"ನನ್ನ ಜೀವನದಲ್ಲಿ ಈ ನದಿಯನ್ನು ಇಷ್ಟು ವ್ಯಗ್ರವಾಗಿ ಎಂದೂ ನೋಡಿಲ್ಲ," ಎಂದು 55 ವರ್ಷದ ಸಕುಬಾಯಿ ವಾಘ್ ಹೇಳುತ್ತಾರೆ. ಆ ದಿನ, ಆಗಸ್ಟ್ 4ರಂದು, ಅವರ 20 ವರ್ಷದ ಮಗ ಮನೋಜ್ ಮತ್ತು ಅವರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಲ್ಲಿದ್ದರು. "ಹೊರಗೆ ಸಾಕಷ್ಟು ಮಳೆ ಸುರಿಯುತ್ತಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಇದ್ದಕ್ಕಿದ್ದಂತೆ ಬಲವಾದ ನೀರಿನ ಅಲೆಯು ನಮ್ಮ ಗುಡಿಸಲನ್ನು ಪ್ರವೇಶಿಸಿತು. ಸ್ವಲ್ಪ ಸಮಯದವರೆಗೆ ನಾವು ಪರಸ್ಪರರ ಕೈಗಳನ್ನು ಹಿಡಿದುಕೊಂಡು ಕುತ್ತಿಗೆಯ ಆಳದ ನೀರಿನಲ್ಲಿದ್ದೆವು. ಕಾಸಿಗೆ ಕಾಸು ಕೂಡಿಸಿ ಉಳಿಸಿ ಇಟ್ಟಿದ್ದ ಎಲ್ಲವನ್ನೂ ನೀರು ನಮ್ಮಿಂದ ಕಿತ್ತುಕೊಂಡಿತು."
ಸುಮಾರು 20 ನಿಮಿಷಗಳ ಆತಂಕದ ನಂತರ, ಸಕುಬಾಯಿ ಮತ್ತು ಮನೋಜ್ ಹತ್ತಿರದ ಎತ್ತರದ ಪ್ರದೇಶವನ್ನು ತಲುಪುವಲ್ಲಿ ಯಶಸ್ವಿಯಾದರು, ಅಲ್ಲಿಂದ ಅವರು ಕೆಳಗೆ ವಿನಾಶಕ್ಕೆ ಸಾಕ್ಷಿಯಾದರು. ಆ ದಿನ ಬೆಳಗ್ಗೆ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ತಾಲ್ಲೂಕಿನ ಗೇಟ್ಸ್ ಖುರ್ದ್ ಗ್ರಾಮದಲ್ಲಿ ವೈತರಣಾ ನದಿಯ ನೀರು ಅವರ ಗುಡಿಸಲು ಸೇರಿದಂತೆ ಇತರ 24 ಗುಡಿಸಲುಗಳನ್ನು ನಾಶಪಡಿಸಿತು. ಹಲವಾರು ಗಂಟೆಗಳ ನಂತರ, ಸಂಜೆ ನೀರು ಇಳಿಯಿತು.
"ಇದು ನನ್ನ ಸಂಸಾರ್ [ಮನೆಯ ವಸ್ತುಗಳು]," ಸಕುಬಾಯಿ ನದಿಯ ಪಕ್ಕದಲ್ಲಿರುವ ತನ್ನ ಶಿಥಿಲವಾದ ಗುಡಿಸಲು ತೋರಿಸುತ್ತಾರೆ. ಒಡೆದ ಹೆಂಚುಗಳು, ಬಿದಿರಿನ ಮೇಲ್ಛಾವಣಿ ಮತ್ತು ಗೋಡೆಗಳ ಅವಶೇಷಗಳು ಮತ್ತು ಹರಿದ ಟಾರ್ಪಾಲಿನ್ ಮೇಲೆ ಕೆಸರು ಹರಡಿಕೊಂಡಿದೆ. ಕೆಸರಿನಲ್ಲಿ ದಿನಗಟ್ಟಲೆ ಬಿದ್ದಿರುವ ಕೊಳೆತ ಅಕ್ಕಿ, ಈರುಳ್ಳಿ, ಆಲೂಗಡ್ಡೆಗಳ ಕಟುವಾದ ವಾಸನೆ ಮೋಡದಂತೆ ಅಲ್ಲೇ ಅಲೆಯುತ್ತಿದೆ. "ನನಗೆ ವಾಸನೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ, ನನಗೆ ಅನಾರೋಗ್ಯವಿದೆ," ಎಂದು ಸಕುಬಾಯಿ ಹೇಳುತ್ತಾರೆ.











