"ನೋಡಿ, ನಮ್ಮ ಮೋಟಾರ್ ಕೆಸರಿನಲ್ಲಿ ಹೂತುಹೋಗಿದೆ." ದೇವೇಂದ್ರ ರಾವತ್ ಕೆಸರಿನಲ್ಲಿ ಸಿಲುಕಿದ ತನ್ನ ಪಂಪಿಂಗ್ ಸೆಟ್ ಹೊರತೆಗಯಲು ಪ್ರಯತ್ನಿಸುತ್ತಿರುವಾಗ ಸ್ವಲ್ಪ ಸಿಟ್ಟಿನಲ್ಲಿರುವಂತೆ ಕಾಣುತ್ತಿದ್ದರು. ಅವರು ತಿಂಗಳುಳಿಂದ ಮೋಟಾರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಮಧ್ಯಪ್ರದೇಶದ ಸುಂಧ್ ಗ್ರಾಮದ ಈ 48 ವರ್ಷದ ರೈತ ಹೇಳುತ್ತಾರೆ, “ಪ್ರವಾಹದಿಂದ ಹೊಲಗಳಲ್ಲಿ ಉಂಟಾದ ಸವಕಳಿಯಿಂದಾಗಿ ನಮ್ಮ ಮೂರು ಮೋಟಾರ್ಗಳು ಮಣ್ಣಿನಲ್ಲಿ ಹೂತುಹೋಗಿವೆ. ಒಂದು ಬಾವಿಯೂ ಮುಚ್ಚಿ ಹೋಗಿದೆ. ನಾವು ಏನು ಮಾಡಬೇಕು?"
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ನರ್ವಾರ್ ತೆಹಸಿಲ್ನಲ್ಲಿ ಬರುವ ಈ ಗ್ರಾಮವು ಸಿಂಧ್ ನದಿಯ ಎರಡು ತೊರೆಗಳ ನಡುವೆಯಿದೆ. ಆಗಸ್ಟ್ 2021ರಲ್ಲಿ, ಸಿಂಧ್ ನದಿಯ ಪ್ರವಾಹವು 635 ಜನರ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ದೊಡ್ಡ ವಿನಾಶವನ್ನು ಉಂಟುಮಾಡಿತು (ಜನಗಣತಿ 2011). ದೇವೇಂದ್ರ ಹೇಳುತ್ತಾರೆ, “ಇಂತಹ ನೆರೆಯನ್ನು ನಾವು ಹಿಂದೆಂದೂ ನೋಡಿರಲಿಲ್ಲ. ನಮ್ಮ ಗ್ರಾಮದ ಸುತ್ತಲೂ ನೀರು ತುಂಬಿತ್ತು. ನಮ್ಮ 30 ಬಿಘಾ [ಸುಮಾರು 18 ಎಕರೆ] ಭತ್ತದ ಬೆಳೆ ಪ್ರವಾಹದಿಂದ ನಾಶವಾಯಿತು. ನನ್ನ ಕುಟುಂಬದ ಆರು ಬಿಘಾ ಜಮೀನು [ಸುಮಾರು 3.7 ಎಕರೆ] ಶಾಶ್ವತವಾಗಿ ಕೊಚ್ಚಿಹೋಗಿವೆ.”
ಎಲ್ಲಾ ಕಡೆ ನೀರಿನಿಂದ ಆವೃತವಾಗಿರುವ, ಕಾಳಿ ಪಹಾರಿ ಪಂಚಾಯತ್ನ ವ್ಯಾಪ್ತಿಯ ಸುಂಧ್ ಹೆಸರಿನ ಈ ಊರು ದ್ವೀಪದಂತಿದೆ. ಇಲ್ಲಿನ ಜನರು ಸಾಮಾನ್ಯ ದಿನಗಳಲ್ಲಿಯೂ ಹೆಚ್ಚುವರಿ ನೀರು ಬಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಈಜುತ್ತಾ ಅಥವಾ ನೀರಿನಲ್ಲಿ ಮುಳುಗಿ ರಸ್ತೆ ದಾಟಬೇಕು.
ದೇವೇಂದ್ರ ಹೇಳುವ ಪ್ರಕಾರ, "ಪ್ರವಾಹದ ಸಮಯದಲ್ಲಿ, ಊರು ಮೂರು ದಿನಗಳವರೆಗೆ ಪ್ರವಾಹ ನೀರಿಲ್ಲಿ ಮುಳುಗಿತ್ತು." ಆ ಸಮಯದಲ್ಲಿ ಸರ್ಕಾರಿ ದೋಣಿ ಬಂದು ಜನರನ್ನು ಇಲ್ಲಿಂದ ಹೊರಕ್ಕೆ ಕರೆದೊಯ್ದಿದ್ದರು, ಆದರೆ 10-12 ಜನರು ಊರಿನಲ್ಲೇ ಉಳಿದರು. ಜನರು ಹತ್ತಿರದ ಮಾರುಕಟ್ಟೆಯಲ್ಲಿ ಅಥವಾ ಸಂಬಂಧಿಕರ ಹಳ್ಳಿಯಲ್ಲಿ ಉಳಿದುಕೊಂಡರು. ಪ್ರವಾಹದ ಸಂದರ್ಭದಲ್ಲಿ ವಿದ್ಯುತ್ ಕೂಡ ಸ್ಥಗಿತಗೊಂಡಿತ್ತು, ಅದು ಒಂದು ತಿಂಗಳ ನಂತರ ಮರಳಿ ಬಂದಿತು ಎಂದು ದೇವೇಂದ್ರ ಹೇಳುತ್ತಾರೆ.










