ಕಿಲಾಬಂದರ್ ನ ಪ್ರವೇಶದ್ವಾರದ ಹೊರಭಾಗದಲ್ಲೇ ಇರುವ ಬಾವಿಯೊಂದರ ಬಳಿ ಪೂರ್ವಾಹ್ನದ 11 ಗಂಟೆಗೇ ಸುಮಾರು 20 ಹೆಂಗಸರು ಮತ್ತು ಎಳೆಯ ಹೆಣ್ಣುಮಕ್ಕಳ ಗುಂಪು ಬಂದು ನಿಂತಾಗಿದೆ. ''ಬಾವಿಯ ಮೂಲೆಯೊಂದರಲ್ಲಿ ಒಂದಿಷ್ಟು ಸ್ವಲ್ಪ ನೀರು ಕಾಣುತ್ತಿದೆ ನೋಡಿ (ಬೇಸಿಗೆಯಾದ್ದರಿಂದ). ಇಲ್ಲಿಂದ ನೀರನ್ನು ತೆಗೆದು ಒಂದು ಕಾಲ್ಶಿಯನ್ನು (ಲೋಹದ ಬಿಂದಿಗೆ) ತುಂಬಿಸುವಷ್ಟರಲ್ಲಿ ಅರ್ಧ ತಾಸು ಹಿಡಿಯುತ್ತದೆ'', ಅನ್ನುತ್ತಿದ್ದಾರೆ ಇಲ್ಲಿಯ ನಿವಾಸಿ ನೀಲಮ್ ಮನ್ಭಾಟ್. ಮುಂಬೈ ನಗರಭಾಗದ ಉತ್ತರಕ್ಕಿರುವ ವಸಾಯಿ ಕೋಟೆಯ ಸರಹದ್ದಿನಂತಿರುವ ಕಿಲಾಬಂದರ್ ಪ್ರದೇಶವು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಒಂದು ಕರಾವಳಿಯ ಹಳ್ಳಿ.
ನಾಲ್ಕರ ಪ್ರಾಯದ ಹೆಣ್ಣುಮಕ್ಕಳೂ ಸೇರಿದಂತೆ ಬಾವಿಯ ಬಳಿಯಲ್ಲಿ ಹೀಗೆ ಗುಂಪುಗಟ್ಟಿ ನಿಂತಿರುವ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಹೀಗೆ ನೀರಿಗಾಗಿ ತಾಸುಗಟ್ಟಲೆ ಕಾಯುವುದು ನಿತ್ಯದ ಮಾತಾಗಿಬಿಟ್ಟಿದೆ. ಹಳ್ಳಿಗೆ ಹತ್ತಿರದಲ್ಲಿರುವ ಕುಡಿಯುವ ನೀರಿನ ಏಕೈಕ ಮೂಲವೆಂದರೆ ಈ ಬಾವಿ. ಮುನಿಸಿಪಾಲಿಟಿಯಿಂದ ಸರಬರಾಜಾಗುವ ನೀರಿನ ಸೌಲಭ್ಯವು ಅನಿಯಮಿತ ಮತ್ತು ಅಸಮರ್ಪಕವಾಗಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು. ಇನ್ನು ಇಲ್ಲಿಯ ಬಹಳಷ್ಟು ಕುಟುಂಬಗಳು ಬೇಸಿಗೆಯ ಸಮಯದಲ್ಲಿ ಈ ಬಾವಿಯನ್ನೇ ಅವಲಂಬಿಸಿರುವುದರಿಂದ ನೀರಿನ ಲಭ್ಯತೆಯೂ ಕೂಡ ತೀರಾ ಇಳಿಮುಖವಾಗಿಬಿಟ್ಟಿದೆ. ಸದ್ಯಕ್ಕಂತೂ ಮಹಿಳೆಯರ ಮತ್ತು ಮಕ್ಕಳ ಈ ಗುಂಪು ನೀರಿಗಾಗಿ ಬಾವಿಯ ತಳವನ್ನು ಅಕ್ಷರಶಃ ಕೆರೆಯಬೇಕಾದ ಪರಿಸ್ಥಿತಿಯು ಬಂದೊದಗಿದೆ.
ಸುಮಾರು 600 ಚದರ ಕಿಲೋಮೀಟರುಗಳಲ್ಲಿ ವ್ಯಾಪಿಸಿರುವ ಪಾಲಗಢ ಜಿಲ್ಲೆಯಲ್ಲಿರುವ ವಸಾಯಿ ತಾಲೂಕಾ ದ ಜನಸಂಖ್ಯೆ ಸುಮಾರು 13 ಲಕ್ಷದಷ್ಟಾಗಬಹುದು (2011 ರ ಜನಗಣತಿಯ ಪ್ರಕಾರ). ಈ ಪ್ರದೇಶದಲ್ಲಿರುವ ಎರಡು ಪಟ್ಟಣಗಳಿಗೆ ಮತ್ತು ನೂರಕ್ಕೂ ಹೆಚ್ಚಿನ ಹಳ್ಳಿಗಳಿಗೆ, ಬಸ್ತಿಗಳಿಗೆ ಸಮರ್ಪಕವಾಗಿ ನೀರನ್ನು ಒದಗಿಸುವ ಜವಾಬ್ದಾರಿಯು ವಸಾಯಿ ವಿರಾರ್ ನಗರಸಭಾ ಪಾಲಿಕೆಯದ್ದು. ಆದರೆ ದುರಾದೃಷ್ಟವಶಾತ್ ಹಾಗಾಗುತ್ತಿಲ್ಲ.
ತಾವು ನೀರಿಗಾಗಿ ಇನ್ನೂ ಬಾವಿ ಮತ್ತು ಟ್ಯಾಂಕರುಗಳನ್ನು ಅವಲಂಬಿಸಿದ್ದರೆ ಪಾಲಗಢಕ್ಕೆ ಬರಬೇಕಾಗಿರುವ ನೀರನ್ನು ಮುಂಬೈ ಮೆಟ್ರೋಪಾಲಿಟನ್ ಭಾಗಕ್ಕೆ ತಿರುಗಿಸಿರುವ ಬಗ್ಗೆ ಕಿಲಾಬಂದರಿನ ನಿವಾಸಿಗಳಿಗೆ ಅಸಮಾಧಾನವಿದೆ. ''ಆಕೆ ಇದನ್ನೆಲ್ಲಾ ಮಾಡಬೇಕಿಲ್ಲ'', ಪ್ರಿಯಾ ಘಾಟ್ಯಾ ಎಂಬಾಕೆ ನನ್ನೆಡೆಗೆ ಬೊಟ್ಟುಮಾಡುತ್ತಾ ಮಹಿಳೆಯೊಬ್ಬಳಲ್ಲಿ ಹೇಳುತ್ತಿದ್ದಾಳೆ. ''ಅವಳ ಬಳಿ ಯಂತ್ರ ಇದೆ ಅನಿಸುತ್ತೆ (ಬಟ್ಟೆ ಒಗೆಯಲು). ಇದೆಲ್ಲಾ ನೀನು ಮಾಡಬೇಕಿಲ್ಲ. ನಮಗಷ್ಟೇ ಇಲ್ಲಿ ನೀರು ಸಿಗುವುದಿಲ್ಲ, ಆದರೆ ನಿಮಗಿದೆ'', ಎನ್ನುತ್ತಿದ್ದಾಳೆ ಆಕೆ.
ವಸಾಯಿ ಕೋಟೆಯ 109 ಎಕರೆಯ ಭೂಮಿಯ ಆವರಣದಲ್ಲಿ ಮತ್ತು ಆಸುಪಾಸಿನಲ್ಲಿ 75 ಕ್ಕಿಂತಲೂ ಹೆಚ್ಚಿನ ಬಾವಿಗಳಿವೆ. ''ಆದರೆ ಅವುಗಳಲ್ಲಿ ಬಹಳಷ್ಟು ಉಪಯೋಗಿಸುವ ಸ್ಥಿತಿಯಲ್ಲಿಲ್ಲ'', ಎನ್ನುತ್ತಿದ್ದಾರೆ ಕೋಟೆಯ ಮೇಲ್ವಿಚಾರಣೆಯನ್ನು ವಹಿಸಿರುವ, ಪುರಾತತ್ವ ಶಾಸ್ತ್ರ ಸಮೀಕ್ಷೆಯ (ಆರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ) ಸಂರಕ್ಷಣಾ ಸಹಾಯಕರಾದ ಕೈಲಾಸ್ ಶಿಂಧೆಯವರು. ಇದರಲ್ಲಿ 5-6 ಬಾವಿಗಳು ಮಾತ್ರ ಉಪಯೋಗಿಸುವ ಸ್ಥಿತಿಯಲ್ಲಿವೆಯಂತೆ.







