ಇಂದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದಂದು, ಪರಿಯಲ್ಲಿ ಬೀಡ್ ಜಿಲ್ಲೆಯ ಮಜಲ್ ಗಾಂವ್ ನ ವಾಲ್ಹಾಬಾಯಿ ತಕಂಖರ್ ಮತ್ತು ರಾಧಾಬಾಯಿ ಬೋರ್ಡೆಯವರ ಎರಡು ಜೋಡಿ ಬೀಸುಕಲ್ಲಿನ ಪದಗಳನ್ನು ಇಲ್ಲಿ ನೀಡಲಾಗಿದೆ. ಈ ಆತ್ಮಗೌರವದ ಹಾಡುಗಳು, ತಮ್ಮ ನಾಯಕನ ಮೇಲಿನ ವಾತ್ಸಲ್ಯ, ಸಮೃದ್ಧಿ ಮತ್ತು ಸಂತೋಷವನ್ನು ಸಾರುತ್ತವೆ. ಈ ಹಾಡುಗಳು ಡಾ. ಅಂಬೇಡ್ಕರ್ ಮತ್ತು ಜಾತಿ ವಿಷಯಗಳ ಬಗ್ಗೆ ಪರಿಯಲ್ಲಿ ಪ್ರಕಟವಾಗುತ್ತಿರುವ ಏಪ್ರಿಲ್ ತಿಂಗಳ ದ್ವಿಪದಿಗಳ ಸರಣಿಯ ಒಂದು ಭಾಗವಾಗಿದೆ.
ಏಪ್ರಿಲ್ ಆರಂಭದಲ್ಲಿ ನಾವು ಮಜಲ್ಗಾಂವ್ನಲ್ಲಿರುವ ವಲ್ಹಬಾಯಿ ತಕಂಖರ್ ಅವರ ಮನೆಗೆ ಹೋದಾಗ, 21 ವರ್ಷಗಳ ಹಿಂದೆ 1996ರಲ್ಲಿ ನಮ್ಮ 'ಗ್ರೈಂಡ್ಮಿಲ್ ಸಾಂಗ್ಸ್ ಪ್ರಾಜೆಕ್ಟ್' ತಂಡಕ್ಕಾಗಿ ಅವರು ಹಾಡಿದ್ದ ಹಾಡುಗಳನ್ನು ನೆನಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಬೀಸುಕಲ್ಲಿನಲ್ಲಿ ಬೀಸುವಾಗ ಮಾತ್ರ ಆ ಹಾಡುಗಳು ನೆನಪಾಗುತ್ತವೆ ಎಂದರು.
ಇದರ ನಂತರ, ಅವರ ಸೊಸೆ ಒಂದು ತಟ್ಟೆಯಲ್ಲಿ ಗೋಧಿಯನ್ನು ತಂದು ಹಳೆಯ ಬೀಸುಕಲ್ಲು ಜೋಡಿಸಿ ವ್ಯವಸ್ಥೆ ಮಾಡಲು ಪ್ರಾರಂಭಿಸಿದರು. ನಂತರ, ವಲ್ಹಬಾಯಿ ನೆಲದ ಮೇಲೆ ಕುಳಿತು ಬೀಸುಕಲ್ಲಿಗೆ ಧಾನ್ಯವನ್ನು ಸೇರಿಸಿ ತಿರುಗಿಸಲು ಪ್ರಾರಂಭಿಸಿದರು; ಬೀಸುಕಲ್ಲನ್ನು ತಿರುಗಿಸತೊಡಗಿದಂತೆ ಅವರಿಗೆ ಕೆಲವು ಹಾಡುಗಳು ನೆನಪಿಗೆ ಬಂದವು. ಬೀಸುಕಲ್ಲು ಎರಡು ವರ್ತುಲಾಕಾರದ ಕಲ್ಲುಗಳನ್ನು ಹೊಂದಿರುತ್ತದೆ. ಕಲ್ಲನ್ನು ಒಂದರ ಮೇಲೊಂದು ಇರಿಸಿ ಮೇಲಿನ ಕಲ್ಲಿಗೆ ಗೂಟವೊಂದನ್ನು ಹಾಕಿರಲಾಗುತ್ತದೆ. ಅದನ್ನು ಹಿಡಿದು ಕಲ್ಲನ್ನು ತಿರುಗಿಸಿ ಧಾನ್ಯವನ್ನು ಬೀಸಲಾಗುತ್ತದೆ.
ವಲ್ಹಬಾಯಿ ಹಾಡಿದ ಹಾಡುಗಳನ್ನು ಇಲ್ಲಿ ಪರಿಚಯಿಸಲಾಗಿದೆ, ಜೊತೆಗೆ ರಾಧಾಬಾಯಿ ಬೋರ್ಡೆ ಹಾಡಿದ ಹಾಡುಗಳು ಸಹ ನಮ್ಮ ಓದುಗರಿಗೆ ಲಭ್ಯವಿದೆ. ಈ ಹಾಡುಗಳು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನದ ಹಲವು ಪ್ರಮುಖ ಘಟನೆಗಳನ್ನು ನಿರೂಪಿಸುತ್ತವೆ. 1996ರಲ್ಲಿ, ಈ ಹಾಡುಗಳನ್ನು ಧ್ವನಿಮುದ್ರಿಸಿದಾಗ, ವಲ್ಹಬಾಯಿ ಮತ್ತು ರಾಧಾಬಾಯಿ ಮಜಲ್ಗಾಂವ್ನ ಭೀಮ್ ನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಈಗ ರಾಧಾಬಾಯಿ ಈ ತಾಲ್ಲೂಕಿನ ಸಾವರ್ಗಾಂವ್ನಲ್ಲಿ ವಾಸಿಸುತ್ತಿದ್ದಾರೆ.
ಮಜಲ್ಗಾಂವ್ನ ಭೀಮ್ ನಗರವು ದಲಿತರೇ ಹೆಚ್ಚಾಗಿ ವಾಸಿಸುವ ಕಾಲೋನಿಯಾಗಿದೆ. ಈ ಗ್ರಾಮವು 'ಗ್ರೈಂಡ್ಮಿಲ್ ಸಾಂಗ್ಸ್ ಪ್ರಾಜೆಕ್ಟ್ಗೆ' ಒಂದು ಉತ್ತಮ ಮೂಲವಾಗಿದೆ, ಅಲ್ಲಿ ದೇಶದ ಸಂವಿಧಾನ ರಚನೆಕಾರ, ಶ್ರೇಷ್ಠ ರಾಜಕಾರಣಿ ಮತ್ತು ದೀನದಲಿತರ ದನಿಯಾದ ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ಹಾಡುಗಳ ಖಜಾನೆಯಿದೆ. ಬಾಬಾಸಾಹೇಬ್ ಅವರ ಜಯಂತಿಯನ್ನು ಏಪ್ರಿಲ್ 14ರಂದು ಆಚರಿಸಲಾಗುತ್ತದೆ. ಈ ನೆಪದಲ್ಲಿ ಬಾಬಾಸಾಹೇಬರನ್ನು ನೆನಪಿಸಿಕೊಳ್ಳುತ್ತಾ, ಪರಿ ಈ ಇಡೀ ತಿಂಗಳು ನಿಮಗೆ ಜಾತಿ ವ್ಯವಸ್ಥೆಯಿಂದಾಗಿ ಎದುರಿಸುತ್ತಿರುವ ತೊಂದರೆಗಳನ್ನು ಮತ್ತು ವಂಚಿತರ ಧ್ವನಿಯನ್ನು ವಿವರಿಸುವ ಹಾಡುಗಳನ್ನು ದನಿ ಡಾ.ಅಂಬೇಡ್ಕರ್ ಅವರ ಕಥೆಯನ್ನು ಪ್ರಸ್ತುತಪಡಿಸಲಿದ್ದೇವೆ.




