"ಈ ಕಾಯ್ದೆ ಅಥವಾ ಅದರ ನಿಯಮಗಳ ಅಡಿಯಲ್ಲಿ ಯಾವುದೇ ಉತ್ತಮ ಅಥವಾ ಒಳ್ಳೆಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ, ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಉದ್ಯೋಗಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದರ ವಿರುದ್ಧವೂ ಯಾವುದೇ ಮೊಕದ್ದಮೆ ಅಥವಾ ಇತರ ಸಾಂವಿಧಾನಿಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ."
ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಸಂವರ್ಧನೆ ಮತ್ತು ಸರಳೀಕರಣ) ಕಾಯ್ದೆ 2020ರ ಸೆಕ್ಷನ್ 13ಕ್ಕೆ ಸುಸ್ವಾಗತ (ಇದು ಎಪಿಎಂಸಿ ಎಂದು ಕರೆಯಲ್ಪಡುವ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ).
ಮತ್ತೆ ನೀವು ಈ ಕಾನೂನುಗಳು ಕೇವಲ ರೈತರಿಗೆ ಸಂಬಂಧಿಸಿದ್ದು ಎಂದುಕೊಂಡಿದ್ದೀರಾ? ಸಹಜವಾಗಿ ಈಗಾಗಲೇ ಸರ್ಕಾರಿ ನೌಕರರು ತಮ್ಮ ಶಾಸನಬದ್ಧ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅವರನ್ನು ಕಾನೂನು ಕ್ರಮದಿಂದ ರಕ್ಷಿಸುವ ಇತರ ಕಾನೂನುಗಳಿವೆ. ಆದರೆ ಇಲ್ಲಿ ಈ ವಿಷಯದಲ್ಲಿ ಒಂದಿಷ್ಟು ಮುಂದೆ ಹೋಗಲಾಗಿದೆ. ಈ ಕಾನೂನಿನಡಿ ಎಲ್ಲರಿಗೂ “ಒಳ್ಳೆಯ ಉದ್ದೇಶದಿಂದ" ಮಾಡುವ ಎಲ್ಲ ತಪ್ಪುಗಳಿಗೂ ಕಾನೂನು ಕ್ರಮದಿಂದ ರಕ್ಷಣೆ ನೀಡಿರುವುದರ ಜೊತೆಗೆ ಅವರು ಮುಂದೆ ಮಾಡಬಹುದಾದ ಅಪರಾಧಗಳಿಗೂ (ಹೌದು, ಖಂಡಿತ ಸದುದ್ದೇಶದ ಅಪರಾಧಗಳು!) ಕಾನೂನು ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಲಾಗಿದೆ.
ನ್ಯಾಯಾಲಯಗಳಲ್ಲಿ ಯಾವುದೇ ಸಾಂವಿಧಾನಿಕ ಪರಿಹಾರ ಲಭ್ಯವಿರುವುದಿಲ್ಲ ಎನ್ನುವ ಅಂಶ ಅಂಶವನ್ನು ತಪ್ಪಿಹೋಗಿದೆಯೆಂದು ನಿಮಗೆ ಅನ್ನಿಸಿದಲ್ಲಿ ಇದನ್ನು ಮತ್ತೆ ಗಮನಿಸಿ - ಸೆಕ್ಷನ್ 15 ಹೀಗೆ ಹೇಳುತ್ತದೆ:
"ಈ ಕಾಯಿದೆಯಲ್ಲಿ ಅಥವಾ ನಿಯಮಗಳಲ್ಲಿ ಉಲ್ಲೇಖಿಸಲಾದ ಯಾವುದೇ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವಂತಹ ಅಧಿಕಾರಿಯ ವ್ಯಾಪ್ತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ವಿಚಾರಣೆ ನಡೆಸಲು ಯಾವುದೇ ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರವಿರುವುದಿಲ್ಲ."
ಹಾಗಿದ್ದರೆ ಕಾನೂನುಬದ್ಧವಾಗಿ ಸವಾಲು ಮಾಡಲು ಸಾಧ್ಯವಿಲ್ಲದ ʼಸದುದ್ದೇಶದಿಂದʼ ಕೆಲಸ ಮಾಡುವ ʼಆ ಇತರ ವ್ಯಕ್ತಿʼ ಯಾರು? ಸುಳಿವು: ತಿಭಟನಾ ನಿರತ ರೈತರು ಜಪಿಸುತ್ತಿರುವ ಕಾರ್ಪೊರೇಟ್ ದೈತ್ಯರ ಹೆಸರುಗಳನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿ. ಇದು ವ್ಯವಹಾರಗಳನ್ನು ಸರಳವಾಗಿಸುವ ವಿಷಯ - ತುಂಬಾ ದೊಡ್ಡ ವ್ಯವಹಾರ.
"ಯಾವುದೇ ಮೊಕದ್ದಮೆ, ಕಾನೂನು ಕ್ರಮ ಅಥವಾ ಇತರ ಸಾಂವಿಧಾನಿಕ ಕ್ರಮಗಳನ್ನು ಪರಿಗಣಿಸಲು ಸಾಧ್ಯವಿಲ್ಲ..." ಇಲ್ಲಿ ರೈತರಿಗೆ ಮಾತ್ರವಲ್ಲ, ಉಳಿದವರಿಗೂ ದಾವೆ ಹೂಡಲು ಸಾಧ್ಯವಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಅನ್ವಯಿಸುತ್ತದೆ. ಎಂದರೆ ಲಾಭೋದ್ದೇಶವಿಲ್ಲದ ಗುಂಪುಗಳು, ಅಥವಾ ರೈತರ ಸಂಘಗಳು ಅಥವಾ ಯಾವುದೇ ನಾಗರಿಕರು (ಒಳ್ಳೆಯ ಅಥವಾ ಕೆಟ್ಟ ಉದ್ದೇಶಗಳೊಂದಿಗೆ) ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
ಖಂಡಿತವಾಗಿಯೂ 1975-77ರ ತುರ್ತು ಪರಿಸ್ಥಿತಿಯ ನಂತರ (ಆಗ ನಾವು ಎಲ್ಲಾ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದ್ದೆವು) ಈ ರೀತಿಯಲ್ಲಿ ಯಾವ ಕಾನೂನು ಸಹ ನಾಗರರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ನಿರಾಕರಿಸಿರಲಿಲ್ಲ.







