ಭಾನುವಾರ ಬೆಳಗಿನ ಸಮಯ 10.30 ಹನಿ ಕೆಲಸಕ್ಕೆ ಹೋಗಲು ಸಿದ್ಧರಾಗುತ್ತಾ ಕನ್ನಡಿಯ ಮುಂದೆ ಕುಳಿತು ಅವರ ತುಟಿಗಳಿಗೆ ಕೆಂಪು ಲಿಪ್ಸ್ಟಿಕ್ ಹಚ್ಚಿಕೊಳ್ಳುತ್ತಿದ್ದರು. ಈ ನಡುವೆ ನನ್ನನ್ನು ನೋಡಿ "ಈ ಬಣ್ಣವು ನನ್ನ ಉಡುಪಿಗೆ ಹೊಂದಿಕೆಯಾಗುತ್ತದೆ" ಎಂದು ಹೇಳುತ್ತಾ ತನ್ನ ಏಳು ವರ್ಷದ ಮಗಳಿಗೆ ಆಹಾರವನ್ನು ನೀಡಲು ಅವಸರದಿಂದ ಎದ್ದರು. ಕೆಲವು ಮಾಸ್ಕ್ಗಳು ಮತ್ತು ಇಯರ್ಫೋನ್ ಕನ್ನಡಿಯ ಮುಂದೆ ಡ್ರೆಸ್ಸಿಂಗ್ ಟೇಬಲ್ ಮೇಲೆ ಬಿದ್ದಿದ್ದವು. ಮೇಕ್ಅಪ್ ವಸ್ತುಗಳು ಮತ್ತು ಸೌಂದರ್ಯವರ್ಧಕಗಳು ಮೇಜಿನ ಮೇಲೆ ಚದುರಿದ್ದವು. ಕೋಣೆಯ ಒಂದು ಮೂಲೆಯಲ್ಲಿ ಗೋಡೆಯ ಮೇಲೆ ನೇತಾಡುವ, ದೇವರು ಮತ್ತು ದೇವತೆಗಳ ಚಿತ್ರಗಳು ಮತ್ತು ಸಂಬಂಧಿಕರ ಫೋಟೋಗಳು ಕಾಣುತ್ತಿದ್ದವು.
ಹನಿ (ಹೆಸರು ಬದಲಾಯಿಸಲಾಗಿದೆ) ತನ್ನ ಮನೆಯಿಂದ 7-8 ಕಿಲೋಮೀಟರ್ ದೂರದಲ್ಲಿರುವ ಹೋಟೆಲ್ನಲ್ಲಿ ತನ್ನ ಕ್ಲೈಂಟ್ ಭೇಟಿಯಾಗಲು ತಯಾರಾಗುತ್ತಿದ್ದಾರೆ - ನವದೆಹಲಿಯ ಮಂಗೋಲ್ಪುರಿ ಪ್ರದೇಶದ ಬಸ್ತಿಯಲ್ಲಿ ಅವರಿಗಾಗಿ ಒಂದು ಕೋಣೆಯನ್ನು ಹೊಂದಿಸಲಾಗಿದೆ. ಹನಿ ಸುಮಾರು 32 ವರ್ಷ ಪ್ರಾಯದವರು ಹಾಗೂ ವೃತ್ತಿಯಲ್ಲಿ ಲೈಂಗಿಕ ಕಾರ್ಯಕರ್ತೆ. ರಾಜಧಾನಿಯ ಹತ್ತಿರದ ನಂಗ್ಲೋಯಿ ಜಾಟ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮೂಲತಃ ಗ್ರಾಮೀಣ ಹರಿಯಾಣ ಮೂಲದವರು. “ನಾನು 10 ವರ್ಷಗಳ ಹಿಂದೆ ಇಲ್ಲಿಗೆ ಬಂದೆ, ಈಗ ನಾನು ಇಲ್ಲಿಯವಳಾಗಿದ್ದೇನೆ. ಆದರೆ ದೆಹಲಿಗೆ ಬಂದಾಗಿನಿಂದ ನನ್ನ ಜೀವನ ಸಂಕಷ್ಟಗಳ ಸರಮಾಲೆಯನ್ನೇ ಎದುರಿಗಿಡುತ್ತಿದೆ.”
ಯಾವ ರೀತಿಯ ದುರಂತಗಳು?
“ನನ್ನನ್ನು ನೋಡಿಕೊಳ್ಳಲು ಮತ್ತು ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಇಲ್ಲದ ಸಮಯದಲ್ಲಿ ನನ್ನ ಪಾಲಿಗೆ ಇದ್ದಿದ್ದು ನಾಲ್ಕು ಗರ್ಭಪಾತಗಳ ಬಹಳ ದೊಡ್ಡ ಆಘಾತ!” ಹನಿ ತಾನು ಇದಕ್ಕೂ ಮೊದಲು ಬಹಳ ಸಂಕಷ್ಟದ ದಾರಿಯಲ್ಲಿ ನಡೆದುಬಂದಿದ್ದೇನೆನ್ನುವುದನ್ನು ವ್ಯಂಗ್ಯವಾಗಿ ಹೇಳುತ್ತಾರೆ.
“ನನಗೆ ಮತ್ತು ನನ್ನ ಹೊಟ್ಟೆಯೊಳಗಿದ್ದ ಮಗುವಿಗೆ ಆಹಾರಕ್ಕಾಗಿ ನನ್ನ ಬಳಿ ಹಣವೇ ಇದ್ದಿರಲಿಲ್ಲ. ಇದೊಂದೇ ಕಾರಣದಿಂದಾಗಿ ನಾನು ಈ ಉದ್ಯೋಗಕ್ಕೆ ಇಳಿದೆ. ನಾನು ಐದನೇ ಬಾರಿಗೆ ಗರ್ಭಿಣಿಯಾಗಿದ್ದೆ. ಎರಡು ತಿಂಗಳ ಎಳೇ ಬಸುರಿಯಾಗಿದ್ದಾಗ ಗಂಡ ನನ್ನನ್ನು ಬಿಟ್ಟುಹೋದ. ನನ್ನನ್ನು ಕಾಡಿದ ಸರಣಿ ಅನಾರೋಗ್ಯದ ಕಾರಣಕ್ಕೆ ನಾನು ಕೆಲಸ ಮಾಡುತ್ತಿದ್ದ ಪ್ಲಾಸ್ಟಿಕ್ ಕಂಟೇನನರ್ ಫ್ಯಾಕ್ಟರಿಯ ಮಾಲಿಕರು ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ಅಲ್ಲಿ ತಿಂಗಳಿಗೆ 10,000 ಸಂಪಾದಿಸುತ್ತಿದ್ದೆ.” ಎಂದು ಅವರು ಹೇಳುತ್ತಾರೆ.
ಹರಿಯಾಣದಲ್ಲಿ ಹನಿಯವರ ಪಾಲಕರು ಅವರಿಗೆ ಹದಿನಾರು ವರ್ಷವಿರುವಾಗ ಮದುವೆ ಮಾಡಿಸಿದರು. ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಗಂಡನೊಂದಿಗೆ ಹನಿಯವರು ಕೆಲವು ವರ್ಷಗಳ ಕಾಲ ಅಲ್ಲಿ ಬದುಕಿದ್ದರು. ಆಕೆ 22 ವರ್ಷವಿರುವಾಗ ದಂಪತಿಗಳು ದೆಹಲಿಗೆ ತಮ್ಮ ವಾಸ್ತವ್ಯ ಬದಲಿಸಿದರು. ಆದರೆ ಒಮ್ಮೆ ಅಲ್ಲಿಗೆ ಹೋದ ನಂತರ ಅವರ ಕುಡುಕ ಗಂಡ ಆಗಾಗ ನಾಪತ್ತೆಯಾಗಲು ಪ್ರಾರಂಭಿಸಿದ. “ಅವನು ತಿಂಗಳುಗಟ್ಟಲೆ ಕಾಣುತ್ತಿರಲಿಲ್ಲ, ಎಲ್ಲಿ ಹೋಗುತ್ತಿದ್ದನೆಂದು ಗೊತ್ತಾಗುತ್ತಿರಲಿಲ್ಲ. ಅವನೂ ಈಗಲೂ ಅದನ್ನೇ ಮಾಡುತ್ತಾನೆ ಮತ್ತು ಎಲ್ಲಿಗೆ ಹೋಗಿದ್ದೆನೆಂದು ಎಂದೂ ಹೇಳಿಲ್ಲ. ಬೇರೆ ಹೆಂಗಸರೊಂದಿಗೆ ಹೋಗಿ ಹಣ ಮುಗಿದಾಗ ಮರಳುತ್ತಾನೆ. ಅವನು ಆಹಾರ ಸರಬರಾಜು ಕಂಪನಿಯೊಂದರಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಾನೆ. ತಾನು ದುಡಿದ ಹಣವನ್ನೆಲ್ಲ ತನಗೇ ಖರ್ಚು ಮಾಡಿಕೊಳ್ಳುತ್ತಾನೆ. ಇದರಿಂದಾಗಿಯೇ ನನಗೆ ನಾಲ್ಕು ಗರ್ಭಪಾತಗಳಾಗಿದ್ದು. ಅವನು ನನಗೆ ಅಗತ್ಯವಿರುವ ಆಹಾರವಾಗಲಿ, ಔಷಧಿಯನ್ನಾಗಲಿ ತಂದು ಕೊಡುತ್ತಲೇ ಇರಲಿಲ್ಲ. ಆಗ ನಾನು ಬಹಳ ದುರ್ಬಲಳಾಗಿ ಕಾಣುತ್ತಿದ್ದೆ” ಎನ್ನುತ್ತಾರೆ.







