ಪರೈ (ತಮಟೆ) ಸದ್ದಿನೊಂದಿಗೆ ಮೆರವಣಿಗೆ ಆರಂಭಗೊಂಡಿತು.
ಸುಮಾರು 60 ಜನರ ಗುಂಪು "ಜೈ ಭೀಮ್, ಜೈ ಅಂಬೇಡ್ಕರ್ ಜೈ ಭೀಮ್" ಎಂದು ಕೂಗತೊಡಗಿರುತು. ಇದು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಪ್ರತಿ ವರ್ಷ ಡಿಸೆಂಬರ್ 6 ರಂದು ಮುಂಬೈನ ಧಾರಾವಿಯಲ್ಲಿ ನಡೆಯುವ ಮಹಾಪರಿನಿರ್ವಾಣ ಮೆರವಣಿಗೆಯ ಚಿತ್ರ.
ಧಾರಾವಿಯ ಪೆರಿಯಾರ್ ಚೌಕದಲ್ಲಿ ಒಬ್ಬೊಬ್ಬರಾಗಿ ಬಂದು ಜನರು ಮೇಣದಬತ್ತಿಗಳನ್ನು ಬೆಳಗಿಸುತ್ತಾರೆ. ಇದ್ದಕ್ಕಿದ್ದಂತೆ ಮುಂಬೈ ನಗರದಲ್ಲಿರುವ ಏಷ್ಯಾದ ಅತಿದೊಡ್ಡ ಕೊಳೆಗೇರಿ ಸಂಭ್ರಮದಿಂದ ಪುಟಿದೇಳುತ್ತದೆ. ಜೈ ಭೀಮ್ ಫೌಂಡೇಶನ್ ವತಿಯಿಂದ ಮಹಾಪರಿನಿರ್ವಾಣ ದಿವಸ್ (ಅಂಬೇಡ್ಕರ್ ನಿಧನ ಹೊಂದಿದ ದಿನ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಇ. ವಿ. ರಾಮಸ್ವಾಮಿ (ಪೆರಿಯಾರ್) ಚೌಕದಿಂದ ಆರಂಭವಾಗಿ ಸುಮಾರು 1.5 ಕಿಲೋಮೀಟರ್ ವರೆಗೆ ನಡೆದು ಗಣೇಶನ್ ಕೋವಿಲ್ನಲ್ಲಿಇರುವ ಅಂಬೇಡ್ಕರ್ ಪ್ರತಿಮೆಯ ಬಳಿ ಕೊನೆಗೊಳ್ಳುವ ರ್ಯಾಲಿಯು ಸರಿಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತದೆ.
“ಇಂದು ನಮಗೆ ಹಬ್ಬದ ಸಂಭ್ರಮ. ಇಡೀ ಮುಂಬೈ ನಗರ ಏಪ್ರಿಲ್ 14 (ಅಂಬೇಡ್ಕರ್ ಅವರ ಜನ್ಮದಿನ) ಮತ್ತು ಡಿಸೆಂಬರ್ 6 ರಂದು ಮಹಾನ್ ನಾಯಕನನ್ನು ಮತ್ತು ಜಾತಿ ತಾರತಮ್ಯಕ್ಕೊಳಗಾದ ಜನರಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುತ್ತದೆ,” ಎಂದು ಪ್ರತಿಷ್ಠಾನದ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ವೆನ್ನಿಲಾ ಸುರೇಶ್ ಕುಮಾರ್ ಮತ್ತು ಅವರ ಪತಿ ಸುರೇಶ್ ಕುಮಾರ್ ರಾಜು ಹೇಳುತ್ತಾರೆ.. "ನಾವು ದಾರಿಯನ್ನು ನೀಲಿ ಧ್ವಜಗಳಿಂದ ಅಲಂಕರಿಸಿದ್ದೇವೆ. ಮನೆ ಮನೆಗೆ ಹೋಗಿ ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಸೇರಲು ಜನರನ್ನು ಆಹ್ವಾನಿಸುತ್ತೇವೆ."
ನಂತರ ಅವರು ಧಾರಾವಿಯಲ್ಲಿರುವ ಏಕೈಕ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಮ್ಮ ನಾಯಕನ ಕೊಡುಗೆಗಳಿಗೆ ಸಮರ್ಪಿತವಾದ ತಮಿಳು ಹಾಡುಗಳನ್ನು ಹಾಡುವ ಗುಂಪಿನೊಡನೆ ಸೇರುತ್ತಾರೆ.

















