ನಾವು ಭಾವಿಸುತ್ತಿದ್ದೆವು. ಆದರೆ ನಾಲ್ಕನೇ ಹಂತವಿದೆ ಎಂದು ನಮಗೆ ತಿಳಿದಾಗ, ಇದು ಶಾಶ್ವತವಾಗಿ ಮುಂದುವರಿಯಬಹುದು ಎಂದು ನಾವು ಭಾವಿಸಿದೆವು. ಮುಂಬೈ ಮತ್ತು ಸುತ್ತಮುತ್ತಲಿನ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ, ಆದ್ದರಿಂದ ಹಿನೌತಿಯಲ್ಲಿರುವ ನನ್ನ ಕುಟುಂಬವು ಕೂಡ ಈಗ ಚಿಂತೆಗಿಡಾಗಿದೆ’ ಎಂದು ಅವರು ವಿವರಿಸುತ್ತಿದ್ದರು.





