"ನನ್ನ ಪತಿ ಶನಿವಾರ ಈ ಗಾತ್ರದ ಮೂರು ಬಾಟಲಿ ಮದ್ಯವನ್ನು ಖರೀದಿಸುತ್ತಾನೆ", ಎಂದು ಕನಕ ತನ್ನ ಸಂಪೂರ್ಣ ವಿಸ್ತರಿಸಿದ ಕೈಯನ್ನು ಎತ್ತಿ ಹಿಡಿದು ತೋರಿಸುತ್ತಾರೆ. "ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಅವನು ಅವುಗಳನ್ನು ಕುಡಿಯುತ್ತಾ ಕೂರುತ್ತಾನೆ ಮತ್ತು ಬಾಟಲಿಗಳು ಖಾಲಿಯಾದಾಗ ಮತ್ತೆ ಕೆಲಸಕ್ಕೆ ಹೋಗುತ್ತಾನೆ. ಆಹಾರಕ್ಕಾಗಿ ಎಂದಿಗೂ ಸಾಕಷ್ಟು ಹಣವಿರುವುದಿಲ್ಲ. ನನಗೆ ಮತ್ತು ನನ್ನ ಮಗುವಿಗೆ ಆಹಾರವನ್ನು ಹೇಗೋ ಹೊಂದಿಸುತ್ತಿದ್ದೇನೆ. ಇದರ ನಡುವೆ ನನ್ನ ಪತಿ ಇನ್ನೊಂದು ಮಗುವನ್ನು ಬಯಸುತ್ತಿದ್ದಾರೆ. ನನಗಂತೂ ಈ ಜೀವನವೇ ಸಾಕಾಗಿ ಹೋಗಿದೆ!", ಎಂದು ಅವರು ಹತಾಶೆಯಿಂದ ಹೇಳುತ್ತಾರೆ.
ಕನಕ (ಹೆಸರು ಬದಲಾಯಿಸಲಾಗಿದೆ) ಗುಡಲೂರು ಆದಿವಾಸಿ ಆಸ್ಪತ್ರೆಯಲ್ಲಿ ವೈದ್ಯರನ್ನು ನೋಡಲು ಕಾಯುತ್ತಿರುವ 24 ವರ್ಷದ ಬೆಟ್ಟ ಕುರುಂಬ ಆದಿವಾಸಿ ತಾಯಿ. ಉದಕಮಂಡಲಂ (ಊಟಿ)ಯಿಂದ 50 ಕಿಲೋಮೀಟರ್ ದೂರದಲ್ಲಿರುವ ಗುಡಲೂರು ಪಟ್ಟಣದ 50 ಹಾಸಿಗೆಗಳ ಆಸ್ಪತ್ರೆಯು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ಮತ್ತು ಪಂಥಲೂರ್ ತಾಲ್ಲೂಕುಗಳ 12,000 ಕ್ಕಿಂತ ಹೆಚ್ಚು ಆದಿವಾಸಿ ಜನಸಂಖ್ಯೆಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.
ಸ್ವಲ್ಪ ಮಸುಕಾದ ಸಿಂಥೆಟಿಕ್ ಸೀರೆಯುಟ್ಟಿದ್ದ ಕನಕಾ ತನ್ನ ಏಕೈಕ ಹೆಣ್ಣು ಮಗುವಿಗಾಗಿ ಇಲ್ಲಿದ್ದಾರೆ. ಆಸ್ಪತ್ರೆಯಿಂದ 13 ಕಿಲೋಮೀಟರ್ ದೂರದಲ್ಲಿರುವ ತನ್ನ ಕುಗ್ರಾಮದಲ್ಲಿ ಹಿಂದಿನ ತಿಂಗಳು ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾಗ, ಆಸ್ಪತ್ರೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ನೀಲಗಿರಿಗಳಲ್ಲಿನ ಆರೋಗ್ಯ ಕಲ್ಯಾಣ ಸಂಘದ (ಅಶ್ವಿನಿ) ಆರೋಗ್ಯ ಕಾರ್ಯಕರ್ತೆಯೊಬ್ಬರು ಕೇವಲ 7.2 ಕಿಲೋಗ್ರಾಂಗಳಷ್ಟು ತೂಕವಿದ್ದ ಕನಕ ಅವರ ಎರಡು ವರ್ಷದ ಮಗುವನ್ನು ಕಂಡು ಗಾಬರಿಗೊಂಡರು (ಸರಿಯಾದ ತೂಕ ಎರಡು ವರ್ಷ ವಯಸ್ಸಿಗೆ 10-12 ಕಿಲೋ). ಆ ತೂಕವು ಮಗುವಿನ ತೀವ್ರವಾದ ಅಪೌಷ್ಟಿಕತೆಯನ್ನು ತೋರಿಸುತ್ತಿತ್ತು. ಆರೋಗ್ಯ ಕಾರ್ಯಕರ್ತೆ ಕನಕ ಮತ್ತು ಮಗಳನ್ನು ಕೂಡಲೇ ಆಸ್ಪತ್ರೆಗೆ ಭೇಟಿ ನೀಡುವಂತೆ ಒತ್ತಾಯಿಸಿದ್ದರು.
ಮಗುವಿನ ಅಪೌಷ್ಟಿಕತೆಯು ಆಶ್ಚರ್ಯಕರ ವಿಷಯವೇನಲ್ಲ. ಕನಕ ಒಬ್ಬರೇ ತನ್ನ ಕುಟುಂಬದ ಆದಾಯವನ್ನು ಎಷ್ಟರಮಟ್ಟಿಗೆ ವಿಸ್ತರಿಸಲು ಸಾಧ್ಯ? ತನ್ನ 20ರ ಹರೆಯದಲ್ಲಿರುವ ಪತಿ ಹತ್ತಿರದ ಚಹಾ, ಕಾಫಿ, ಬಾಳೆಹಣ್ಣು ಮತ್ತು ಮೆಣಸು ತೋಟಗಳಲ್ಲಿ ದೈನಂದಿನ ಕೂಲಿ ಕಾರ್ಮಿಕನಾಗಿ ವಾರದಲ್ಲಿ ಕೆಲವೇ ದಿನ ಕೆಲಸ ಮಾಡುತ್ತಾನೆ. ದಿನಕ್ಕೆ ಸುಮಾರು ರೂ. 300 ಸಂಪಾದಿಸುತ್ತಾನೆ. "ಅವರು ನನಗೆ ದಿನಸಿಗಾಗಿ ತಿಂಗಳಿಗೆ 500 ರೂಪಾಯಿಗಳನ್ನು ಮಾತ್ರ ನೀಡುತ್ತಾರೆ. ಆ ಹಣದಲ್ಲಿ ನಾನು ಇಡೀ ಕುಟುಂಬಕ್ಕೆ ಅಡುಗೆ ಮಾಡಬೇಕು", ಎಂದು ಕನಕ ಹೇಳುತ್ತಾರೆ.
ಕನಕ ಮತ್ತು ಅವರ ಪತಿ ತಮ್ಮ ಚಿಕ್ಕಮ್ಮ ಮತ್ತು ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದಾರೆ. ಇಬ್ಬರೂ 50ರ ಆಸುಪಾಸಿನಲ್ಲಿದ್ದು ದೈನಂದಿನ ಕೂಲಿ ಕಾರ್ಮಿಕರಾಗಿದ್ದಾರೆ. ಕುಟುಂಬವು ಎರಡು ಪಡಿತರ ಚೀಟಿಗಳನ್ನು ಹೊಂದಿದ್ದು, ಪ್ರತಿ ತಿಂಗಳು 70 ಕಿಲೋಗ್ರಾಂಗಳಷ್ಟು ಉಚಿತ ಅಕ್ಕಿ, ಎರಡು ಕಿಲೋ ದಾಲ್, ಎರಡು ಕಿಲೋ ಸಕ್ಕರೆ ಮತ್ತು ಎರಡು ಲೀಟರ್ ತೈಲವನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. "ಕೆಲವೊಮ್ಮೆ ನನ್ನ ಪತಿ ಮದ್ಯ ಖರೀದಿಸಲು ನಮ್ಮ ಪಡಿತರ ಅಕ್ಕಿಯನ್ನು ಸಹ ಮಾರುತ್ತಾನೆ. ಕೆಲವು ದಿನ ತಿನ್ನಲು ಏನೂ ಇರುವುದಿಲ್ಲ", ಎಂದು ಕನಕ ಹೇಳುತ್ತಾರೆ.











