“ಏಳು ತಿಂಗಳಾಯಿತು, ಹಣ್ಣು ಹಾಲು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ, ಈಗ ಹೇಳಿ, ಅದನ್ನು ಹೇಗೆ ಪಡೆಯಲಿ? ಅವರು ನನಗೆ ನದಿಗೆ ಹೋಗಲು ಅವಕಾಶ ನೀಡಿದರೆ, ನಾನು ದೋಣಿ ಸವಾರಿ ಮಾಡುವ ಮೂಲಕ ನನ್ನ ಮಕ್ಕಳಿಗೆ ಮತ್ತು ನನಗೆ ಆಹಾರವನ್ನಾದರೂ ಪಡೆಯಬಹುದು” ಎಂದು ಸುಷ್ಮಾದೇವಿ (ಹೆಸರು ಬದಲಿಸಲಾಗಿದೆ) ಕೈಪಂಪಿನಲ್ಲಿ ತನ್ನ ಸರದಿಗಾಗಿ ಕಾಯುತ್ತಿದ್ದಾಗ ಹೇಳುತ್ತಿದ್ದರು. ಅವರು ಈಗ ಏಳು ತಿಂಗಳ ಗರ್ಭಿಣಿ ಮತ್ತು ವಿಧವೆ.
ಅವರು ದೋಣಿ ಸವಾರಿ ಮಾಡುವುದಾ ಅಂತೀರಾ? 27 ವರ್ಷದ ಸುಷ್ಮಾ ದೇವಿ ನಿಶಾದ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯದ ಗಂಡಸರು ಹೆಚ್ಚಾಗಿ ದೋಣಿ ನಡೆಸುವವರಾಗಿದ್ದಾರೆ. ಅವರಲ್ಲಿ 135 ಮಂದಿ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮಜ್ಗವಾನ್ ಬ್ಲಾಕ್ನಲ್ಲಿರುವ ಕೇವಾತ್ರಾ ಎನ್ನುವ ಊರಿನವರು. ಐದು ತಿಂಗಳ ಹಿಂದೆ ಅಪಘಾತದಲ್ಲಿ ಮೃತಪಡುವವರೆಗೂ ಅವರ 40 ವರ್ಷದ ಪತಿ ವಿಜಯ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಅವರಲ್ಲಿ ಒಬ್ಬರಾಗಿದ್ದರು. ಅವರು ಮದುವೆಯಾಗಿ ಏಳು ವರ್ಷಗಳ ಕಾಲವಾಗಿತ್ತು. ಸುಷ್ಮಾ ಸ್ವತಃ ದೋಣಿಯನ್ನು ನಡೆಸಲು ತರಬೇತಿ ಪಡೆದಿಲ್ಲ, ಆದರೆ ವಿಜಯ್ ಅವರೊಂದಿಗೆ ಕೆಲವು ಬಾರಿ ಸವಾರಿಗೆ ಹೋಗಿದ್ದರಿಂದ ಈ ಕೆಲಸ ಮಾಡಬಹುದು ಎನ್ನುವ ವಿಶ್ವಾಸವಿದೆ.
ಲಾಕ್ಡೌನ್ನಿಂದಾಗಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ನಡುವೆ ಚಿತ್ರಕೂಟದ ಈ ಪ್ರದೇಶವನ್ನು ವಿಭಜಿಸುವ ಮಂದಾಕಿನಿ ನದಿಯ ಈ ಪ್ರದೇಶದಲ್ಲಿ ಒಂದೇ ಒಂದು ದೋಣಿಯೂ ಸಂಚರಿಸುತ್ತಿಲ್ಲ.
ಸೂರ್ಯಾಸ್ತದ ಒಂದು ಗಂಟೆಯ ನಂತರ ನಾವು ಮೊದಲ ಬೀದಿ ದೀಪವನ್ನು ಕೇವತ್ರಾಕ್ಕೆ ಸಾಗುವ ದಾರಿಯಲ್ಲಿ ನೋಡಿದೆವು. ಸುಷ್ಮಾ ತಮ್ಮ ಕಿರಿಯ ಮಗುವಿನೊಂದಿಗೆ ಗ್ರಾಮದ ಕೈಪಂಪ್ಗೆ ಪ್ಲಾಸ್ಟಿಕ್ ಬಕೆಟ್ನಲ್ಲಿ ನೀರು ತರಲೆಂದು ಬಂದಿದ್ದರು. ಅಲ್ಲಿ ನಾವು ಅವರನ್ನು ಭೇಟಿಯಾದೆವು.
ನಿಶಾದರು ಮಂದಾಕಿನಿ ನದಿಯಲ್ಲಿ ದೋಣಿಗಳನ್ನು ನಡೆಸುವ ಮೂಲಕ ತಮ್ಮ ಜೀವನೋಪಾಯದ ದುಡಿಮೆಯನ್ನು ಸಂಪಾದಿಸುತ್ತಾರೆ. ಚಿತ್ರಕೂಟವು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ದೀಪಾವಳಿ ಋತುವಿನಲ್ಲಿ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಮಂದಾಕಿನಿ ನದಿ ತಟದಲ್ಲಿನ ರಾಮಘಾಟ್ನ ನಿಶಾದ್ ದೋಣಿಗಳು ಕೇವತ್ರಾದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಭಾರತ್ ಘಾಟ್ ಮತ್ತು ಗೋಯೆಂಕಾ ಘಾಟ್ನಂತಹ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ದೋಣಿಯಲ್ಲಿ ಕರೆದೊಯ್ಯುತ್ತವೆ.
ಆ ಸಂದರ್ಭದಲ್ಲಿ ನಿಶಾದ್ ಸಮುದಾಯಗಳು ವರ್ಷದಲ್ಲಿ ಹೆಚ್ಚಿನ ಸಂಪಾದನೆ ಮಾಡುತ್ತಾರೆ. ಪ್ರತಿದಿನಕ್ಕೆ ಅವರು ಆಗ 600 ರೂ.ಗಳನ್ನು ಸಂಪಾದಿಸುತ್ತಾರೆ. ಇದು ಆ ಋತುವಿನ ಆಚೆ ಅವರು ಗಳಿಸುವ ದೈನಂದಿನ ದುಡಿಮೆಯ 2-3 ಪಟ್ಟು ಅಧಿಕವಾಗಿರುತ್ತದೆ.






