ಜೂನ್ 16, 2022ರ ರಾತ್ರಿ, ಲಬಾ ದಾಸ್ ಅಸ್ಸಾಂನ ನಗಾಂವ್ ಗ್ರಾಮದ ಇತರರಂತೆ, ನಾನೋಯಿ ನದಿಯ ದಡದಲ್ಲಿ ಹತಾಶವಾಗಿ ಮರಳಿನ ಚೀಲಗಳನ್ನು ಜೋಡಿಸುತ್ತಿದ್ದರು. ಬ್ರಹ್ಮಪುತ್ರ ನದಿಯ ಉಪನದಿಯಾದ ಈ ನದಿಯು ತನ್ನ ದಡವನ್ನು ಭೇದಿಸಲಿದೆ ಎಂದು 48 ಗಂಟೆಗಳ ಹಿಂದೆ ಅವರಿಗೆ ತಿಳಿಸಲಾಗಿತ್ತು. ದರ್ರಾಂಗ್ ಜಿಲ್ಲೆಯ ಈ ಗ್ರಾಮಗಳಿಗೆ ದಡದ ಉದ್ದಕ್ಕೂ ಜೋಡಿಸಲು ಮರಳು ಮೂಟೆಗಳನ್ನು ಜಿಲ್ಲಾಡಳಿತವು ಒದಗಿಸಿತ್ತು.
"ಜೂನ್ 17ರಂದು ಮುಂಜಾನೆ 1 ಗಂಟೆ ಸುಮಾರಿಗೆ ಒಡ್ಡು ಒಡೆದುಹೋಯಿತು", ಎಂದು ಸಿಪಜಾರ್ ಬ್ಲಾಕ್ನ ನಾಗಾವ್ನ ಹಿರಾ ಸುಬುರಿ ಕುಗ್ರಾಮದ ನಿವಾಸಿ ಲಾಬಾ ಹೇಳುತ್ತಾರೆ. "ಅದು ಬೇರೆ ಬೇರೆ ಹಂತಗಳಲ್ಲಿ ಒಡೆಯುತ್ತಿದ್ದುದರಿಂದ ನಾವು ಅಸಹಾಯಕರಾಗಿದ್ದೆವು." ಆ ವೇಳೆಗೆ ಐದು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿತ್ತು, ಆದರೆ ತಿಂಗಳ ಆರಂಭದಿಂದಲೂ ನೈರುತ್ಯ ಮಾನ್ಸೂನಿನಿಂದ ರಾಜ್ಯವು ತತ್ತರಿಸುತ್ತಿತ್ತು. ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಜೂನ್ 16ರಿಂದ 18ರವರೆಗೆ ಅಸ್ಸಾಂ ಮತ್ತು ಮೇಘಾಲಯದಲ್ಲಿ 'ಅತ್ಯಂತ ಭಾರಿ ಮಳೆ' (ದಿನಕ್ಕೆ 244.5 ಮಿ.ಮೀ.ಗಿಂತ ಹೆಚ್ಚು ಅಥವಾ ಸಮನಾದ) ಎಂದು ಮುನ್ಸೂಚನೆ ನೀಡಿತ್ತು.
ಜೂನ್ 16ರ ರಾತ್ರಿ 10.30ರ ಸುಮಾರಿಗೆ ನಾನೋಯಿ ನದಿಯು ನಾಗಾವ್ನಿಂದ ದಕ್ಷಿಣಕ್ಕೆ ಒಂದು ಕಿಲೋಮೀಟರ್ ದೂರದಲ್ಲಿರುವ ಖಾಸ್ಡಿಪಿಲಾ ಗ್ರಾಮದ ಕಾಲಿತಪಾರ ಕುಗ್ರಾಮಕ್ಕೆ ಅಪಾರ ಶಕ್ತಿಯೊಂದಿಗೆ ನುಗ್ಗಿತು. ಜಯಮತಿ ಕಲಿತಾ ಮತ್ತು ಅವರ ಕುಟುಂಬವು ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡಿತು. "ಒಂದು ಚಮಚವೂ ಉಳಿದಿರಲಿಲ್ಲ," ಎಂದು ತಗಡಿನ ಛಾವಣಿಯ ತಾತ್ಕಾಲಿಕ ಟಾರ್ಪಾಲಿನ್ ಚಪ್ಪರದ ಹೊರಗೆ ಕುಳಿತ ಅವರು ಹೇಳುತ್ತಾರೆ. "ಕಣಜ ಮತ್ತು ದನದ ಕೊಟ್ಟಿಗೆ ಸೇರಿದಂತೆ ನಮ್ಮ ಮನೆಗಳು ಬಲವಾದ ಪ್ರವಾಹದಿಂದ ಕೊಚ್ಚಿಹೋದವು" ಎಂದು ಅವರು ಹೇಳುತ್ತಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ದೈನಂದಿನ ಪ್ರವಾಹ ವರದಿಯ ಪ್ರಕಾರ, ಜೂನ್ 16ರಂದು, ರಾಜ್ಯದ 28 ಜಿಲ್ಲೆಗಳಲ್ಲಿ ಸುಮಾರು 19 ಲಕ್ಷ ಜನರು (1.9 ಮಿಲಿಯನ್) ಮಳೆಯಿಂದ ಬಾಧಿತರಾಗಿದ್ದಾರೆ. ಸುಮಾರು 3 ಲಕ್ಷ ಜನರು ಬಾಧಿತರಾದ ದರ್ರಾಂಗ್, ಆ ರಾತ್ರಿ ರಾಜ್ಯದ ಮೂರು ಅತಿ ಹೆಚ್ಚು ಬಾಧಿತ ಜಿಲ್ಲೆಗಳಲ್ಲಿ ಒಂದಾಗಿತ್ತು. ನಾನೋಯಿ ನದಿಯು ತನ್ನ ದಡವನ್ನು ಮೀರಿ ಉಕ್ಕಿ ಹರಿದ ರಾತ್ರಿ, ರಾಜ್ಯದ ಇತರ ಆರು ನದಿಗಳಾದ ಬೆಕಿ, ಮಾನಸ್, ಪಗ್ಲಾಡಿಯಾ, ಪುತಿಮರಿ, ಜಿಯಾ-ಭರಾಲಿ ಮತ್ತು ಬ್ರಹ್ಮಪುತ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದವು.

























